ಸಿಗರೇಟ್ ಸೇದಿದವರ ವಿರುದ್ದ ಕ್ರಮಕ್ಕೆ ತಿಳಿಸಿದ ಜಡ್ಜ್ ಜೊತೆ ಅನುಚಿತ ವರ್ತನೆ: ಪೊಲೀಸ್ ಸಸ್ಪೆಂಡ್
ಹಾಸನ: ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ತಿಳಿಸಿದ ನ್ಯಾಯಾಧೀಶರ ಜೊತೆಯೇ ಅನುಚಿತ ವರ್ತನೆ ತೋರಿದ ಪೊಲೀಸ್ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.
ಸಿಗರೇಟ್ ಸೇದುವವರ ವಿರುದ್ಧ ಕ್ರಮ ಕೈಗೊಳ್ಳದೇ ಈ ಬಗ್ಗೆ ಕ್ರಮಕ್ಕೆ ಸೂಚಿಸಿದ ನ್ಯಾಯಾಧೀಶರ ಜೊತೆ ಅನುಚಿತವಾಗಿ ವರ್ತಿಸಿ ಉಡಾಫೆ ನಡವಳಿಕೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆಯ ವ್ಯಾಪ್ತಿಯ ಅ.ನ.ಕೃಷ್ಣರಾವ್ ವೃತ್ತದಲ್ಲಿ ಈ ಘಟನೆ ನಡೆದಿದೆ. ಈ ವೃತ್ತದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿ ಇದ್ದ ಇಆರ್ಎಸ್ಎಸ್ (ERSS) ಪೊಲೀಸ್ ಸಿಬ್ಬಂದಿ ಜಗದೀಶ್ ಅಮಾನತಾದ ಆರೋಪಿ.
ಆಗಿದ್ದೇನು..?
ಅನಕೃ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಸಿಗರೇಟು ಸೇದುತ್ತಿದ್ದವರು. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಸಿಬ್ಬಂದಿ ಜಗದೀಶ್ ಅವರಿಗೆ ಸ್ಥಳೀಯ ನ್ಯಾಯಾಧೀಶರಾದ ಲೋಕೇಶ್ ಸೂಚಿಸಿದ್ದರು. ಆದರೆ, ಜಗದೀಶ್ ನ್ಯಾಯಾಧೀಶರ ಸೂಚನೆಯನ್ನು ನಿರ್ಲಕ್ಷಿಸಿ, ಉದ್ದಟತನದಿಂದ ವರ್ತಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ನ್ಯಾಯಾಧೀಶರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸ್ ಸಿಬ್ಬಂದಿ ಜಗದೀಶ್ ನ್ಯಾಯಾಧೀಶರ ಮೊಬೈಲ್ ಫೋನನ್ನೇ ವಶಪಡಿಸಲು ಮುಂದಾಗಿದ್ದಾರೆ.
ಸ್ಥಳದಲ್ಲಿದ್ದ ನ್ಯಾಯಾಲಯದ ಸಿಬ್ಬಂದಿ ಮತ್ತು ಇತರರು ಮಧ್ಯಪ್ರವೇಶಿಸಿ ಬುದ್ಧಿ ಮಾತು ಹೇಳಿದರೂ ಪೊಲೀಸ್ ಸಿಬ್ಬಂದಿ ಜಗದೀಶ್, ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಅದಕ್ಕೆ ಸಮರ್ಥನೆ ನೀಡಲು ಮುಂದಾಗಿದ್ದರು.
ಪೊಲೀಸ್ ಸಿಬ್ಬಂದಿ ಸಸ್ಪೆಂಡ್.
ನ್ಯಾಯಾಂಗದ ಪ್ರತಿನಿಧಿಯಾದ ನ್ಯಾಯಾಧೀಶರೊಂದಿಗೆ ಅಸಭ್ಯವಾಗಿ ವರ್ತಿಸಿ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿರುವುದು. ಕರ್ತವ್ಯದ ಸಮಯದಲ್ಲಿ ಇಆರ್ಎಸ್ಎಸ್ ವಾಹನವನ್ನು ಬಳಸದೇ, ಖಾಸಗಿ ವಾಹನದಲ್ಲಿ ತೆರಳಿರುವುದು. ಹಾಗೂ ವೃತ್ತಿಪರ ಮೌಲ್ಯಗಳನ್ನು ಮರೆತು ಬೇಜವಾಬ್ದಾರಿತನ ತೋರಿರುವುದು. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನ್ವಯ ಜಗದೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
