ಅಕ್ಟೋಬರ್ ನಿಂದ ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಸಾಧ್ಯತೆ
ಕರಾವಳಿಯ ಸ್ಥಳೀಯ ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಹಾಗೂ ದೂರದ ಬೆಂಗಳೂರಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಅತ್ಯಂತ ಅಗತ್ಯವಾಗಿರುವ ಹೈಕೋರ್ಟ್ ಸಂಚಾರಿ ಪೀಠ ಅಕ್ಟೋಬರ್ ನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಹೌದು, ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ (Circuit Bench) ಸ್ಥಾಪನೆಯಾಗುವುದು ಬಹುತೇಕ ಖಚಿತವಾಗಿದ್ದು, ಇದೇ ಅಕ್ಟೋಬರ್ನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರವು ಈ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ನ ಸಂಚಾರಿ ಪೀಠವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ಈ ಪೀಠವನ್ನು ಆರಂಭಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಸ್ತುತ 2026ರ ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಕರಾವಳಿ ಭಾಗದ ಜನರಿಗೆ ತ್ವರಿತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಬೇಕೆಂದು ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ, ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಪತ್ರ ಬರೆದಿದ್ದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಕ್ರು ಅವರು 2026ರ ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ ಇಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಲಿದ್ದರು.
ಪೀಠಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡು ಅಕ್ಟೋಬರ್ 2026 ರ ವೇಳೆಗೆ ಪೀಠವು ಕಾರ್ಯಾರಂಭ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ತಾತ್ಕಾಲಿಕ ಕಟ್ಟಡ.
ಸದ್ಯಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ಹಳೆಯ ಜಿಲ್ಲಾಧಿಕಾರಿ (DC) ಕಚೇರಿಯ 50,000 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಪೀಠವನ್ನು ಆರಂಭಿಸಲು ಗುರುತಿಸಲಾಗಿದ್ದು. ಲೋಕೋಪಯೋಗಿ ಇಲಾಖೆ (PWD) ಮೂಲಕ ಇದರ ನವೀಕರಣ ಕಾರ್ಯ ನಡೆಯಲಿದೆ.
ಸಂಚಾರಿ ಪೀಠಕ್ಕೆ ನಿಯೋಜನೆಗೊಳ್ಳಲಿರುವ ಸುಮಾರು 4 ನ್ಯಾಯಾಧೀಶರ ವಸತಿಗಾಗಿ ನಗರದ ಲಾಲ್ಬಾಗ್ ಪ್ರದೇಶದಲ್ಲಿರುವ ಐಎಎಸ್ ಅಧಿಕಾರಿಗಳ ಕ್ಯಾರ್ಟಸ್್ರ ಅವರಣದಲ್ಲಿ ಜಾಗ ಗುರುತಿಸಲಾಗಿದೆ.
ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಹೈಕೋರ್ಟ್ ಸಿಜೆ ಅವರಿಗೆ ಬರೆದಿರುವ ಅಧಿಕೃತ ಪತ್ರದ ಬೆನ್ನಲ್ಲೇ ಈ ಪ್ರಕ್ರಿಯೆಗಳು ತೀವ್ರಗತಿ ಪಡೆದುಕೊಂಡಿದ್ದು. ಈ ವರ್ಷದ ದಸರಾ ಅಥವಾ ಅಕ್ಟೋಬರ್ ವೇಳೆಗೆ ಕರಾವಳಿ ಜನರ ಈ ಬಹುಕಾಲದ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ.
ಈ ಸಂಚಾರಿ ಪೀಠದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳು
ಮಂಗಳೂರಿನಲ್ಲಿ ಸಂಚಾರಿ ಪೀಠ ಆರಂಭವಾದರೆ ಕರಾವಳಿ ಮತ್ತು ಮಲೆನಾಡು ಭಾಗದ ಒಟ್ಟು 5 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಚಿಕ್ಕಮಗಳೂರು ಕೊಡಗು. ಪ್ರಸ್ತುತ ಈ ಜಿಲ್ಲೆಗಳ ಸಾರ್ವಜನಿಕರು ಮತ್ತು ವಕೀಲರು ಸಣ್ಣ ಹೈಕೋರ್ಟ್ ಕೆಲಸಗಳಿಗೂ ಬೆಂಗಳೂರಿಗೆ ಅಲೆಯಬೇಕಾಗಿದ್ದು, ಆರ್ಥಿಕ ಹಾಗೂ ಸಮಯದ ನಷ್ಟವಾಗುತ್ತಿದೆ. ಸಂಚಾರಿ ಪೀಠದಿಂದಾಗಿ ತ್ವರಿತ ಮತ್ತು ಕೈಗೆಟುಕುವ ನ್ಯಾಯ ಸಿಗಲಿದೆ. ಆದಾಗ್ಯೂ. ಈ ಪೀಠದ ಅಂತಿಮ ವ್ಯಾಪ್ತಿಯ ನಿರ್ಧಾರವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ತೆಗೆದುಕೊಳ್ಳಲಿದ್ದಾರೆ.
ಮುಂದಿನ ದಿನಗಳಲ್ಲಿ ಇದನ್ನು ‘ಶಾಶ್ವತ ಪೀಠವನ್ನಾಗಿ (Permanent Bench) ಪರಿವರ್ತಿಸುವ ಉದ್ದೇಶವಿದ್ದು, ಅದಕ್ಕಾಗಿ ಹಳೆಯ ಜೈಲು ಅವರಣ ಅಥವಾ ಮುಲ್ಕಿ ಬಳಿಯ 100 ಎಕರೆ ಜಾಗವನ್ನು ಬಳಸಿಕೊಳ್ಳುವ ಭವಿಷ್ಯದ ಯೋಜನೆಯೂ ಇದೆ.
