15/09/2026

Law Guide Kannada

Online Guide

ಸಾಕುನಾಯಿ ವಿಹಾರಕ್ಕೆ ಕ್ರೀಡಾಂಗಣ ಖಾಲಿ ಮಾಡಿಸಿದ್ದ ಕೇಸ್: IAS ಅಧಿಕಾರಿ ಮರು ನೇಮಕಕ್ಕೆ ಸುಪ್ರೀಂ ತಡೆ

ನವದೆಹಲಿ: ತಾವು ಸಾಕಿದ್ದ ನಾಯಿಯ ವಿಹಾರಕ್ಕಾಗಿ ಕ್ರೀಡಾಪಟಗಳನ್ನು ಹೊರಹಾಕಿ ಇಡೀ ಕ್ರೀಡಾಂಗಣವನ್ನೇ ಖಾಲಿ ಮಾಡಿಸಿದ್ದ ಆರೋಪ ಹೊತ್ತು ಕಡ್ಡಾಯ ನಿವೃತ್ತಿಗೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ರಿಂಕು ಧುಗ್ಗಾ ಅವರನ್ನ ಮತ್ತೆ ಕರ್ತವ್ಯಕ್ಕೆ ಮರುನೇಮಕ ಮಾಡುವುದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯ ಬಾಗ್ಚಿ ವಿ.ಮೋಹನಾ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ.

2022ರಲ್ಲಿ ತಮ್ಮ ಸಾಕು ನಾಯಿಯ ವಿಹಾರಕ್ಕಾಗಿ ಕ್ರೀಡಾಪಟಗಳನ್ನು ಹೊರಹಾಕಿ ಇಡೀ ಕ್ರೀಡಾಂಗಣವನ್ನೇ ಖಾಲಿ ಮಾಡಿಸಿದ್ದ ಆರೋಪದಲ್ಲಿ ಕೇಂದ್ರ ಸರ್ಕಾರವು ಕಡ್ಡಾಯ ನಿವೃತ್ತಿ’ಗೊಳಿಸಿದ ಐಎಎಸ್ ಅಧಿಕಾರಿ ರಿಂಕು ಧುಗ್ಗಾ ಅವರನ್ನು ಕರ್ತವ್ಯಕ್ಕೆ ಮರುನೇಮಕಕ್ಕೆ ಆದೇಶಿಸಲಾಗಿತ್ತು.

ತ್ಯಾಗರಾಜ್ ಕ್ರೀಡಾಂಗಣವನ್ನು ತಮ್ಮ ನಾಯಿಯ ವಿಹಾರಕ್ಕಾಗಿ ರಿಂಕು ಧುಗ್ಗಾ ಖಾಲಿ ಮಾಡಿಸಿದ್ದರು. ಅವರ ಪತಿಯೂ ಐಎಎಸ್ ಅಧಿಕಾರಿಯಾಗಿದ್ದು, ಈ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯ ಕಠಿಣ ಕ್ರಮ ಕೈಗೊಂಡಿದ್ದವು. ಕೇಂದ್ರದ ‘ಕಡ್ಡಾಯ ನಿವೃತ್ತಿ’ ನಿರ್ಧಾರವನ್ನು ಧುಗ್ಗಾ ಅವರು ಕೇಂದ್ರ ಆಡಳಿತ ನ್ಯಾಯಮಂಡಳಿಯಲ್ಲಿ (ಸಿಎಟಿ) ಪ್ರಶ್ನಿಸಿದ್ದರು. ಸಿಎಟಿ ಅವರನ್ನು ಮರುನೇಮಕ ಮಾಡಲು ಆದೇಶಿಸಿತ್ತು.

ಇದಾದ ಬಳಿಕ ದೆಹಲಿ ಹೈಕೋರ್ಟ್ ಏಪ್ರಿಲ್ 15ರಂದು ಪ್ರಕಟಿಸಿದ ಆದೇಶದಲ್ಲಿ ಸಿಎಟಿ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ‘ಕೆಲಸಕ್ಕೆ ಅಸಮರ್ಥರಾದವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಬಹುದು, ಈ ತತ್ವವು ರಿಂಕು ಧುಲ್ಲಾ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದು ಹೇಳಿತ್ತು.

ನಂತರ ಹೈಕೋರ್ಟ್ ತೀರ್ಪಿನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು ಐಎಎಸ್ ಅಧಿಕಾರಿ ರಿಂಕು ಧುಗ್ಗಾ ಅವರನ್ನ ಮತ್ತೆ ಕರ್ತವ್ಯಕ್ಕೆ ಮರುನೇಮಕ ಮಾಡುವುದಕ್ಕೆ ತಡೆ ನೀಡಿ ದುಗ್ಗಾ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಪ್ರತಿವಾದಿಯ ಮರುನೇಮಕಕ್ಕೆ ತಡೆ ಮುಂದುವರಿಯುತ್ತದೆ ಎಂದಿರುವ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಪಟ್ಟಿ ಮಾಡಿದೆ.

ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.