30/07/2026

Law Guide Kannada

Online Guide

ರಾಗಿಮುದ್ದೆ, ದೋಸೆ ಮಾಡಿಕೊಡು ಎನ್ನುವುದು ತಪ್ಪೇ? ವರದಕ್ಷಿಣೆ ಕಿರುಕುಳ, ಕ್ರೌರ್ಯದ ಆರೋಪ ಹೊರಿಸಲಾಗದು – ಹೈಕೋರ್ಟ್

ಬೆಂಗಳೂರು: ‘ರಾಗಿಮುದ್ದೆ, ದೋಸೆ ಮಾಡಿಕೊಡು ಎಂದು ಅತ್ತೆ ಕೇಳುವುದು ತಪ್ಪೇ? ಇದರ ಆಧಾರದಲ್ಲಿ ಪತಿಯ ತಾಯಿ, ತಂದೆ ಮತ್ತು ಇತರ ಸಂಬಂಧಿಕರ ವಿರುದ್ಧ ವರದಕ್ಷಿಣೆ ಕಿರುಕುಳ, ಕ್ರೌರ್ಯದ ಆರೋಪ ಹೊರಿಸಲಾಗದು ಎಂದು ಮಹಿಳೆಯೊಬ್ಬರ ವಾದಕ್ಕೆ ಕರ್ನಾಟಕ ಹೈಕೋರ್ಟ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿತು.

ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಪ್ರಕರಣ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ವಾದ ಮಂಡಿಸಿದ ಮಹಿಳೆ, ಮನೆಯಲ್ಲಿ ಪತಿಗೆ ಪೌಷ್ಟಿಕ ಆಹಾರ ನೀಡಿ, ನನಗೆ ನೀಡುತ್ತಿರಲಿಲ್ಲ. ಪತಿ ಊಟ ಮುಗಿಸುವವರೆಗೆ ನನ್ನನ್ನು ಕಾಯಿಸುತ್ತಿದ್ದರು. ಮೀರಾ ಶಾಂಪೂ ಬದಲು ಡೌ ಶಾಂಪೂ ಬಳಸುವಂತೆ ಪತಿ ಪೀಡಿಸುತ್ತಿದ್ದ. ಇದರಿಂದ ನನಗೆ ತೀವ್ರ ಮಾನಸಿಕ ಒತ್ತಡ ಉಂಟಾಗಿ ತಲೆಗೂದಲು ಉದುರಿ ನೆತ್ತಿ ಕಾಣಿಸುವಂತಾಗಿದೆ ಎಂದು ಖುದ್ದು ವಾದಿಸಿದರು.

ಮಹಿಳೆಯ ವಾದ ಆಲಿಸಿದ ನ್ಯಾಯಪೀಠವು , ನಿಮ್ಮ ಆರೋಪಗಳ ಆಧಾರದಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಬಹುದು. ಆದರೆ, ಇದರ ಆಧಾರದಲ್ಲಿ ಪತಿಯ ತಾಯಿ, ತಂದೆ ಮತ್ತು ಇತರ ಸಂಬಂಧಿಕರ ವಿರುದ್ಧ ವರದಕ್ಷಿಣೆ ಕಿರುಕುಳ, ಕ್ರೌರ್ಯದ ಆರೋಪ ಹೊರಿಸಲಾಗದು. ದಂಪತಿ ನಡುವೆ ಮತ್ತು ಕುಟುಂಬದೊಳಗೆ ಭಿನ್ನಾಭಿಪ್ರಾಯಗಳು ಏರ್ಪಡುವುದು ಸಾಮಾನ್ಯ. ಅದಕ್ಕೆಲ್ಲ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವೇ ಎಂದು ಪ್ರಶ್ನಿಸಿತು.

