30/07/2026

Law Guide Kannada

Online Guide

ರಸ್ತೆ ರಂಪಾಟ: ನ್ಯಾಯಾಧೀಶರ ದರ್ಪ, ಅಧಿಕಾರ ದುರುಪಯೋಗ ಸಲ್ಲದು – ಹೈಕೋರ್ಟ್ ಕಿಡಿ

ಬೆಂಗಳೂರು: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಬ್ಬರ ಜೊತೆ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಅವರು ನಡೆದುಕೊಂಡಿರುವ ರೀತಿಯು ದರ್ಪ ಹಾಗೂ ಅಧಿಕಾರ ದುರುಪಯೋಗಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು ನ್ಯಾಯಾಧೀಶರ ಈ ರೀತಿಯ ನಡವಳಿಕೆ ಸಲ್ಲದು ಎಂದು ಹೈಕೋರ್ಟ್ ಚಾಟಿ ಬೀಸಿದೆ.

ಹಾಗೆಯೇ ಇವರ ವಿರುದ್ಧ ಮುಂದಿನ ಕ್ರಮ ಜರುಗಿಸಲು ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ (ಸಿಜೆ) ಅವಗಾಹನೆಗೆ ತರಬೇಕು’ ಎಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ರಿಜಿಸ್ಟ್ರಾರ್ ಜನರಲ್ ಅವರಿಗೆ ಆದೇಶಿಸಿದೆ.

ಕೆ.ಎಂ.ವಿನಯ್, ವಿ.ಕವಿತಾ ಮತ್ತು ಪಿ.ವೆಂಕಟೇಶ್ ಎಂಬುವವರು ‘ನಮ್ಮ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣದ ತನಿಖೆಗೆ ತಡೆ ನೀಡಿತು.

ಘಟನೆಯ ಕುರಿತಂತೆ ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವಿಡಿಯೋವನ್ನು ನ್ಯಾಯಮೂರ್ತಿಗಳಿಗೆ ತಮ್ಮ ಮೊಬೈಲ್ ಮೂಲಕ ಪ್ರದರ್ಶಿಸಿದರು. ಅಂತೆಯೇ, ‘ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ವಿಡಿಯೋ ಡಿಲಿಟ್ ಮಾಡುವಂತೆ ಗಾಯತ್ರಿ ಅವರೇ ದೂರು ನೀಡಿಕೊಂಡು ಅದಕ್ಕೆ ತಾವೇ ಆದೇಶ ಹೊರಡಿಸಿದ್ದಾರೆ’ ಎಂದು ಅವರೇ ಹೊರಡಿಸಿಕೊಂಡಿರುವ ನ್ಯಾಯಾಂಗ ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ನೀಡಿದರು.

ವಿಡಿಯೋ ಮತ್ತು ಗಾಯತ್ರಿ ಅವರ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಪೀಠ, ‘ಈ ಬೀದಿ ಜಗಳ ನಿಜಕ್ಕೂ ಅನಪೇಕ್ಷಿತ. ನ್ಯಾಯಾಧೀಶರು ಸಾರ್ವಜನಿಕರ ನಂಬಿಕೆಯನ್ನು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಉಳಿಸಿಕೊಂಡರೆ ಸಾಲದು ಅದನ್ನು ನಿತ್ಯದ ಸಾರ್ವಜನಿಕ ಬದುಕಿನಲ್ಲೂ ಅಳವಡಿಸಿಕೊಂಡಿರಬೇಕು’ ಎಂದು ಕುಟುಕಿತು.

ವಾದ ಮುಂದುವರೆಸಿದ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರು, ಗಾಯತ್ರಿ ಅವರ ಈ ನಡೆ ಇದೇ ಮೊದಲಲ್ಲ. ಇಂತಹುದಕ್ಕೆ ಹಲವು ನಿದರ್ಶನಗಳಿವೆ. ಈ ಪ್ರಕರಣದಲ್ಲಿ ಅರ್ಜಿದಾರರೂ ಆದ 69 ವರ್ಷದ ವೆಂಕಟೇಶ್ ಅವರನ್ನು ಘಟನೆ ನಡೆದ ದಿನ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಕರೆಸಿಕೊಂಡು ಬಂಧಿಸಲು ಪೊಲೀಸರಿಗೆ ಆದೇಶಿಸಿದ್ದಾರೆ’ ಎಂದರು.

