ನ್ಯಾಯಮಂಡಳಿಗಳ ನಿಷ್ಕ್ರಿಯ ಬಯಸಲ್ಲ: ಅಧಿಕಾರವಧಿ ವಿಸ್ತರಣೆ ಪರಿಗಣಿಸಿ – ಸುಪ್ರೀಂಕೋರ್ಟ್
ನವದೆಹಲಿ: `ಹುದ್ದೆಗಳು ಖಾಲಿ ಇರುವುದರಿಂದ ಅರೆ ನ್ಯಾಯಾಂಗ ಸಂಸ್ಥೆಗಳು ನಿಷ್ಕ್ರಿಯವಾಗುವುದನ್ನು ನಾವು ಬಯಸುವುದಿಲ್ಲ. ಹೀಗಾಗಿ ಹೊಸ ನೇಮಕಾತಿಗಳು ನಡೆಯುವವರೆಗೆ ಅಂತಹ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯನ್ನು ಒಂದು ತಿಂಗಳವರೆಗೆ ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತು.
ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ (ಡಿಆರ್ಎಟಿ) ಸೇರಿದಂತೆ ವಿವಿಧ ನ್ಯಾಯಮಂಡಳಿಗಳಲ್ಲಿರುವ ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (ಸಿಜೆಐ), ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠ ಈ ಸೂಚನೆ ನೀಡಿತು.
ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ವಾದ ಮಂಡಿಸಿ, ಹೊಸ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅವಧಿಯನ್ನು ತಾತ್ಕಾಲಿಕವಾಗಿ ವಿಸ್ತರಿಸುವಂತೆ ಕೋರಿ ಸಲ್ಲಿಸಲಾದ ಮನವಿಗಳನ್ನು ಪರಿಗಣಿಸಬಾರದು’ ಎಂದು ಮನವಿ ಮಾಡಿದರು.
ಡಿಆರ್ಎಟಿಯಲ್ಲಿನ ಕೆಲ ಸದಸ್ಯರು ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ. ‘ಹುದ್ದೆಗಳ ಭರ್ತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಆದ್ದರಿಂದ ಈ ಮಧ್ಯಂತರ ಅರ್ಜಿಗಳನ್ನು ಪರಿಗಣಿಸುವ ಅಗತ್ಯವಿಲ್ಲ. ಒಂದು ಅಥವಾ ಎರಡು ತಿಂಗಳ ಅವಧಿಯಲ್ಲಿ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ’ ಎಂದು ವೆಂಕಟರಮಣಿ ತಿಳಿಸಿದರು.
ತಾತ್ಕಾಲಿಕ ವ್ಯವಸ್ಥೆಯನ್ನು ಒಂದು ತಿಂಗಳವರೆಗೆ ವಿಸ್ತರಿಸುವ ನಿರ್ಧಾರವನ್ನು ನಿಮ್ಮ ಹಂತದಲ್ಲಿ ತೆಗೆದುಕೊಳ್ಳಲು ಸಾಧ್ಯವೇ’? ‘ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂಬ ಖಚಿತ ಭರವಸೆಯನ್ನು ನೀವು ನಮಗೆ ನೀಡಬೇಕು. ನಾವು ಈ ಅರ್ಜಿಗಳನ್ನು ವಿಲೇವಾರಿ ಮಾಡಿದ ನಂತರವೂ ಹೊಸ ನೇಮಕಾತಿ ನಡೆಯದಿದ್ದರೆ, ಮತ್ತೆ ಇದೇ ರೀತಿಯ ಸಮಸ್ಯೆಗಳು ಆರಂಭವಾಗುತ್ತವೆ’ ಎಂದು ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ಈ ವೇಳೆ ಅಟಾರ್ನಿ ಜನರಲ್ ವೆಂಕಟರಮಣಿ ಅವರು, ‘ಈಗ ನ್ಯಾಯಮಂಡಳಿ ಸುಧಾರಣೆ ಕಾಯ್ದೆ ಜಾರಿಗೆ ಬಂದಿದ್ದು, ಅದು ನೇಮಕಾತಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು.
“ನ್ಯಾಯಮಂಡಳಿಗಳು ನಿಷ್ಕ್ರಿಯವಾಗುವುದನ್ನು ನಾವು ಬಯಸುವುದಿಲ್ಲ. ಪ್ರಸ್ತುತ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮುಂದುವರಿಸಬಹುದು’ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿ ವಿಚಾರಣೆಯನ್ನು ಮುಂದೂಡಿದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
