ಖಾತೆ ಬದಲಾವಣೆಗೆ ಪಡೆವ ಮುದ್ರಾಂಕ ಶುಲ್ಕ ಲಂಚವಲ್ಲ: ಗ್ರಾಮಲೆಕ್ಕಾಧಿಕಾರಿ ಶಿಕ್ಷ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು: ಜಮೀನು ಖಾತೆ ಬದಲಾವಣೆಗೆ ಪಡೆಯುವ ಮುದ್ರಾಂಕ ಶುಲ್ಕವನ್ನು ಲಂಚವೆಂದು ಪರಿಗಣಿಸಲಾಗಿದು ಎಂದು ಸ್ಪಷ್ಟ ತೀರ್ಪು ಪ್ರಕಟಿಸಿರುವ ಕರ್ನಟಕ ಹೈಕೋರ್ಟ್ ಈ ಪ್ರಕರಣ ಸಂಬಂಧ ಗ್ರಾಮಲೆಕ್ಕಾಧಿಕಾರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿದೆ.
68 ವರ್ಷ ವಯಸ್ಸಿನ ನಿವೃತ್ತ ಲೆಕ್ಕಾಧಿಕಾರಿ ವಿ.ಎಸ್. ಆಲ್ಬಲ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಕೆ.ಜಿ. ಶಾಂತಿ ಅವರಿದ್ದ ವಿಭಾಗೀಯ ಪೀಠವು, ಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಮುದ್ರಾಂಕ ಶುಲ್ಕವನ್ನು ಸಂಗ್ರಹಿಸಿ, ಅದನ್ನು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿದ್ದನ್ನು ಲಂಚ ಅಥವಾ ಅಕ್ರಮ ಹಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿ, ಅವರ ಸಂಪೂರ್ಣ ಪಿಂಚಣಿ ಬಿಡುಗಡೆ ಮಾಡಲು ಆದೇಶಿಸಿತು.
ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶ ರದ್ದುಪಡಿಸಿದ ನ್ಯಾಯಪೀಠವು ಜತೆಗೆ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ತಡೆಹಿಡಿಯಲಾಗಿದ್ದ ಸಂಪೂರ್ಣ ಪಿಂಚಣಿಯನ್ನು ಯಾವುದೇ ತಡವಿಲ್ಲದೇ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಿತು.
1999ರ ಕರ್ನಾಟಕ ಮುದ್ರಾಂಕ (ಎರಡನೇ ತಿದ್ದುಪಡಿ) ಕಾಯ್ದೆ ಹಾಗೂ ಸರ್ಕಾರದ ಸುತ್ತೋಲೆಯ ಪ್ರಕಾರ, ಕೃಷಿ ಜಮೀನು ವಿಭಜನೆ ವೇಳೆ ಪ್ರತಿ ಭಾಗಕ್ಕೂ ರೂ. 250 ರಂತೆ ಮುದ್ರಾಂಕ ಶುಲ್ಕ ಸಂಗ್ರಹಿಸುವುದು ಕಡ್ಡಾಯವಾಗಿದೆ.
ಹೀಗಾಘಿ ಅರ್ಜಿದಾರರು (ಗ್ರಾಮ ಲೆಕ್ಕಾಧಿಕಾರಿ) ಸಂಗ್ರಹಿಸಿದ 750 ರೂ. ಹಣಕ್ಕೆ ಸರಿಯಾಗಿ ರಸೀದಿ ನೀಡಿ, ಅದನ್ನು ಅಧಿಕೃತ ಖಜಾನೆಗೆ ಜಮೆ ಮಾಡಿದ್ದಾರೆ ಎಂಬ ಅಂಶ ದಾಖಲೆಗಳಿಂದ ಸಾಬೀತಾಗಿದೆ. ಸರ್ಕಾರದ ನಿಯಮದಂತೆ ಕಾನೂನು ಬದ್ಧವಾಗಿ ಶುಲ್ಕ ಸಂಗ್ರಹಿಸುವುದನ್ನು ‘ಅಕ್ರಮ ಸ್ವತ್ತು’ ಅಥವಾ ‘ಲಂಚ’ ಎಂದು ಕರೆಯಲಾಗದು, ಇದು ಕರ್ತವ್ಯಲೋಪವೂ ಅಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಪ್ರಕರಣದ ವಿವರ..
