19/08/2026

Law Guide Kannada

Online Guide

ಹಿಂದೂ ದೇವತೆಗಳ ಕುರಿತು ವೀಡಿಯೋ: ಕಾನ್ಸ್ ಟೇಬಲ್ ವಿರುದ್ದ FIR ರದ್ದಿಗೆ ಹೈಕೋರ್ಟ್ ನಕಾರ

ಭೂಪಾಲ್: ಹಿಂದೂ ದೇವತೆಗಳಿಗೆ ಸಂಬಂಧಿಸಿದ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಿ ಪ್ರಸಾರ ಮಾಡಿದ ಆರೋಪ ಎದುರಿಸುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ವಿರುದ್ಧದ ಎಫ್ ಐಆರ್ ರದ್ದುಪಡಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರಾಕರಿಸಿದೆ.

ಹಿಂದೂ ದೇವತೆಗಳಿಗೆ ಸಂಬಂಧಿಸಿದ ವಿಡಿಯೋವನ್ನು ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿ ಪ್ರಸಾರ ಮಾಡಿದ ಆರೋಪ ಎದುರಿಸುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಸೋಮಾ ಸಿಂಗ್ ಧುರ್ವೆ ವಿರುದ್ಧ 2019ರಲ್ಲಿ ದಾಖಲಾಗಿದ್ದ FIR ಅನ್ನು ರದ್ದು ಪಡಿಸಲು ನಿರಾಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹಿಮಾಂಶು ಜೋಶಿ ಅವರಿದ್ದ ಪೀಠವು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಆರೋಪದ ಎಫ್ಐಆರ್ ಅನ್ನು ರಾಜಿ ಆಧಾರದ ಮೇಲೆ ರದ್ದು ಪಡಿಸಲು ಸಾಧ್ಯವಿಲ್ಲ. ದೂರುದಾರರೊಂದಿಗೆ ರಾಜಿ ಮಾಡಿಕೊಂಡರೂ ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಶಾಂತಿಗೆ ಸಂಬಂಧಿಸಿದ ಅಪರಾಧಗಳ ಎಫ್ಐಆರ್ ರದ್ದಾಗುವುದಿಲ್ಲ ಸ್ಪಷ್ಟ ತೀರ್ಪು ನೀಡಿದೆ.

ಆರೋಪಿತ ವ್ಯಕ್ತಿ ಮತ್ತು ದೂರುದಾರರ ನಡುವೆ ರಾಜಿ ನಡೆದಿರುವುದರಿಂದ ಮಾತ್ರ ಕೋಮು ಸೌಹಾರ್ದತೆ, ಸಾರ್ವಜನಿಕ ಶಾಂತಿ ಮತ್ತು ಸಾಮಾಜಿಕ ಹಿತಾಸಕ್ತಿಗೆ ಸಂಬಂಧಿಸಿದ ಅಪರಾಧಗಳ ಮೇಲಿನ ಕ್ರಿಮಿನಲ್ ಪ್ರಕರಣವನ್ನು ರದ್ದು ಪಡಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕಾನ್ಸ್ಟೇಬಲ್ ಸೋಮಾ ಸಿಂಗ್ ಧುರ್ವೆ ಅವರು ತಮ್ಮ ವಿರುದ್ದ ಮಂಡ್ಯಾದ ಕೊತ್ಕಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐಆರ್ ಹಾಗೂ ಅದರ ಆಧಾರದ ಮೇಲೆ ಮುಂದುವರಿದ ಎಲ್ಲಾ ಕಾನೂನು ಕ್ರಮಗಳನ್ನು ರದ್ದು ಪಡಿಸುವಂತೆ ಅರ್ಜಿದಾರರು ಕೋರಿದ್ದರು.

ದೂರುದಾರರಾದ ಸೋನಲ್ ಬರ್ಮನ್ ಅವರು, ಹಿಂದೂ ದೇವತೆಗಳಿಗೆ ಸಂಬಂಧಿಸಿದ ವಿಡಿಯೋವನ್ನು ಧುರ್ವೆ ಮತ್ತು ಇತರ ಸಹ-ಆರೋಪಿಗಳು ಅಪ್ಲೋಡ್ ಮಾಡಿ, ಹಂಚಿಕೊಂಡು ಪ್ರಸಾರ ಮಾಡಿದ್ದು. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು, ವಿವಿಧ ಸಮುದಾಯಗಳ ನಡುವೆ ಅಸಮಾಧಾನ ಮತ್ತು ಕೋಮು ವೈಷಮ್ಮ ಉಂಟಾಗುವ ಸಾಧ್ಯತೆ ಇತ್ತು ಎಂದು ಆರೋಪಿಸಿದ್ದರು.

ಈ ಸಂಬಂಧ IPC ಕಲಂ 295-A, 153-A ಮತ್ತು 505(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸುವ ಕೃತ್ಯಗಳು, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಕೃತ್ಯಗಳು ಹಾಗೂ ಸಾರ್ವಜನಿಕ ಅಶಾಂತಿಗೆ ಕಾರಣವಾಗಬಹುದಾದ ಹೇಳಿಕೆಗಳಿಗೆ ಈ ವಿಧಿಗಳು ಸಂಬಂಧಿಸಿವೆ. ಅರ್ಜಿದಾರರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಕಲಂ 528 ಹಾಗೂ CrPcಯ ಕಲಂ 482 ಅಡಿಯಲ್ಲಿ ಹೈಕೋರ್ಟ್ ಅಂತರ್ಗತ ಅಧಿಕಾರವನ್ನು ಬಳಸಿಕೊಂಡು ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದರು.

