ಕೋರ್ಟ್ ಗೆ ಕುಡಿದು ಬಂದು ಕೂಗಾಡಿದ ಲಾಯರ್ ಗೆ ಶಾಕ್ ಕೊಟ್ರು ಜಡ್ಜ್
ಕಾರವಾರ: ಕಾರವಾರದಲ್ಲಿ ನ್ಯಾಯಾಲಯಕ್ಕೆ ಕುಡಿದು ಬಂದು ನ್ಯಾಯಾಧೀಶರ ವಿರುದ್ದ ಕೂಗಾಡಿ ವಾಗ್ವಾದ ನಡೆಸಿದ ಆರೋಪ ಪ್ರಕರಣದಲ್ಲಿ 55 ವರ್ಷದ ವಕೀಲರೊಬ್ಬರಿಗೆ ಕರ್ನಾಟಕ ಹೈಕೋರ್ಟ್ ಒಂದು ದಿನದ ಸರಳ ಜೈಲು ಶಿಕ್ಷೆಯ ಜೊತೆಗೆ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕಾರವಾರ ಮೂಲದ ವಕೀಲ ಪಂಕಜ್ ಕೌಶಿಕ್ ಅವರನ್ನು ನ್ಯಾಯಾಂಗ ನಿಂದನೆಗೆ ತಪ್ಪಿತಸ್ಥರೆಂದು ಹೈಕೋರ್ಟ್ನ ವಿಭಾಗೀಯ ಪೀಠ ತೀರ್ಮಾನಿಸಿ ಶಿಕ್ಷೆ ವಿಧಿ ಸಿದೆ. ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವೆಂಕಟೇಶ್ ನಾಯಕ್ ಟಿ ಅವರ ಪೀಠವು, ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ ಪಂಕಜ್ ಕೌಶಿಕ್ ಅವರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ Contempt of Courts Act, 1971ರ ಸೆಕ್ಷನ್ 12(1) ಅಡಿಯಲ್ಲಿ ಶಿಕ್ಷೆ ವಿಧಿಸಿದೆ.
ಏನಿದು ಘಟನೆ.. .
2022ರ ಏಪ್ರಿಲ್ 8ರಂದು ಮೊದಲ ಘಟನೆ ನಡೆದಿತ್ತು. ಪತ್ನಿ ದಾಖಲಿಸಿದ್ದ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಪಂಕಜ್ ಕೌಶಿಕ್ ಸ್ವತಃ ತಮ್ಮ ಪರ ವಾದಿಸುತ್ತಿದ್ದರು. ಅಂದು ಅವರ ಪ್ರಕರಣ ವಿಚಾರಣೆಗೆ ಪಟ್ಟಿ ಆಗಿರದಿದ್ದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿ, ತಮ್ಮ ಪ್ರಕರಣಕ್ಕೆ ದಿನಾಂಕ ನಿಗದಿಪಡಿಸಿಲ್ಲ ಎಂದು ನ್ಯಾಯಾಧೀಶರ ವಿರುದ್ಧ ಕೂಗಾಡಿದ್ದರು. ಕೋರ್ಟ್ ಸಿಬ್ಬಂದಿಯೊಂದಿಗೂ ಅವರು ಅಸಭ್ಯವಾಗಿ ವರ್ತಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಇದೇ ವೇಳೆ ಸಿವಿಲ್ ನ್ಯಾಯಾಧೀಶರು ತಮ್ಮ ಪತ್ನಿಯಿಂದ ಹಣ ಪಡೆದು ಆಕೆಯ ಪರ ತೀರ್ಪು ನೀಡಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದರು. ಎಚ್ಚರಿಕೆ ನೀಡಿದರೂ ವರ್ತನೆ ಮುಂದುವರಿಸಿದ್ದರು. ಹೈಕೋರ್ಟ್ ನ್ಯಾಯಾಧೀಶರ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪ್ರಕರಣದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಏಪ್ರಿಲ್ 11ರಂದು ತಮ್ಮ ವರ್ತನೆ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಹೇಳಿ ಕ್ಷಮೆಯಾಚಿಸಿದ್ದರು.
