31/07/2026

Law Guide Kannada

Online Guide

ಬಲವಂತದ ಕ್ರಮ ಬೇಡವೆಂಬ ಆದೇಶ ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಹೊರತು ತನಿಖೆಗೆ ತಡೆಯಲ್ಲ- ಹೈಕೋರ್ಟ್

ಬೆಂಗಳೂರು: ಆರೋಪಿಯ ವಿರುದ್ದ ಬಲವಂತದ, ಕ್ರಮ ಬೇಡ” ಎಂಬ ಆದೇಶವು ವ್ಯಕ್ತಿಯ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವ ಉದ್ದೇಶ ಹೊಂದಿರುತ್ತದೆಯೇ ಹೊರತು ಪ್ರಕರಣದ ತನಿಖೆಗೆ ತಡೆ ನೀಡುವುದಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹಣ ದುರ್ಬಳಕೆ ಪ್ರಕರಣ ದಲ್ಲಿಜಾರಿ ನಿರ್ದೇಶನಾಲಯ ತಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕಂಪನಿಯ ಪವಿತ್ರಾ ರಾಮಾನುಜಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದು ಕೊಳ್ಳದಂತೆ ತನಿಖಾ ಸಂಸ್ಥೆಗೆ ನಿರ್ದೇಶನ ನೀಡುವ ಆದೇಶವು ಬಂಧನದಿಂದ ವ್ಯಕ್ತಿಯ ಸ್ವಾತಂತ್ರ್ಯವನ್ನು ಮಾತ್ರ ರಕ್ಷಿಸುತ್ತದೆ. ಆದರೆ ಪ್ರಕರಣದ ತನಿಖೆ ಮುಂದುವರಿಕೆ ಅಥವಾ ಅದರ ನಂತರದ ಕ್ರಮಗಳನ್ನು ತಡೆಯುವುದಿಲ್ಲ ಎಂದು ತಿಳಿಸಿತು.

“ಬಲವಂತದ, ಕ್ರಮ ಬೇಡ” ಎಂಬ ನ್ಯಾಯಾಲಯದ ಆದೇಶವು ಜಾರಿ ನಿರ್ದೇಶನಾಲಯ ತನ್ನ ತನಿಖೆ ಮುಂದುವರಿಸುವುದನ್ನು ಅಥವಾ ಆಸ್ತಿ ಜಪ್ತಿ ಅಥವಾ ಮುಟ್ಟುಗೋಲು ಆದೇಶವನ್ನು ಅಂಗೀಕರಿಸುವುದನ್ನು ತಡೆ ಹಿಡಿಯುವುದಿಲ್ಲ. ಅಲ್ಲದೆ, “ತನಿಖಾ ಸಂಸ್ಥೆಯು ಬಲವಂತದ ಕ್ರಮ ತೆಗೆದುಕೊಳ್ಳುವುದನ್ನು ತಡೆಯುವ ಆದೇಶವು ಮೂಲಭೂತವಾಗಿ ತನಿಖೆ ಎದುರಿಸುತ್ತಿರುವ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡಲು ಒದಗಿಸಲಾದ ನ್ಯಾಯಾಂಗ ಗುರಾಣಿಯಾಗಿದೆ.

ಅಂತಹ ನಿರ್ದೇಶನವು ಅದರ ಸಾಮಾನ್ಯ ಕಾನೂನು ಅರ್ಥದಲ್ಲಿ ತನಿಖಾ ಸಂಸ್ಥೆಯು ಬಂಧನ ಅಥವಾ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ನೇರ ಪರಿಣಾಮ ಬೀರುವ ಇತರ ಕ್ರಮಗಳನ್ನು ಆಶ್ರಯಿಸುವುದನ್ನು ನಿಷೇಧಿಸುತ್ತದೆ. ಆದರೂ, ತನಿಖೆ ಮುಂದುವರಿಸಲು, ಸಾಕ್ಷ್ಯ ಸಂಗ್ರಹಿಸಲು, ಪ್ರಾಸಿಕ್ಯೂಷನ್ ದೂರು ಸಲ್ಲಿಸಲು ಅಥವಾ ಇತರ ಶಾಸನ ಬದ್ಧ ಪರಿಹಾರ ಕೋರಲು ಕಾನೂನುಬದ್ದ ಅಧಿಕಾರವನ್ನು ಅದು ನಿರಾಕರಿಸುವುದಿಲ್ಲ ಎಂದು ನ್ಯಾಯಪೀಠವು ಸ್ಪಷ್ಟನೆ ನೀಡಿದೆ.

ಇ.ಡಿ ತನಿಖೆಗೆ ಅರ್ಜಿದಾರರು ಸಹಕರಿಸಿದರೆ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೆ, ತನಿಖಾ ಸಂಸ್ಥೆ ತಮ್ಮ ಆಸ್ತಿ ಜಪ್ತಿ ಮಾಡಿದ್ದು, ಅದು ಕಾನೂನುಬಾಹಿರ ಕ್ರಮ. ಹಾಗಾಗಿ, ಇ.ಡಿ ಆಸ್ತಿ ಜಪ್ತಿ ಮಾಡಿರುವ ಆದೇಶ ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ನ್ಯಾಯಪೀಠ ಈ ರೀತಿ ವಿವರಣೆ ನೀಡಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.