ಅರ್ಜಿದಾರರ ಪರ ವಕೀಲರು, ಧುರ್ವೆ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ಆಕ್ಷೇಪಾರ್ಹ ವಿಷಯವನ್ನು ಉದ್ದೇಶಪೂರ್ವಕವಾಗಿ ಅಪ್ ಲೋಡ್ ಅಥವಾ ಪ್ರಸಾರ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸುವ ನೇರ ಹಾಗೂ ಕಾನೂನುಬದ್ಧ ಸಾಕ್ಷವಿಲ್ಲ ಎಂದು ವಾದಿಸಿದರು.

ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿತ ಧುರ್ವೆ ಮತ್ತು ದೂರುದಾರರ ನಡುವೆ ರಾಜಿ ಏರ್ಪಟ್ಟಿತ್ತು. ದೂರುದಾರರು ಪ್ರಮಾಣಪತ್ರ ಸಲ್ಲಿಸಿ, ತಪ್ಪು ತಿಳುವಳಿಕೆಯಿಂದ ವಿವಾದ ಉಂಟಾಗಿದ್ದು, ಪ್ರಕರಣವನ್ನು ಮುಂದುವರಿಸಲು ತಮಗೆ ಇಚ್ಛೆಯಿಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಧುರ್ವೆ ಸರ್ಕಾರಿ ನೌಕರರಾಗಿರುವುದರಿಂದ ಈ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಮತ್ತು ಚಾರ್ಜ್ ಶೀಟ್ ಎದುರಿಸುತ್ತಿದ್ದಾರೆ. ರಾಜಿ ಮಾಡಿಕೊಂಡಿರುವ ಸಂದರ್ಭದಲ್ಲಿ ಪ್ರಕರಣವನ್ನು ಮುಂದುವರಿಸುವುದರಿಂದ ಅವರಿಗೆ ಮತ್ತಷ್ಟು ಅನ್ಯಾಯವಾಗುತ್ತದೆ ಎಂದು ಅರ್ಜಿದಾರರ ಪರ ವಾದಿಸಲಾಯಿತು.

ಆದರೆ ರಾಜ್ಯದ ಪರ ಸರ್ಕಾರಿ ವಕೀಲ ಪ್ರಿಯಾಂಕಾ ಮಿಶ್ರಾ ಅವರು ವಾದ ಮಂಡಿಸಿ, ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಖಾಸಗಿ ವಿವಾದವಲ್ಲ: ಸಾರ್ವಜನಿಕ ಶಾಂತಿ, ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುವ ಅಪರಾಧಗಳು. ಆದ್ದರಿಂದ ದೂರುದಾರರು ರಾಜಿ ಮಾಡಿಕೊಂಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಪ್ರಕರಣವನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನ್ಯಾಯಾಲಯವು ರಾಜ್ಯದ ವಾದವನ್ನು ಅಂಗೀಕರಿಸಿತು. ನ್ಯಾಯಮೂರ್ತಿ ಜೋಶಿ ಅವರು, BNSS ಕಲಂ 528ರ ಅಡಿಯಲ್ಲಿ ಅಂತರ್ಗತ ಅಧಿಕಾರವನ್ನು ಚಲಾಯಿಸುವಾಗ ನ್ಯಾಯಾಲಯವು ಕೇವಲ ದೂರುದಾರರ ಇಚ್ಛೆಯನ್ನು ಮಾತ್ರ ಪರಿಗಣಿಸದೆ, *”ಆರೋಪಿಸಲಾದ ಅಪರಾಧಗಳ ಸ್ವರೂಪ ಮತ್ತು ಗಂಭೀರತೆ”*ಯನ್ನೂ ಪರಿಗಣಿಸಬೇಕು ಎಂದು ಹೇಳಿದರು. IPಅ ಕಲಂ 295-A, 153-A ಮತ್ತು 505(2)ರ ಅಡಿಯಲ್ಲಿ ಆರೋಪಿಸಲಾದ ಅಪರಾಧಗಳು ಕೇವಲ ವೈಯಕ್ತಿಕ ಹಕ್ಕುಗಳಿಗೆ ಸಂಬಂಧಿಸಿದವುಗಳಲ್ಲ. ಅವು ಸಾರ್ವಜನಿಕ ಶಾಂತಿ, ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಹಿತಾಸಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ರಾಜಿ ನಡೆದಿರುವುದು ವಿಚಾರಣೆಯ ಸಂದರ್ಭದಲ್ಲಿ ಸಂಬಂಧಿತ ಅಂಶವಾಗಿರಬಹುದು. ಆದರೆ ರಾಜಿ ಮಾಡಿಕೊಂಡಿರುವುದೊಂದೇ ಕಾರಣಕ್ಕೆ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ, ಏಕೆಂದರೆ ಈ ಪ್ರಕರಣದಲ್ಲಿ “ಸಾರ್ವಜನಿಕ ಹಿತಾಸಕ್ತಿಯ ಅಂಶ” ಇದೆ ಎಂದು ನ್ಯಾಯಪೀಠ ತಿಳಿಸಿತು. ಹೀಗಾಗಿ ಅರ್ಜಿಯನ್ನು ವಜಾಗೊಳಿಸಿ, ಧುರ್ವೆ ವಿರುದ್ಧದ ಎಫ್ಐಆರ್ ಮತ್ತು ಅದರ ಆಧಾರದ ಮೇಲೆ ನಡೆಯುತ್ತಿರುವ ಮುಂದಿನ ಕಾನೂನು ಪ್ರಕ್ರಿಯೆಗಳು ವಿಚಾರಣಾ ನ್ಯಾಯಾಲಯದಲ್ಲಿ ಮುಂದುವರಿಯಲು ಅವಕಾಶ ಕೊಟ್ಟಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.