ಆದರೆ ಕೆಲವೇ ದಿನಗಳ ಬಳಿಕ, ಏಪ್ರಿಲ್ 20ರಂದು ಮತ್ತೆ ಇದೇ ನ್ಯಾಯಾಲಯದಲ್ಲಿ ಮತ್ತೊಂದು ಘಟನೆ ನಡೆದಿದೆ. ಬೇರೆ ಪ್ರಕರಣದ ವಕೀಲರು ವಾದ ಮಂಡಿಸುತ್ತಿದ್ದ ವೇಳೆ ಕೌಶಿಕ್ ಮಧ್ಯಪ್ರವೇಶಿಸಿ ತಮ್ಮ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ನ್ಯಾಯಾಧೀಶರು ಮಧ್ಯಪ್ರವೇಶಿಸಿದಾಗ ನ್ಯಾಯಾಲಯದಲ್ಲಿದ್ದವರೊಂದಿಗೆ ಜೋರಾಗಿ ವಾಗ್ವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಮದ್ಯ ಸೇವಿಸಿರುವ ಅನುಮಾನ ಮೂಡಿದ್ದು, ಮದ್ಯದ ವಾಸನೆ ಬರುತ್ತಿದ್ದುದಲ್ಲದೆ ಸರಿಯಾಗಿ ನಿಲ್ಲಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ತಿಳಿಸಲಾಗಿದೆ. ಹೀಗಾಗಿ ಸಿವಿಲ್ ನ್ಯಾಯಾಧೀಶರು ಅವರನ್ನು ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಪರೀಕ್ಷೆಯ ಬಳಿಕ ಅವರು ಮದ್ಯ ಸೇವಿಸಿರುವುದನ್ನು ದೃಢಪಡಿಸುವ ಪ್ರಮಾಣಪತ್ರ ನೀಡಲಾಗಿತ್ತು.
ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಕೌಶಿಕ್ ನಿರಾಕರಿಸಿದ್ದರು. ತಾವು 18 ವರ್ಷಗಳಿಂದ ಯಾವುದೇ ಕಳಂಕವಿಲ್ಲದೆ ವಕೀಲ ವೃತ್ತಿ ನಡೆಸುತ್ತಿದ್ದೇನೆ ಎಂದು ಹೇಳಿದ್ದ ಅವರು, ಹಲವು ವರ್ಷಗಳಿಂದ ಅಪಸ್ಮಾರ ಸಮಸ್ಯೆಯಿಂದ ಬಳಲುತ್ತಿದ್ದೇನೆ ಹಾಗೂ ಹಾಸಿಗೆ ಹಿಡಿದಿರುವ 75 ವರ್ಷದ ತಾಯಿಯನ್ನು ತಾವೇ ನೋಡಿಕೊಳ್ಳುತ್ತಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಅವರ ವರ್ತನೆ ಮತ್ತು ವಿಚಾರಣೆ ವೇಳೆ ನೀಡಿದ ಪ್ರತಿಕ್ರಿಯೆಗಳನ್ನು ಪರಿಗಣಿಸಿದ ಹೈಕೋರ್ಟ್ ಪೀಠ, ತಮ್ಮ ಕೃತ್ಯಕ್ಕೆ ಅವರು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಹೇಳಿದೆ. ಬದಲಿಗೆ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಲ್ಲದೆ, ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಆಧಾರರಹಿತ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪೀಠ ಗಮನಿಸಿದೆ.
ನ್ಯಾಯಾಲಯದ ಗೌರವ ಹಾಗೂ ಕಲಾಪದ ಶಿಸ್ತು ಕಾಪಾಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟ ಪೀಠ, ಇಂತಹ ವರ್ತನೆಗೆ ಶಿಕ್ಷೆ ವಿಧಿಸದಿದ್ದರೆ ಮುಂದೆ ಇದೇ ರೀತಿಯ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಅಂತಿಮವಾಗಿ ಪಂಕಜ್ ಕೌಶಿಕ್ ಅವರನ್ನು ನ್ಯಾಯಾಂಗ ನಿಂದನೆಗೆ ತಪ್ಪಿತಸ್ಥರೆಂದು ಘೋಷಿಸಿ, ನ್ಯಾಯಾಲಯ ಏಳುವವರೆಗಿನ ಒಂದು ದಿನದ ಸರಳ ಜೈಲು ಶಿಕ್ಷೆ ಹಾಗೂ ₹2 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