ಇದು 1999ರಲ್ಲಿ ನಡೆದ ಪ್ರಕರಣವಾಗಿದೆ. ಬಾಗಲಕೋಟೆ ಜಿಲ್ಲೆ ಬಿಳಗಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ 2012ರಲ್ಲಿ ನಿವೃತ್ತರಾಗಿರುವ ಅರ್ಜಿದಾರ ವಿ.ಎಸ್. ಅಲ್ಬಾಲ್ ಅವರು, 1999ರಲ್ಲಿ ಬಿಳಗಿ ತಾಲೂಕಿನಲ್ಲಿ ಪ್ರಭಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಹಂಚಿನಾಳ ಗ್ರಾಮದ ಮಹದೇವಪ್ಪ ಸಂಗಪ್ಪ ಕಂಬೋಗಿ ಎಂಬುವವರು 1999ರ ಮೇ 18 ರಂದು ತಮ್ಮ ಮತ್ತು ಇಬ್ಬರು ಮಕ್ಕಳ ಹೆಸರಿಗೆ ಜಮೀನು ಮ್ಯುಟೇಶನ್ (ಖಾತೆ ಬದಲಾವಣೆ) ಮಾಡಲು ಕೋರಿ ಅರ್ಜಿ ಸಲ್ಲಿಸಿದ್ದರು.
ಸರ್ಕಾರದ ಕಾಯ್ದೆಯಂತೆ ಮೂರು ಭಾಗಗಳಿಗೆ ತಲಾ 250 ರೂ. ನಂತೆ ಒಟ್ಟು 750 ರೂ. ಮುದ್ರಾಂಕ ಶುಲ್ಕವನ್ನು ಪಾವತಿಸುವಂತೆ ಗ್ರಾಮ ಲೆಕ್ಕಾಧಿಕಾರಿಯಾದ ಅರ್ಜಿದಾರರು ಸೂಚಿಸಿದ್ದರು. ಆದರೆ ದೂರುದಾರರು ಇದನ್ನು ಲಂಚದ ಬೇಡಿಕೆ ಎಂದು ತಪ್ಪಾಗಿ ಭಾವಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಸಂಬಂಧ ಪ್ರಕರಣ ದಾಖಲಿಸಿದ್ದ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ತನಿಖೆ ನಡೆಸಿ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರರನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಆದರೆ, ಪ್ರಕರಣ ಸಂಬಂಧ ಉಪಲೋಕಾಯುಕ್ತರು ನಡೆಸಿದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿತ್ತು. ಇದಾದ ಬಳಿಕ ಸರ್ಕಾರವು ಅರ್ಜಿದಾರ ಲೆಕ್ಕಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಕೆಎಟಿ ಲೋಕಾಯುಕ್ತ ವರದಿಯನ್ನು ವಜಾಗೊಳಿಸಿ, ಅರ್ಜಿದಾರರನ್ನು ಸೇವೆಗೆ ಮರು ಸೇರ್ಪಡೆ ಮಾಡುವಂತೆ ನಿರ್ದೇಶನ ನೀಡಿತ್ತು. ಆದರೆ, ಪ್ರಕರಣ ಸಂಬಂಧ ಹೊಸದಾಗಿ ವಿಚಾರಣೆ ನಡೆಸಬಹುದು ಎಂದು ಹೇಳಿತ್ತು. ಮರು ವಿಚಾರಣೆ ವೇಳೆ ಉಪಲೋಕಾಯುಕ್ತರ ಮುಂದೆ ಹಾಜರಾಗಿದ್ದ ಅರ್ಜಿದಾರರು ಕೆಲವು ದಾಖಲೆಗಳನ್ನು ಸಲ್ಲಿಸಿ, ದೂರುದಾರರಿಂದ ಸಂಗ್ರಹಿಸಿರುವ ಮೊತ್ತವು ಮುಂದ್ರಾಂಕ ಶುಲ್ಕವಾಗಿದೆ ಎಂಬುದಾಗಿ ತಿಳಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ್ದ ಉಪಲೋಕಾಯುಕ್ತರು, ಅರ್ಜಿದಾರರ ಶೇ. 50ರಷ್ಟು ಪಿಂಚಣಿಯನ್ನು ಕಾಯಂ ಆಗಿ ತಡೆಹಿಡಿಯಲು ಶಿಫಾರಸ್ದು ಮಾಡಿದ್ದು, ಅದರಂತೆ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮತ್ತೆ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಕೆಎಟಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
