ಗಲ್ಲು ಶಿಕ್ಷೆ ಪದ್ಧತಿಯಲ್ಲಿ ಬದಲಾವಣೆ ಬೇಡ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ
ನವದೆಹಲಿ: ಗಲ್ಲು ಶಿಕ್ಷೆ ಪದ್ಧತಿಯಲ್ಲಿ ಬದಲಿಸುವುದು ಬೇಡ. ಇಂಜೆಕ್ಷನ್, ಶೂಟ್, ಗ್ಯಾಸ್ ವಿಧಾನ ಬೇಡ, ಗಲ್ಲಿಗೇರಿಸುವ ಪದ್ಧತಿಯೇ ಇರಲಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗಲ್ಲಿಗೇರಿಸುವ ಮೂಲಕ ಮರಣದಂಡನೆ ವಿಧಿಸುವ ಪ್ರಸ್ತುತ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕೆ ಬದಲಾಗಿ ಕಡಿಮೆ ನೋವು ನೀಡುವ ಮಾರಕ ಚುಚ್ಚುಮದ್ದಿನಂಥ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಿಆರ್ಪಿಸಿ 354(5)ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಿರಿಯ ವಕೀಲ ರಿಷಿ ಮಲ್ಲೋತ್ರಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
354(5)ನೇ ವಿಧಿ ಕೈದಿ ಸಾಯುವವರೆಗೂ ಕುತ್ತಿಗೆಗೆ ಕುಣಿಕೆ ಹಾಕಿ ನೇಣಿಗೇರಿಸಲು ಅವಕಾಶ ನೀಡುತ್ತದೆ. ಗಲ್ಲು ಪ್ರಕ್ರಿಯೆ ಬದಲಿಗೆ ಮಾರಕ ಚುಚ್ಚುಮದ್ದು ನೀಡುವುದು, ಗುಂಡು ಹಾರಿಸುವುದು, ವಿದ್ಯುತ್ ಆಘಾತ ಅಥವಾ ಗ್ಯಾಸ್ ಚೇಂಬರ್ ನಂಥ ಕಡಿಮೆ ನೋವಿನ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಗಲ್ಲಿಗೇರಿಸುವ ಸಂಪೂರ್ಣ ಪ್ರಕ್ರಿಯೆಯಲ್ಲಿ ಪ್ರಾಣ ಹೋಗಲು 40 ನಿಮಿಷಗಳಿಗಿಂತ ಹೆಚ್ಚು ಕಾಲ ಬೇಕಾಗಬಹುದು, ಇದು ಅತ್ಯಂತ ಕ್ರೂರ-ಅಮಾನವೀಯ ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ ಭಾರತದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲು ಪ್ರಸ್ತುತ ಇರುವ ‘ಗಲ್ಲಿಗೇರಿಸುವ’ ಪದ್ಧತಿಯನ್ನೇ ಮುಂದುವರಿಸಲು ಸುಪ್ರೀಂ ಕೋರ್ಟ್ ನ್ಯಾಯಪೀಠವು ನಿರ್ಧರಿಸಿದ್ದು, ವಕೀಲ ರಿಷಿ ಮಲ್ಹೋತ್ರಾ ಅವರ ಅರ್ಜಿಯನ್ನು ತಳ್ಳಿಹಾಕಿದೆ.
ಮರಣದಂಡನೆಗೊಳಗಾದ ಕೈದಿಗೆ ಉಂಟಾಗುವ ಅನಗತ್ಯ ನೋವನ್ನು ಆದಷ್ಟು ಕಡಿಮೆ ತಗ್ಗಿಸುವ ಮತ್ತು ಆತನ ಘನತೆಯನ್ನು ಗೌರವಿಸುವ ಸಾಂವಿಧಾನಿಕ ಉದ್ದೇಶ ಪೂರೈಸಲು ಸರ್ಕಾರ ತಜ್ಞರ ಸಮಿತಿ ಮೂಲಕ ಪರ್ಯಾಯ ವಿಧಾನಗಳನ್ನು ಪರೀಕ್ಷಿಸಬಹುದು ಪೀಠ ತೀರ್ಪಿನಲ್ಲಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಬಲವಾದ ವೈದ್ಯಕೀಯ-ವೈಜ್ಞಾನಿಕ ಪುರಾವೆಗಳು ಲಭ್ಯವಾದರೆ ಈ ನಿರ್ದಿಷ್ಟ ವಿಧಾನದ ಸಾಂವಿಧಾನಿಕ ಸಿಂಧುತ್ವದ ಪರಿಶೀಲನೆ ನಡೆಸಲು ಸಂಪೂರ್ಣ ಅವಕಾಶವಿದೆ. ಆ ಪ್ರಕ್ರಿಯೆಗೆ ಈ ತೀರ್ಪು ಯಾವುದೇ ವಿಧದಲ್ಲಿ ಅಡ್ಡಿಯಾಗುವುದಿಲ್ಲ. ಆದರೆ ನಿರ್ದಿಷ್ಟ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಶಾಸಕಾಂಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಸದ್ಯಕ್ಕೆ ದೇಶದಲ್ಲಿ ಮರಣದಂಡನೆಗಾಗಿ ಗಲ್ಲಿಗೇರಿಸುವ ಪದ್ಧತಿಯು ಸಂವಿಧಾನಬದ್ಧವಾಗಿದೆ. ಇದು ಅಂತಿಮ ತೀರ್ಪಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.
ಮರಣದಂಡನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳು ಮುಂದೆ ಬಂದರೆ, ಪರ್ಯಾಯ ಮರಣದಂಡನೆ ಜಾರಿ ವಿಧಾನಗಳ ಕುರಿತು ಮರುಪರಿಶೀಲನೆ ನಡೆಸುವ ಅಧಿಕಾರ ಸರ್ಕಾರಕ್ಕಿದೆ. ಕೇಂದ್ರ ಸರ್ಕಾರವು ಬೇಕಿದ್ದರೆ ತಜ್ಞರ ಸಮಿತಿಯನ್ನು ರಚಿಸಿ ಪರ್ಯಾಯ ವಿಧಾನಗಳ ಬಗ್ಗೆ ಚರ್ಚಿಸಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ಸಲಹೆ ನೀಡಿದೆ.
ಈ ಹಿಂದೆ ವಿಚಾರಣೆಯ ವೇಳೆ, ಗಲ್ಲಿಗೇರಿಸುವಿಕೆಗೆ ಬದಲಾಗಿ ಬೇರೆ ಪದ್ಧತಿಯನ್ನು ಅಳವಡಿಸುವುದು ಪ್ರಾಯೋಗಿಕವಾಗಿ ಅಸಾಧ್ಯವೆಂದು ಕೇಂದ್ರ ಸರ್ಕಾರವು ತನ್ನ ಅಫಿಡವಿಟ್ನಲ್ಲಿ ತಿಳಿಸಿತ್ತು. ಈ ತೀರ್ಪಿನ ಮೂಲಕ, ಮರಣದಂಡನೆ ಶಿಕ್ಷೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ಹಿಂದಿನ ನಿಲುವನ್ನೇ ಎತ್ತಿಹಿಡಿದಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
