ನಿರ್ದಿಷ್ಟ ನ್ಯಾಯಾಧೀಶರೇ ಪ್ರಕರಣದ ವಿಚಾರಣೆ ನಡೆಸಬೇಕೆಂಬ ದಾವೆದಾರರ ಬಯಕೆಗೆ ಕಾನೂನಿನಲ್ಲಿ ಆಸ್ಪದವಿಲ್ಲ- ಹೈಕೋರ್ಟ್
ಬೆಂಗಳೂರು: ‘ಯಾವುದೇ ದಾವೆದಾರ ತನಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯು ಇಂತಹುದೇ ನಿರ್ದಿಷ್ಟ ನ್ಯಾಯಾಧೀಶರ ಮುಂದೆ ನಡೆಯಬೇಕು ಎಂದು ಒತ್ತಾಯಿಸುವ ಸ್ಥಾಪಿತ ಹಕ್ಕನ್ನು ಹೊಂದಿರುವುದಿಲ್ಲ. ನಿರ್ದಿಷ್ಟ ನ್ಯಾಯಾಧೀಶರ ಮುಂದೆಯೇ ವಿಚಾರಣೆ ಮುಂದುವರಿಯಬೇಕು ಎಂದು ಬಯಸುವುದಕ್ಕೆ ಕಾನೂನಿನಲ್ಲಿ ಆಸ್ಪದವಿಲ್ಲ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
‘ತಮ್ಮ ವಿರುದ್ಧದ ಕೊಲೆ ಆರೋಪ ಪ್ರಕರಣದ ವಿಚಾರಣೆಯನ್ನು ಬೇರೊಂದು ಕೋರ್ಟ್ಗೆ ವರ್ಗಾಯಿಸಿರುವುದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಬಸವೇಶ್ವರ ನಗರದ ಕೃಷ್ಣಮೂರ್ತಿ ಅಲಿಯಾಸ್ ಮೂರ್ತಿ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸ್ಸನ ಅವರಿದ್ದ ಏಕಸದಸ್ಯ ನ್ಯಾಯಪೀಠವು ‘ಯಾವುದೇ ಆರೋಪಿ ತನ್ನ ಪ್ರಕರಣವು, ಸಮರ್ಥ ಮತ್ತು ನಿಷ್ಪಕ್ಷಪಾತ ನ್ಯಾಯಾಲಯದ ಮುಂದೆ ನ್ಯಾಯಯುತ ವಿಚಾರಣೆಗೆ ಒಳಗಾಬೇಕು ಎಂದು ಒತ್ತಾಯಿಸುವ ಹಕ್ಕು ಹೊಂದಿರುತ್ತಾನೆ ಎಂಬುದೇನೋ ಸರಿ. ಆದರೆ, ಇಂತಹುದೇ ನಿರ್ದಿಷ್ಟ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸುವ ಸ್ಥಾಪಿತ ಹಕ್ಕನ್ನು ಹೊಂದಿರುವುದಿಲ್ಲಎಂದು ಸ್ಪಷ್ಟಪಡಿಸಿತು.
‘ಕ್ರಿಮಿನಲ್ ಪ್ರಕರಣದ ವಿಚಾರಣೆಯ ಪ್ರಾರಂಭ ಅಥವಾ ಗಣನೀಯ ಪ್ರಗತಿಯ ನಂತರ ಅದನ್ನು ಬೇರೊಂದು ನ್ಯಾಯಾಧೀಶರ ಕೋರ್ಟ್ಗೆ ವರ್ಗಾವಣೆ ಮಾಡಿಬಹುದಾಗಿದೆ. ಸಾಕ್ಷ್ಯ ವಿಚಾರಣೆ ಪೂರ್ಣಗೊಳ್ಳದ, ಅರೋಪಿಯ ಹೇಳಿಕೆ ದಾಖಲಿಸುವ ಹಂತ ತಲುಪದ ಹಾಗೂ ಅಂತಿಮ ವಾದ ಅಥವಾ ತೀರ್ಪಿಗಾಗಿ ಕಾಯ್ದಿರಿಸದೇ ಅರ್ಧಕ್ಕೆ ನಿಂತಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಬಹುದು. ಹೀಗೆ ವರ್ಗಾವಣೆ ಮಾಡಿದ ತಕ್ಷಣ ಕಾನೂನು ವಿಚಾರಣೆಯ ನಿರಂತರತೆ ಸೋಲುತ್ತದೆ ಎಂಬುದಕ್ಕೆ ಕಾನೂನಿನ ಆಶ್ರಯವಿಲ್ಲ. ಒಬ್ಬ ನ್ಯಾಯಾಧೀಶರು