30/07/2026

Law Guide Kannada

Online Guide

ನೋಂದಾಯಿತ ಗಿಫ್ಟ್ ಡೀಡ್ ಇಲ್ಲದೆ ಉಡುಗೊರೆ ಮಾನ್ಯವಲ್ಲ- ಹೈಕೋರ್ಟ್

ಪಾಟ್ನಾ: ನೋಂದಾಯಿತ ಉಡುಗೊರೆ ಪತ್ರ ಇಲ್ಲದೆ ಉಡುಗೊರೆ ಮಾನ್ಯವಲ್ಲ. ಗಿಫ್ಟ್ ಡೀಡ್ ನೋಂದಾಯಿಸಿದರೆ ಮಾತ್ರ ‘ಉಡುಗೊರೆ’ ಮಾನ್ಯವಾಗುತ್ತದೆ ಎಂದು ಪಾಟ್ನಾ ಹೈಕೋರ್ಟ್ ತೀರ್ಪು ನೀಡಿದ್ದು, ಮೌಖಿಕ ಉಡುಗೊರೆಯ ಆಧಾರದ ಮೇಲೆ ಭೂಮಿಯ ಮೇಲಿನ ರಾಜ್ಯದ ಹಕ್ಕಿನ ವಾದವನ್ನು ತಳ್ಳಿ ಹಾಕಿದೆ.

ಪಾಟ್ನಾ ಹೈಕೋರ್ಟ್ ಏಕಸದಸ್ಯ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಲೆಟರ್ಸ್ ಪೇಟೆಂಟ್ ಅಪೀಲ್ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿಬೇಕ್ ಚೌಧುರಿ ಮತ್ತು ರಾಣಾ ವಿಕ್ರಮ್ ಸಿಂಗ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ತೀರ್ಪು ನೀಡಿದೆ.

ಖಾಸಗಿ ಭೂಮಿಯ ಮಾಲೀಕತ್ವದ ವಿವಾದವನ್ನು ನಿರ್ಧರಿಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಸೇರಿದ್ದು, ಇಂತಹ ವಿವಾದಗಳನ್ನು ರಿಟ್ ಅರ್ಜಿಯಲ್ಲಿ ನಿರ್ಧರಿಸಲಾಗುವುದಿಲ್ಲ. ಆದ್ದರಿಂದ, ರಿಟ್ ಅರ್ಜಿ ನಿರ್ವಹಣೆ ಯೋಗ್ಯವಲ್ಲ ಎಂದು ಹೇಳಿ, ಸಂಬಂಧಪಟ್ಟ ಪಕ್ಷಗಳನ್ನು ಸಿವಿಲ್ ದಾವೆ ಹೂಡಲು ನ್ಯಾಯಪೀಠ ಸೂಚಿಸಿತು.

ಸಿವಿಲ್ ನ್ಯಾಯಾಲಯದಲ್ಲಿ ತನ್ನ ಮಾಲೀಕತ್ವವನ್ನು ಸಾಬೀತುಪಡಿಸಿದ ನಂತರ, ಭೂಮಿಯನ್ನು ಮರಳಿ ಪಡೆಯಲು ಅಥವಾ ಪರಿಹಾರಧನ ಪಡೆಯಲು ಭೂಮಿಯ ಮಾಲೀಕರಿಗೆ ಸ್ವಾತಂತ್ರ್ಯ ನೀಡಿದ ನ್ಯಾಯಾಲಯ, ಸರ್ಕಾರವು ಕಾನೂನುಬಾಹಿರವಾಗಿ ಯಾರನ್ನಾದರೂ ಅವರ ಆಸ್ತಿಯಿಂದ ಹೊರಹಾಕಿದ್ದರೆ, ಅಂತಹ ದಾವೆ ಸಲ್ಲಿಸಲು 30 ವರ್ಷಗಳ ಮಿತಿಯ ಅವಧಿ (Limitation Period) ಅನ್ವಯಿಸುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ. ಸರ್ಕಾರವು ಕಾನೂನು ಬಾಹಿರವಾಗಿ ವ್ಯಕ್ತಿಯನ್ನು ಆಸ್ತಿಯಿಂದ ಹೊರಹಾಕಿದಲ್ಲಿ, ಅಂತಹ ದಾವೆಗೆ 30 ವರ್ಷಗಳ ಮಿತಿಯ ಅವಧಿ ಅನ್ವಯಿಸುತ್ತದೆ.” ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, ಯಾವುದೇ ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ಅಥವಾ ಸೂಕ್ತ ಪರಿಹಾರ ನೀಡದೆ. ಗ್ರಾಮೀಣ ಪ್ರದೇಶದ ವ್ಯಕ್ತಿಯ ಖಾಸಗಿ ಆಸ್ತಿಯನ್ನು ಸರ್ಕಾರ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ಭಾರತದ ಸಂವಿಧಾನದ ಅನುಚ್ಛೇದ 300ಎ ಹಾಗೂ ಅನುಚ್ಛೇದ 21ರಿಂದ ರಕ್ಷಿಸಲ್ಪಟ್ಟಿರುವ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ
‘ಜಲ್ ನಲ್ ಯೋಜನೆ’ ಅಡಿಯಲ್ಲಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ನಿರ್ಮಾಣಕ್ಕಾಗಿ, ಭೂಸ್ವಾಮಿಯ ಒಪ್ಪಿಗೆ ಪಡೆಯದೇ ಅಥವಾ ಭೂಸ್ವಾಧೀನ ಪ್ರಕ್ರಿಯೆ ಅನುಸರಿಸದೇ ತಮ್ಮ ಜಮೀನಿನಲ್ಲಿ ಕಾಮಗಾರಿ ನಡೆಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿದಾರರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರವು, ವಿವಾದಿತ ಭೂಮಿಯನ್ನು ಅರ್ಜಿದಾರರ ಪೂರ್ವಜರು ಮೌಖಿಕ ಉಡುಗೊರೆಯ ಮೂಲಕ ಸರ್ಕಾರಕ್ಕೆ ನೀಡಿದ್ದರು ಎಂದು ವಾದಿಸಿತು. ಅಲ್ಲದೆ, ಆ ಭೂಮಿ ಈಗಾಗಲೇ ಶೀರ್ಷಿಕೆ (Title) ಸಂಬಂಧಿತ ದಾವೆಯ ವಿಷಯವಾಗಿದೆ ಎಂದು ತಿಳಿಸಿತು.