AAB ಇಂದ ವಿರೋಧ.
ಬೆಂಗಳೂರು ವಕೀಲರ ಸಂಘವು (Advocates’ Association Bengaluru – AAB) ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸಂಘದ ಪದಾಧಿಕಾರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರಿಗೆ ಅಧಿಕೃತ ಪತ್ರ ಬರೆದು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು ವಕೀಲರ ಸಂಘದ (AAB) ಮುಖ್ಯ ಬೇಡಿಕೆ:
ಬೆಂಗಳೂರು ವಕೀಲರ ಸಂಘವು, ಬೆಂಗಳೂರು, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕಾರವಾರದ ಬಾರ್ ಅಸೋಸಿಯೇಷನ್ಗಳನ್ನು ಒಳಗೊಂಡಂತೆ ಎಲ್ಲಾ ಪಾಲುದಾರರೊಂದಿಗೆ (Stakeholders) ಸಮಾಲೋಚನೆ ನಡೆಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಮತ್ತು ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಬಲವಾಗಿ ಒತ್ತಾಯಿಸಿದೆ.
ಬೆಂಗಳೂರು ವಕೀಲರ ಸಂಘದ (AAB) ವಿರೋಧಕ್ಕೆ ಕರಾವಳಿ ಭಾಗದ ವಕೀಲರು ತೀವ್ರ ಪ್ರತ್ಯುತ್ತರ ನೀಡಿದ್ದು, ತಮ್ಮ ಬೇಡಿಕೆಯನ್ನು ನ್ಯಾಯಸಮ್ಮತವಾಗಿ ಮಂಡಿಸಲು ಹೊಸ ಹೋರಾಟದ ಹಾದಿಯನ್ನು ರೂಪಿಸುತ್ತಿದ್ದಾರೆ.
ಮಂಗಳೂರು ಮತ್ತು ಕರಾವಳಿ ಭಾಗದ ವಕೀಲರ ಪ್ರಮುಖ ವಾದಗಳು ಹಾಗೂ ಮುಂದಿನ ನಡೆಗಳ ವಿವರ ಇಲ್ಲಿದೆ:
ಮಂಗಳೂರು ವಕೀಲರ ಸಂಘದ (MBA) ಬಲವಾದ ಪ್ರತ್ಯುತ್ತರ ಹೀಗಿದೆ
ಬೆಂಗಳೂರು ವಕೀಲರ ವಾದಗಳನ್ನು ಕರಾವಳಿ ವಕೀಲರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಈ ಕೆಳಗಿನ ಪ್ರಮುಖ ಕಾರಣಗಳನ್ನು ಮುಂದಿಟ್ಟಿದ್ದಾರೆ:
ಪ್ರಕರಣಗಳ ಸಂಖ್ಯೆ ಹೆಚ್ಚು:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದಲೇ ಬೆಂಗಳೂರು ಹೈಕೋರ್ಟ್ನಲ್ಲಿ ಸಾವಿರಾರು ಅಪೀಲು ಮತ್ತು ರಿಟ್ ಅರ್ಜಿಗಳು ದಾಖಲಾಗುತ್ತಿವೆ. ಹಾಗಾಗಿ ‘ಅಂಕಿ-ಅಂಶಗಳಿಲ್ಲ’ ಎಂಬ ವಾದ ತಪ್ಪು ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ಜನರಿಗೆ ಆರ್ಥಿಕ ಹೊರೆ:
ಕರಾವಳಿಯ ಕಡು ಬಡವರು, ಕಾರ್ಮಿಕರು ಸಣ್ಣ ಕೆಲಸಗಳಿಗೂ ಬೆಂಗಳೂರಿಗೆ ಪ್ರಯಾಣ ಬೆಳೆಸಿ, ಅಲ್ಲಿ ವಾಸವಿದ್ದು ಕೋರ್ಟ್ ವೆಚ್ಚ ಭರಿಸುವುದು ದುಬಾರಿಯಾಗಿದೆ. ಮಂಗಳೂರಿನಲ್ಲಿ ಪೀಠವಾದರೆ ಬಡವರಿಗೆ “ಮನೆಯ ಬಾಗಿಲಿಗೇ ನ್ಯಾಯ” ಸಿಕ್ಕಂತಾಗುತ್ತದೆ ಧಾರವಾಡ, ಕಲಬುರಗಿ ಮಾದರಿ:
ಈ ಹಿಂದೆ ಉತ್ತರ ಕರ್ನಾಟಕದ ಧಾರವಾಡ ಮತ್ತು ಕಲಬುರಗಿಯಲ್ಲಿ ಸಂಚಾರಿ ಪೀಠಗಳನ್ನು ಸ್ಥಾಪಿಸುವಾಗಲೂ ಬೆಂಗಳೂರು ವಕೀಲರು ಇದೇ ರೀತಿ ವಿರೋಧಿಸಿದ್ದರು. ಆದರೆ ಇಂದು ಆ ಪೀಠಗಳು ಯಶಸ್ವಿಯಾಗಿ ನಡೆದು ಆ ಭಾಗದ ಜನರಿಗೆ ಹತ್ತಿರವಾಗಿವೆ. ಅದೇ ಮಾದರಿ ಮಂಗಳೂರಿಗೂ ಅನ್ವಯಿಸಬೇಕು ಎಂಬುದು ಇಲ್ಲಿನವರ ವಾದ. ಒಟ್ಟಾರೆ ಅಂದುಕೊಂಡಂತೆ ಆದರೆ ಅಕ್ಟೋಬರ್ ವೇಳೆಗೆ ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಮಾಡಲಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
