ಹಿರಿಯ ನಾಗರಿಕರ ಕಾಯ್ದೆ ದುರ್ಬಳಕೆ ಸಲ್ಲದು: ಅತ್ತೆ ಪರ ನೀಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯು ಹಿರಿಯ ನಾಗರಿಕರ ಜೀವ ಮತ್ತು ನೆಮ್ಮದಿಯ ರಕ್ಷಣೆಗೆ ಮಾತ್ರ ಸೀಮಿತವಾಗಿದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ತಮ್ಮ ವಿರುದ್ಧದ ಮನೆ ತೆರವು ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ವಿಧವೆ ಸೊಸೆ ಮತ್ತು ಅಪ್ರಾಪ್ತ ಮಕ್ಕಳನ್ನು ಮನೆಯಿಂದ ಹೊರಹೋಗುವಂತೆ ಅತ್ತೆ ಪರವಾಗಿ ಆದೇಶಿಸಿದ್ದ ಹಿರಿಯ ನಾಗರಿಕರ ನಿರ್ವಹಣಾ ಪ್ರಾಧಿಕಾರದ ಆದೇಶ ರದ್ದುಗೊಳಿಸಿದೆ.
ಪ್ರತಿ ಪ್ರಕರಣದಲ್ಲೂ ಮನೆಯಿಂದ ಹೊರ ಹಾಕುವುದೇ ಏಕೈಕ ಪರಿಹಾರವಲ್ಲ. ಕಾಯ್ದೆಯು ಹಿರಿಯ ನಾಗರಿಕರ ಜೀವ ಮತ್ತು ನೆಮ್ಮದಿಯ ರಕ್ಷಣೆಗೆ ಮಾತ್ರ ಸೀಮಿತವಾಗಿದ್ದು, ಆಸ್ತಿ ಹಕ್ಕಿನ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇರುವಾಗ ಸೊಸೆಯನ್ನು ಬಲವಂತವಾಗಿ ತೆರವುಗೊಳಿಸಲು ಇದನ್ನು ಬಳಸುವಂತಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಏನಿದು ವಿವಾದ..?
ಅರ್ಜಿದಾರ ಮಹಿಳೆಯು 2013ರಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ವಿವಾದಿತ ಆಸ್ತಿಯನ್ನು ಮಹಿಳೆಯ ಪತಿ ಮತ್ತು ಅತ್ತೆಯ ಹೆಸರಿಗೆ ಪತಿಯ ಸಹೋದರ 2018ರಲ್ಲಿ ದಾನಪತ್ರದ ಮೂಲಕ ನೀಡಿದ್ದರು. 2020ರಲ್ಲಿ ಪತಿಯು ನಿಧನರಾದ ನಂತರ, ಅತ್ತೆ&ಸೊಸೆ ನಡುವೆ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯವೇರ್ಪಟ್ಟಿತ್ತು. ಆದ್ದರಿಂದ ಏಕ್ಷಪಯವಾಗಿ ನಿರ್ಧಾರ ತೆಗೆದುಕೊಂಡಿದ್ದ ಅತ್ತೆ, ದಾನಪತ್ರವನ್ನು ಅದನ್ನು ನೀಡಿದ ಮಗನಿಗೆ ಹಸ್ತಾಂತರಿಸಲು ಮುಂದಾಗಿದ್ದರು.
ಈ ಮಧ್ಯೆ ಸೊಸೆಯು ತನ್ನ ಮತ್ತು ಮಕ್ಕಳ ಪಾಲು ಕೋರಿ ಸಿವಿಲ್ ದಾವೆ ದೂಡಿದ್ದರೆ, ಮೊದಲು ದಾನಪತ್ರ ನೀಡಿದ್ದ ಪತಿಯ ಸದೋದರ ಕೂಡ ತಾನೇ ಆಸ್ತಿಯ ಮಾಲೀಕ ಎಂದು ಪ್ರತ್ಯೇಕ ದಾವೆ ಹೂಡಿದ್ದರು.
ಈ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಹಿರಿಯ ನಾಗರಿಕರ ನಿರ್ವಹಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದ ಅತ್ತೆಯು ಸೊಸೆ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಮನೆಯಿಂದ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಇದನ್ನು ಪ್ರಾಧಿಕಾರವು ಪರಿಗಣಿಸಿತ್ತು. ಹೀಗಾಗಿ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸೊಸೆಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
