ಜಡ್ಜ್ ರಸ್ತೆ ರಂಪಾಟ: ಪೊಲೀಸ್ ಅಧಿಕಾರಿಗಳ ಅಮಾನತಿಗೆ ಪಟ್ಟುಹಿಡಿದ ವಕೀಲರ ಸಂಘ : DG & IGP ಅವರಿಗೆ ಮನವಿ
ಬೆಂಗಳೂರು: ‘ರಸ್ತೆ ರಂಪಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಅವರ ಒತ್ತಡದಿಂದ ಸ್ಥಳೀಯ ಇಬ್ಬರು ಮುಗ್ಧ ವ್ಯಕ್ತಿಗಳನ್ನು ಅಕ್ರಮವಾಗಿ ಬಂಧಿಸಿಟ್ಟು ಅಧಿಕಾರ ದುರುಪಯೋಗಪಡಿಸಿಕೊಂಡ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ‘ಬೆಂಗಳೂರು ವಕೀಲರ ಸಂಘ’ ಒತ್ತಾಯಿಸಿದೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರಿಗೆ ‘ಬೆಂಗಳೂರು ವಕೀಲರ ಸಂಘ’ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್ ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಸಹಿ ಮಾಡಿರುವ ನಾಲ್ಕು ಪುಟಗಳ ಮನವಿಯನ್ನು ಸಲ್ಲಿಸಿದ್ದು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿದ್ದಾರೆ.
ನ್ಯಾಯಾಧೀಶೆ ಗಾಯತ್ರಿ ಅವರು’ಶ್ರೀಸಾಮಾನ್ಯರೊಬ್ಬರ ಜೊತೆ ನಡೆದುಕೊಂಡಿರುವ ಅನುಚಿತ ನಡವಳಿಕೆ ಗಂಭೀರವಾದುದು. ಯುವಕನೊಬ್ಬನಿಗೆ ನ್ಯಾಯಾಧೀಶೆ ಮತ್ತು ಅವರ ಪತಿ ಧಮ್ಕಿ ಹಾಕುತ್ತಿರುವ ಹಾಗೂ ಸ್ಥಳಕ್ಕೆ ಕೋರ್ಟ್ ಪೊಲೀಸ್ ಕಾನ್ ಸ್ಟೆಬಲ್ ಕರೆಯಿಸಿ ಆ ಯುವಕನ ಕಪಾಳಕ್ಕೆ ಹೊಡೆಸಿರುವ ರೀತಿ, ಆಗ ಗಾಯತ್ರಿ ಅಡಿರುವ ದರ್ಪದ ಮಾತುಗಳು ಅವರ ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿವೆ’ ‘ಈ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಐದು ದಿನಗಳ ನಂತರ ಬೈಕ್ ನಲ್ಲಿ ಅಡ್ಡಬಂದು ಗಾಯತ್ರಿ ಅವರ ಖಾಸಗಿ ಕಾರಿಗೆ ಕೈಮಾಡಿದ ಎಂದು ಆರೋಪಿಸಲಾದ ಯುವಕ ಕೆ.ಎಂ.ವಿನಯ್ ಮತ್ತು 70 ವರ್ಷದ ಯುವಕನ ಅಜ್ಜ ಪಿ.ವೆಂಕಟೇಶ್ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿಕೊಂಡು ರಾತ್ರಿ-ಹಗಲು ಅಕ್ರಮವಾಗಿ ಬಂಧಿಸಿ ಇರಿಸಲಾಗಿದೆ. ಇದು ಸಂಪೂರ್ಣವಾಗಿ ಪೊಲೀಸರ ಕರ್ತವ್ಯಲೋಪವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
‘ಕೇವಲ ನ್ಯಾಯಾಧೀಶರೊಬ್ಬರ ನಿರ್ದೇಶನದ ಮೇರೆಗೆ ಪೊಲೀಸರು ಶ್ರೀಸಾಮಾನ್ಯರನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಇಬ್ಬರನ್ನೂ ರಾತ್ರಿ 10 ಗಂಟೆಗೆ ಠಾಣೆಗೆ ಕರೆತಂದು ಅಕ್ರಮ ಬಂಧನದಲ್ಲಿ ಇರಿಸಿ ಮರುದಿನ ಸಂಜೆ 6 ಗಂಟೆಗೆ ಅಲ್ಲಿಂದ ಬಿಡುಗಡೆ ಮಾಡಲಾಗಿದೆ. ಆ ವೇಳೆ ಗಾಯತ್ರಿ ಅವರು ಠಾಣೆಯ ಹೊರಗೆ ಕಾರಿನಲ್ಲಿ ಕುಳಿತು ಎಲ್ಲವನ್ನೂ ವೀಕ್ಷಿಸಿದ್ದಾರೆ.
ಮಧ್ಯರಾತ್ರಿ 1 ಗಂಟೆಯಲ್ಲಿ ಶ್ರೀಸಾಮಾನ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಯುವಕನಿಂದ ಒತ್ತಾಯಪೂರ್ವಕವಾಗಿ ಜಡ್ಜ್ ಅವರಿಂದ ಯಾವುದೇ ತಪ್ಪಾಗಿಲ್ಲ ಎಂಬ ಮೌಖಿಕ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮೂಲಕ ದಾಖಲಿಸಿಕೊಳ್ಳಲಾಗಿದೆ’ ಎಂದು ಪತ್ರದಲ್ಲಿ ಆರೋಪ ಮಾಡಲಾಗಿದೆ.
‘ಇಡೀ ಘಟನೆಯಲ್ಲಿ ಪೊಲೀಸರು ಕೇವಲ ಜಡ್ಜ್ ಅವರ ಮೌಖಿಕ ಆಣತಿಯನ್ನು ಕುರುಡಾಗಿ ಪಾಲಿಸಿ ಅವರನ್ನು ತೃಪ್ತಿಪಡಿಸುವ ರೀತಿ ವರ್ತಿಸಿದ್ದು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಈ ಘಟನೆ ಇಡೀ ರಾಜ್ಯದ ಜನತೆಯ ಗಮನ ಸೆಳೆದಿದೆ. ಗಾಯತ್ರಿ ಮತ್ತು ಅವರ ಪತಿ ದಾಮೋದರ್ ಯುವಕ ಹಾಗೂ ಆತನ ತಾಯಿಯ ಜೊತೆಗೆ ಅತ್ಯಂತ ಕೀಳಾಗಿ ನಡೆದುಕೊಂಡಿದ್ದಾರೆ. ಇಡೀ ಘಟನೆಯಲ್ಲಿ ಪೊಲೀಸರು ಗಾಯತ್ರಿ ಅವರ ನೌಕರರೇನೊ ಎಂಬಂತೆ ವರ್ತಿಸಿದ್ದಾರೆ’ ಹೀಗಾಗಿ ಈ ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಈ ಬಗೆ ಸೂಕ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