ಸಾಕ್ಷ್ಯವನ್ನು ದಾಖಲಿಸಬಹುದು ಮತ್ತು ಇನ್ನೊಬ್ಬರು ಪ್ರಕರಣವನ್ನು ಮುಂದುವರಿಸಬಹುದು ಎಂದು ಕಾನೂನು ಸ್ವತಃ ಪರಿಗಣಿಸಿದಾಗ, ಇಂತಹ ಶಾಸಕಾಂಗದ ಆದೇಶಕ್ಕೆ ಅಗತ್ಯವಾಗಿ ಮಣಿಯಬೇಕು ಎಂದು ನ್ಯಾಯಪೀಠ ವಿವರಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಹಷ್ಮತ್ ಪಾಷ, ‘ವಿಚಾರಣೆ ಕೊನೆಯ ಹಂತದಲ್ಲಿದ್ದು, ಈತನಕ ವಿಚಾರಣೆ ನಡೆಸಿರುವ ನ್ಯಾಯಾಧೀಶರು ಸಾಕ್ಷಿಗಳ ವರ್ತನೆಯನ್ನು ಬಲ್ಲವರಾಗಿದ್ದಾರೆ. ಹಾಗಾಗಿ, ಸಾಕ್ಷ್ಯಗಳನ್ನು ದಾಖಲಿಸಿದ ನ್ಯಾಯಾಧೀಶರೇ ಪ್ರಕರಣವನ್ನು ವಿಲೇವಾರಿ ಮಾಡುವುದು ಸಮಂಜಸ’ ಎಂದು ವಾದ ಮಂಡಿಸಿದ್ದರು.
ಪ್ರತಿಯಾಗಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಯಾವುದೇ ಕ್ರಿಮಿನಲ್ ಪ್ರಕರಣ ಕಾನೂನುಬದ್ಧವರ್ಗಾವಣೆ ಪಡೆದ ನಂತರ ಯಾರು ವಿಚಾರಣೆಯನ್ನು ಪ್ರಾರಂಭಿಸುತ್ತಾರೆಯೋ ಅವರೇ ಅದನ್ನು ಮುಕ್ತಾಯಗೊಳಿಸಬೇಕು ಎಂಬ ವಾದಕ್ಕೆ ಕಾನೂನಿನ ಮಾನ್ಯತೆ ಇಲ್ಲ’ ಎಂದು ಅರ್ಜಿದಾರರ ವಾದಾಂಶವನ್ನು ಅಲ್ಲಗಳೆದಿದ್ದರು.
ಪ್ರಕರಣ ವರ್ಗಾವಣೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ
ಅರ್ಜಿದಾರ ಕೃಷ್ಣಮೂರ್ತಿ ವಿರುದ್ಧ: ಭಾರತೀಯ ದಂಡ ಸಂಹಿತೆ 1860ರ ಕಲಂ 302ರ ಅಡಿಯಲ್ಲಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಪ್ರಕರಣ ವರ್ಗಾವಣೆಯಾದಾಗ ತನಿಖಾಧಿಕಾರಿಯಾಗಿದ್ದ 20ನೇ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಬಾಕಿಯಿತ್ತು. ಈ ಹಂತದಲ್ಲಿ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನ ಪ್ರಧಾನ ನ್ಯಾಯಾಧೀಶರು 2026ರ ಮೇ 20ರಂದು ಅಧಿಸೂಚನೆ ಹೊರಡಿಸಿ, ಬೆಂಗಳೂರು ನಗರದ ವಿಚಾರಣಾ ನ್ಯಾಯಾಲಯಗಳ ನಡುವೆ ಪೊಲೀಸ್ ಠಾಣೆಗಳು ಮತ್ತು ಉಪವಿಭಾಗಗಳನ್ನು ಮರುಹಂಚಿಕೆ ಮಾಡಿದ್ದರು. ಪರಿಣಾಮ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಆದೇಶ ಕಾನೂನುಬಾಹಿರ ಮತ್ತು ಅಧಿಕಾರ ದುರುಪಯೋಗದ ಪ್ರತೀಕವಾಗಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
