03/08/2026

Law Guide Kannada

Online Guide

ತಾಯಿ-ಮಕ್ಕಳ ಪಾಲುದಾವೆ; ಕ್ರಿಮಿನಲ್ ನ್ಯಾಯಶಾಸ್ತ್ರ ಮೀಟುಗೋಲಾಗಿ ಬಳಸಿಕೊಳ್ಳಲು ಅವಕಾಶ ನೀಡಲ್ಲ: ಹೈಕೋರ್ಟ್

ಬೆಂಗಳೂರು: ತಾಯಿ-ಮಕ್ಕಳ ಪಾಲುದಾವೆಯಲ್ಲಿ ಕ್ರಿಮಿನಲ್ ನ್ಯಾಯಶಾಸ್ತ್ರವನ್ನು ಮೀಟುಗೋಲಾಗಿ ಪರಿವರ್ತಿಸಿಕೊಳ್ಳಲು, ಅದನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಧು ಹೈಕೋರ್ಟ್ ತಿಳಿಸಿದೆ.

ತನ್ನ ಮತ್ತು ತನ್ನ ಹಿರಿಯ ಮಗಳ ವಿರುದ್ಧ ಕಿರಿಯ ಮಗಳು ದಾಖಲು ಮಾಡಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ 73 ವರ್ಷದ ಮಹಿಳೆಯೊಬ್ಬರು ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿದ್ದರು.

ಅ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ. ‘ಕ್ರಿಮಿನಲ್ ಕಾನೂನನ್ನು ನಾಗರಿಕ ಹಕ್ಕುಗಳ ನೆರವಿಗೆ ಆಯುಧವಾಗಿಸಿಕೊಳ್ಳಲು ಅಥವಾ ವ್ಯಾಜ್ಯದಲ್ಲಿರುವ ಪಾಲು ದಾವೆಯಲ್ಲಿ ಚೌಕಾಸಿ ಮಾಡಿ ಪಕ್ಷಗಾರರೊಬ್ಬರು ತಮ್ಮ ಶಕ್ತಿ ವೃದ್ಧಿಸಿಕೊಂಡು ಅದನ್ನೊಂದು ಮೀಟುಗೋಲಾಗಿ ಪರಿವರ್ತಿಸಿಕೊಳ್ಳಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿತು.

ಕಿರಿಯ ಮಗಳಿಂದ ಸಿಂಗಪುರದಿಂದಲೇ ಪೊಲೀಸರಿಗೆ ಒತ್ತಡದ ಆರೋಪ
ಬೆಂಗಳೂರಿನ ಪ್ರತಿಷ್ಠಿತ ಬಡವಾಣೆಯೊಂದರಲ್ಲಿ ವಾಸವಿರುವ 73 ವರ್ಷದ ಅರ್ಜಿದಾರರು ಪತಿಯ ನಿಧನಾನಂತರ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಮೊದಲ ಪುತ್ರಿ ಬೆಂಗಳೂರಿನ ಮತ್ತೊಂದು ಪ್ರದೇಶದಲ್ಲಿ ಹಾಗೂ ಎರಡನೇ ಪುತ್ರಿ ಸಿಂಗಪುರದಲ್ಲಿ ವಾಸ ಮಾಡುತ್ತಿದ್ದಾರೆ. ಪತಿಯ ಕೋಟ್ಯಂತರ ಸ್ಥಿರ ಮತ್ತು ಚರಾಸ್ತಿಯ ಪಾಲು ದಾವೆ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ಮಧ್ಯೆ ಸಿಂಗಪುರದಲ್ಲಿರುವ ಕಿರಿಯ ಪುತ್ರಿಯು, ‘ನನ್ನ ತಾಯಿ ನನಗೆ ದಕ್ಕಬೇಕಾದ ಅಸ್ತಿಯ ದಾಖಲೆಗಳನ್ನು ತಿರುಚಿ ನನಗೆ ವಂಚನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಬೆಂಗಳೂರಿನಲ್ಲಿ ತಾಯಿ ವಾಸ ಮಾಡುತ್ತಿರುವ ಪ್ರದೇಶ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದರು.

