13/09/2026

Law Guide Kannada

Online Guide

CJP ಪ್ರತಿಭಟನೆ ಪ್ರಕರಣ: ಎಫ್ ಐಆರ್ ಗೆ ಆದೇಶಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ, ಸಮಿತಿಗಲ್ಲ- ಸುಪ್ರೀಂಕೋರ್ಟ್

ನವದೆಹಲಿ: ಜುಲೈನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಐವರು ಸದಸ್ಯರ ಉನ್ನತಾಧಿಕಾರ ಸಮಿತಿಯು (ಎಚ್ಪಿಇಸಿ) ಎಫ್ ಐಆರ್ಗಳನ್ನು ದಾಖಲಿಸುವಂತೆ ಆದೇಶಿಸಲು ಸಾಧ್ಯವಿಲ್ಲ. ಪ್ರತಿಭಟನೆ ಪ್ರಕರಣಗಳಲ್ಲಿ ನ್ಯಾಯಾಲಯ ಮಾತ್ರ ಎಫ್ಐಆರ್ ಗೆ ಆದೇಶಿಸಬಹುದು, ಸಮಿತಿಯಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠವು , ಉನ್ನತಾಧಿಕಾರ ಸಮಿತಿಯು ಆರೋಪಗಳನ್ನು ಪರಿಶೀಲಿಸಿ, ಸಂತ್ರಸ್ತರನ್ನು ಗುರುತಿಸಿ ಶಿಫಾರಸುಗಳನ್ನು ಮಾಡಲಿದೆ. ಕ್ರಿಮಿನಲ್ ತನಿಖೆಯನ್ನು ನಿರ್ದೇಶಿಸುವ ಅಧಿಕಾರವು ಸಂಪೂರ್ಣವಾಗಿ ನ್ಯಾಯಾಲಯಕ್ಕೆ ಮಾತ್ರ ಸೇರಿದೆ. ಕ್ರಿಮಿನಲ್ ತನಿಖೆಗೆ ಆದೇಶಿಸುವ ಯಾವುದೇ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯವೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿತು.

‘ಈ ಸಮಿತಿಯು ಈ ನ್ಯಾಯಾಲಯದ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದ ನ್ಯಾಯಪೀಠವು, ಸಮಿತಿಯ ಕಾರ್ಯಕಲಾಪಗಳನ್ನು ತ್ವರಿತಗೊಳಿಸಲು ಒಪ್ಪಿಗೆ ಸೂಚಿಸಿದ ಪೀಠವು, ಅದರ ಕಾರ್ಯನಿರ್ವಹಣೆಯ ಸಮಯದಲ್ಲಿ ಎದುರಾಗುವ ಯಾವುದೇ ತೊಡಕುಗಳನ್ನು ತಾನು ಬಗೆಹರಿಸುವುದಾಗಿ ತಿಳಿಸಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ತನಗೆ ನೆರವಾಗಲು ಎಚ್ಪಿಇಸಿ ತನ್ನದೇ ಆದ ಅಮಿಕಸ್ ಕ್ಯೂರೆ ಅಥವಾ ವಕೀಲರನ್ನು ನೇಮಿಸಿಕೊಳ್ಳಬಹುದು ಎಂದು ತಿಳಿಸಿತು.

ಸಮಿತಿಯು ತನ್ನ ಕಾರ್ಯಕಲಾಪಗಳಿಗೆ ವ್ಯಾಪಕ ಪ್ರಚಾರ ನೀಡಲು, ಸಲಹೆಗಳು ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲು ಮತ್ತು ತನ್ನನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಿಲ್ಲದ ದುರ್ಬಲ ಸಾಕ್ಷಿಗಳಿಗಾಗಿ ಸಹಾಯವಾಣಿ ಸೇರಿದಂತೆ ಪ್ರತ್ಯೇಕ ವ್ಯವಸ್ಥೆಯನ್ನು ಸೃಷ್ಟಿಸಲು ನ್ಯಾಯಾಲಯವು ಅನುಮತಿ ನೀಡಿತು.

ಕೇಂದ್ರ ಮತ್ತು ದಿಲ್ಲಿ ಪೊಲೀಸ್ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಸಮಿತಿಯ ಮೊದಲ ಸಭೆಯು ಸೆ.15 ರಂದು ನಿಗದಿಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಜುಲೈ 20 ಮತ್ತು 25ರ ನಡುವೆ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್ಐಆರ್ಗಳನ್ನು ಮುಂದುವರಿಸಬಾರದು ಅಥವಾ ತನಿಖೆ ಮಾಡಬಾರದು ಮತ್ತು ಅವುಗಳನ್ನು ಮುಕ್ತಾಯಗೊಂಡಂತೆ ಪರಿಗಣಿಸಬೇಕು ಎಂದು ಅದು ಆದೇಶಿಸಿತ್ತು. ಜೊತೆಗೆ ಆ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಎಫ್ ಐಆರ್ಗಳನ್ನು ದಾಖಲಿಸಬಾರದು ಎಂದು ನಿರ್ದೇಶಿಸಿತ್ತು.

ಜುಲೈ 20ರ ವಿದ್ಯಾರ್ಥಿ ಪ್ರತಿಭಟನೆಯಿಂದ ಉದ್ಭವಿಸಿದ ಆರೋಪ-ಪ್ರತ್ಯಾರೋಪಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಆರ್.ಸುಭಾಷ್ ರೆಡ್ಡಿ ನೇತೃತ್ವದಲ್ಲಿ ಎಚ್ಪಿಇಸಿಯನ್ನು ರಚಿಸಲಾಗಿದೆ. ಪೊಲೀಸರಿಂದ ಅತಿಯಾದ ಬಲಪ್ರಯೋಗ, ಭದ್ರತಾ ಸಿಬ್ಬಂದಿಯ ವಿರುದ್ಧ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯ ಆರೋಪಗಳು ಇವುಗಳಲ್ಲಿ ಸೇರಿವೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.