ಅರ್ಜಿದಾರರ ಪೂರ್ವಜರು ಮೌಖಿಕ ಉಡುಗೊರೆಯ ಮೂಲಕ ಭೂಮಿಯನ್ನು ಸರ್ಕಾರಕ್ಕೆ ವರ್ಗಾಯಿಸಿದ್ದಾರೆ ಎಂದು ಏಕಸದಸ್ಯ ನ್ಯಾಯಾಧೀಶರು ಪರಿಗಣಿಸಿದ್ದು ಸರಿಯಲ್ಲ. “ಉಡುಗೊರೆಯ ಮೂಲಕ ಆಸ್ತಿ ವರ್ಗಾವಣೆ ‘ಆಸ್ತಿ ವರ್ಗಾವಣೆ ಕಾಯ್ದೆಗೆ ಒಳಪಟ್ಟಿದ್ದು, ಅದು ಮಾನ್ಯವಾಗಬೇಕಾದರೆ ನೋಂದಾಯಿತ ಉಡುಗೊರೆ ಪತ್ರ ಕಡ್ಡಾಯವಾಗಿರಬೇಕು. ಜೊತೆಗೆ, ದಾನಿಯು ಸ್ವಯಂಪ್ರೇರಿತವಾಗಿ ಆಸ್ತಿಯನ್ನು ಹಸ್ತಾಂತರಿಸುವ ಉದ್ದೇಶ ಹೊಂದಿರಬೇಕು ಮತ್ತು ಸ್ವೀಕರಿಸುವವರು ಅದನ್ನು ಅಂಗೀಕರಿಸಿರಬೇಕು ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ನೋಂದಾಯಿತ ಉಡುಗೊರೆ ಪತ್ರದ ಜಾರಿ ಮತ್ತು ಅದರ ಸ್ವೀಕಾರ ನಡೆದಿದೆಯೇ ಎಂಬುದು ವಾಸ್ತವಾಂಶಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದ್ದು, ಅದನ್ನು ರಿಟ್ ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

ವಿವಾದಿತ ಭೂಮಿ ಈಗಾಗಲೇ ವಿಭಜನೆ (Partition) ದಾವೆಯ ವಿಷಯವಾಗಿರುವುದರಿಂದ, ಅಂತಿಮ ಡಿಕ್ರಿ ಹೊರಬರುವವರೆಗೆ ಅರ್ಜಿದಾರರ ಏಕೈಕ ಮಾಲೀಕತ್ವವನ್ನು ಸ್ಥಾಪಿಸಲಾಗಿದೆ ಎಂದು ಹೀಗಾಗಿ, ಸಿವಿಲ್ ನ್ಯಾಯಾಲಯದಲ್ಲಿ ತನ್ನ ಮಾಲೀಕತ್ವವನ್ನು ಸ್ಥಾಪಿಸಿದ ನಂತರ ಮಾತ್ರ. ಅರ್ಜಿದಾರರು ಭೂಮಿಯನ್ನು ಮರಳಿ ಪಡೆಯಲು ಅಥವಾ ಸೂಕ್ತ ಪರಿಹಾರಧನ ಪಡೆಯಲು ಕ್ರಮ ಕೈಗೊಳ್ಳಬಹುದು ಎಂದು ಹೇಳಿ ಮೇಲ್ಮನವಿಯನ್ನು ನ್ಯಾಯಪೀಠವು ವಿಲೇವಾರಿ ಮಾಡಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.