ಈ ಎಫ್ ಐಆರ್ ರದ್ದುಕೋರಿ ವೃದ್ಧೆ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿ ಎಫ್ಐಆರ್ ರದ್ದುಪಡಿಸಿದ ನ್ಯಾಯಪೀಠವು, ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾಗಿರುವ ಅರ್ಜಿದಾರ ತಾಯಿಯ ಎರಡನೇ ಮಗಳು ಸದ್ಯ ಸಿಂಗಪುರದಲ್ಲಿ ನೆಲೆಸಿದ್ದಾರೆ ಮತ್ತು ತನ್ನ ದಿವಂಗತ ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಬೆಂಗಳೂರಿನಲ್ಲೇ ಸಿವಿಲ್ ವ್ಯಾಜ್ಯವನ್ನೂ ನಡೆಸುತ್ತಿದ್ದಾರೆ. ಆದರೆ, ಈ ಮಧ್ಯದಲ್ಲಿ ಅವರು ಬಲವಂತವಾಗಿ ತನ್ನ ತಾಯಿಯ ವಿರುದ್ಧ ಎಫ್ ಐಆರ್ ದಾಖಲಿಸಿ ಅವರಿಗೆ ತೊಂದರೆ ಕೊಡುತ್ತಿರುವುದು ಸರ್ವಥಾ ಸಮರ್ಥನೀಯವಲ್ಲ’ ಎಂದು ತಿಳಿಸಿದೆ.

‘ಒಂದು ವೇಳೆ ಕಿರಿಯ ಮಗಳು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಿದ್ದಾರೆ ಎಂದಾದರೆ, ಕಾನೂನು ಈಗಾಗಲೇ ಅವರಿಗೆ ಸೂಕ್ತವಾದ ಮಾರ್ಗವನ್ನು ಒದಗಿಸಿದೆ ಮತ್ತು ಅದನ್ನು ಅವರು ಸಿವಿಲ್ ದಾವೆಯ ಮುಖಾಂತರವೇ ಪಡೆಯಲಿ. ಈ ಪ್ರಕರಣದಲ್ಲಿನ ವಿವಾದದ ಮೂಲ ತಿರುಳು ಸಿವಿಲ್ ಹಕ್ಕುಗಳಿಗೆ ಸಂಬಂಧಿಸಿದೆ. ಹಾಗಾಗಿ, ದಂಡನಾತ್ಮಕ ಪ್ರಕ್ರಿಯೆಯನ್ನು ಸಿವಿಲ್ ಪರಿಹಾರಗಳಿಗೆ ಪರ್ಯಾಯವಾಗಲು ಅವಕಾಶ ನೀಡಲಾಗುವುದಿಲ್ಲ ಅಥವಾ ಬಾಕಿ ಇರುವ ಆಸ್ತಿ ವಿಭಜನೆಯ ದಾವೆಯಲ್ಲಿ ಅನುಕೂಲ ಪಡೆಯುವ ಸಲುವಾಗಿ ಒತ್ತಡ ಹೇರುವ ಸಾಧನವನ್ನಾಗಿ ಬಳಸುವುದಕ್ಕೆ ಅವಕಾಶ ನೀಡುವುದು ತರವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಕೌಟುಂಬಿಕ, ಆಸ್ತಿ ವಿವಾದಗಳಂತಹ ಖಾಸಗಿ ಜಗಳಗಳಲ್ಲಿ ಒಂದು ಪಕ್ಷದ ಪರವಾಗಿ ನ್ಯಾಯದ ತೂಕವನ್ನು ಬದಲಾಯಿಸಲು ಇದನ್ನು ರೂಪಿಸಲಾಗಿಲ್ಲ. ಉತ್ತರಾಧಿಕಾರ, ಆನುವಂಶಿಕತೆ, ಶೀರ್ಷಿಕೆ ಮತ್ತು ಅರ್ಹತೆಯ ಪ್ರಶ್ನೆಗಳು ಸಿವಿಲ್ ವ್ಯಾಜ್ಯದಲ್ಲೇ ಇತ್ಯರ್ಥ ಕಾಣಬೇಕು. ಇವೆಲ್ಲಾ ಶತಮಾನಗಳಿಂದ ಸಿವಿಲ್ ನ್ಯಾಯಾಲಯಗಳ ವಿಶೇಷ ವ್ಯಾಪ್ತಿಯೊಳಗಿರುವ ವಿಷಯಗಳು’ ಎಂದು ಉಲ್ಲೇಖಿಸಿದೆ.

‘ಪ್ರತಿವಾದಿ ಪುತ್ರಿಯು ತಮ್ಮ 73 ವರ್ಷದ ತಾಯಿಯನ್ನು ಅನಗತ್ಯ ಕ್ರಿಮಿನಲ್ ಮೊಕದ್ದಮೆಗೆ ಗುರಿಪಡಿಸಲು ಪೊಲೀಸರ ಸಹಾಯವನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ, ಕುಟುಂಬವೊಂದರ ಮೇಲೆ ಒತ್ತಡ ಹೇರುವ ಅಸ್ತ್ರವಾಗಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬಳಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ’ ಎಂದು ನ್ಯಾಯಪೀಠ ಹೇಳಿ. ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.