‘ರಾಗಿಮುದ್ದೆ, ದೋಸೆ ಮಾಡಿಕೊಡು ಎಂದು ಅತ್ತೆ ಕೇಳುವುದು ತಪ್ಪೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಮಹಿಳೆ, ‘ಇಲ್ಲ ಸ್ವಾಮಿ, ನನ್ನ ಆರೋಪ ಏನೆಂದರೆ ನನ್ನನ್ನು ಅಡುಗೆ ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಸರಿಯಾದ ಆಹಾರವನ್ನು ಕೊಡುತ್ತಿರಲಿಲ್ಲ. ಎಲ್ಲರ ಊಟ ಆದ ನಂತರ ನಾನು ಸೇವಿಸಬೇಕಿತ್ತು. ಗಂಡನನ್ನು ನನ್ನ ಜತೆ ಮಲಗಲು ಬಿಡದೆ ಬೇರೆ ಕೋಣೆಯಲ್ಲಿ ಮಲಗಲು ಅತ್ತೆ ಹೇಳುತ್ತಿದ್ದರು. ಐದೂವರೆ ತಿಂಗಳು ಅವರ ಮನೆಯಲ್ಲಿ ನಾನು ಕ್ರೌರ್ಯ ಅನುಭವಿಸಿದ್ದೇನೆ. ‘ಪತಿಯ ಮನೆಯವರು ನೆರೆಹೊರೆಯವರ ಮುಂದೆ ನನ್ನ ಬಗ್ಗೆ ತೀವ್ರ ಅಪಪ್ರಚಾರ ನಡೆಸಿ, ಕಳಂಕ ಹೊರಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಹಾಗೆಯೇ ನಾನು ತವರು ಮನೆಗೆ ಹೋದರೂ. ಅಲ್ಲಿಗೂ ಸಹ ಬಂದು ಕಿರುಕುಳ ನೀಡಿದ್ದಾರೆ. ನನ್ನ ಚಾರಿತ್ರ್ಯದ ಬಗ್ಗೆ ಅವಹೇಳನ ಮಾಡಿದ್ದಾರೆ. ಈ ಕೃತ್ಯಕ್ಕೆ ಅತ್ತೆಗೆ ಅವರ ಸಹೋದರ ಮತ್ತು ಪತಿಯ ಸ್ನೇಹಿತ ಸಾಥ್ ನೀಡಿದ್ದಾರೆ. ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ, ಅವರು ಕೂಡ ಅನ್ಯಾಯ ಮಾಡಿದ್ದಾರೆ. ನನ್ನ ದೂರು ದಾಖಲಿಸಿಕೊಳ್ಳುವ ಬದಲು ನನ್ನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಮಹಿಳೆ ವಾದಿಸಿದರು.

ವಾದ ಆಲಿಸಿದ ನ್ಯಾಯಪೀಠವು, ಎಲ್ಲ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯ ಎನ್ನಲಾಗದು. ‘ದೂರುದಾರರ ದೃಷ್ಟಿಯಲ್ಲಿ ಏನು ಕ್ರೌರ್ಯ ಎಂದಿದೆಯೋ ಅದು ಕ್ರೌರ್ಯವಲ್ಲ. ಕಾನೂನು ಯಾವುದನ್ನು ಕ್ರೌರ್ಯ ಎಂದು ಹೇಳುತ್ತದೆಯೋ ಅದು ಮಾತ್ರ ಕ್ರೌರ್ಯವಾಗುತ್ತದೆ. ಹೀಗೆ ಪರಸ್ಪರ ಪ್ರಕರಣಗಳನ್ನು ದಾಖಲಿಸುವುದೂ ಕ್ರೌರ್ಯವಲ್ಲ, ಪತಿಯ ವಿರುದ್ಧದ ಆರೋಪಗಳನ್ನು ಪರಿಗಣಿಸ ಬಹುದು. ಆದರೆ, ಇಡೀ ಕುಟುಂಬವನ್ನು ಎಳೆದುತರುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟು ಆದೇಶವನ್ನು ಕಾಯ್ದಿರಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.