‘ಈ ಹಿಂದೆ ತಮ್ಮ ಮನೆಯ ರಿಪೇರಿ ಮಾಡಬೇಕಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರನ್ನು ಕರೆಯಿಸಿಕೊಂಡಿದ್ದರು. ಆದರೆ ಅವರು ರಿಪೇರಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅವರನ್ನು ಬಂಧಿಸುವಂತೆ ಆದೇಶಿಸಿದ್ದರು’ ಎಂದೂ ವಿವರಿಸಿದರು. ‘ಇವರ ವರ್ತನೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಸಿ.ಎಸ್.ಕರ್ಣನ್ ಅವರ ಪ್ರಸಂಗವನ್ನು ನೆನಪಿಸುವಂತಿದೆ’ ಎಂದು ತಿಳಿಸಿದರು. ಈ ಮಾತಿಗೆ ಅರ್ಜಿದಾರರ ಪರವಾಗಿ ಹಾಗೂ ಬೆಂಗಳೂರು ವಕೀಲರ ಸಂಘದ ಪ್ರತಿನಿಧಿಯಾಗಿ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಅವರೂ ದನಿಗೂಡಿಸಿದರು.

ಈ ವೇಳೆ ಗರಂ ಆದ ನ್ಯಾಯಪೀಠವು, ‘ನ್ಯಾಯಾಧೀಶರಾದ ಮಾತ್ರಕ್ಕೆ ದರ್ಪ ಹಾಗೂ ಅಹಂಕಾರದಿಂದ ನಡೆದುಕೊಳ್ಳುವುದು ಸಲ್ಲದು. ನ್ಯಾಯಾಲಯದ ಆಚೆಗೂ ಅವರು ತಮ್ಮ ಘನತೆಯನ್ನು ಕಾಪಾಡಿಕೊಂಡು ಹೋಗಬೇಕು’ ಎಂದು ನ್ಯಾಯಾಂಗ ಅಧಿಕಾರಿಗಳಿಗೆ ಕಿವಿಮಾತು ಹೇಳಿತು.

ಹಾಗೆಯೇ ‘ಹೈಕೋರ್ಟ್ನಲ್ಲಿ ಏನಾದರೂ ಕೊಂಚ ಏರುಪೇರಾದರೆ ನ್ಯಾಯಮೂರ್ತಿಗಳ ಮೇಲೆ ಎಗರಿ ಬೀಳುತ್ತೀರಿ. ಅಲ್ಲಿ ಇಷ್ಟೆಲ್ಲಾ ರಂಪಾಟ ನಡೆದರೂ ಸುಮ್ಮನಿದ್ದೀರಲ್ಲಾ’ ಎಂದು ನ್ಯಾಯಪೀಠ ‘ಬೆಂಗಳೂರು ವಕೀಲರ ಸಂಘ ವಿರುದ್ದ ಹರಿಹಾಯ್ದಿತು.

ಇದಕ್ಕೆ ಪ್ರತಿಕ್ರಿಯಿಸಿದ ರವಿಶಂಕರ್, ‘ಈಗಾಗಲೇ ಘಟನೆಯ ಸಂಪೂರ್ಣ ವಿವರಣೆಯನ್ನು ಕೋಲಾರ ಜಿಲ್ಲೆಯ ಆಡಳಿತಾತ್ಮಕ ಉಸ್ತುವಾರಿಯೂ ಆದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರ ಗಮನಕ್ಕೆ ತರಲಾಗಿದ್ದು ಕಠಿಣ ಕ್ರಮಕ್ಕೆ ಕೋರಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 126(2) (ಅಕ್ರಮ ನಿರ್ಬಂಧ), 132 (ಸರ್ಕಾರಿ ಅಧಿಕಾರಿ ಅಧಿಕೃತ ಕರ್ತವ್ಯ ನಿರ್ವಹಿಸದಂತೆ ತಡೆಯಲು ಅವರ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗಿಸುವುದು), 3(5) ಸಾಮಾನ್ಯ ಉದ್ದೇಶ, 351(2) (ವ್ಯಕ್ತಿಯ ಖ್ಯಾತಿಗೆ ಹಾನಿಯುಂಟು ಮಾಡುವಂತಹ ಬೆದರಿಕೆ ಹಾಕುವುದು), 352 (ಉದ್ದೇಶಪೂರ್ವಕ ಅವಮಾನ), 74 (ಯಾವುದೇ ಮಹಿಳೆಯ ಶೀಲಕ್ಕೆ ಅಥವಾ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಮಾಡುವುದು ಅಥವಾ ಅಪರಾಧಿಕ ಶಕ್ತಿ ಬಳಸುವುದು) ಅಡಿಯಲ್ಲಿ ಅಪರಾಧ ಹೊರಿಸಲಾಗಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.