19/09/2026

Law Guide Kannada

Online Guide

ಅವಾಚ್ಯವಾಗಿ ನಿಂದಿಸಿಕೊಳ್ಳಬೇಡಿ, ಮಕ್ಕಳಿಗೆ ಉತ್ತಮ ಪೋಷಕರಾಗಿ-ವಿವಾಹ ರದ್ದುಗೊಳಿಸಿ ಬುದ್ದಿವಾದ ಹೇಳಿದ ಹೈಕೋರ್ಟ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಬೆಳೆದು ಅಂಗೈನಲ್ಲಿ ಪ್ರಪಂಚ ಎಂಬ ನಾಣ್ಣುಡಿಯಿದೆ. ಆದರೆ , ದಂಪತಿಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡುವ ಪ್ರಕರಣಗಳೇ ಹೆಚ್ಚಾಗಿದ್ದು ಕೋರ್ಟ್ ಮೆಟ್ಟಿಲೇರಿ ಡಿವರ್ಸ್ ಪಡೆಯುವ ಹಂತಕ್ಕೆ ತಲುಪಿದೆ. ಈ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರಲ್ಲಿ ವಿವಾಹ ರದ್ದುಗೊಳಿಸುವ ವೇಳೆ ದಂಪತಿಗೆ ಹೈಕೋರ್ಟ್ ಬುದ್ದಿವಾದ ಹೇಳಿದ ಪ್ರಸಂಗ ನಡೆದಿದೆ.

ದಂಪತಿಗಳು ತಮ್ಮ ಅಪ್ರಾಪ್ತ ಮಕ್ಕಳ ಪೋಷಕರಾಗಿ ಮುಂದುವರಿಯಬೇಕು, ಮಕ್ಕಳ ಸಮ್ಮುಖದಲ್ಲಿ ಅಥವಾ ಅವರಿಗೆ ಕೇಳಿಸುವಂತೆ ಪರಸ್ಪರರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ಅವಾಚ್ಯವಾಗಿ ನಿಂದಿಸಿಕೊಳ್ಳಬೇಡಿ, ಮಕ್ಕಳಿಗೆ ಉತ್ತಮ ಪೋಷಕರಾಗಿ. ಮಕ್ಕಳು ತಮ್ಮ ತಂದೆ-ತಾಯಿ ಇಬ್ಬರೊಂದಿಗೂ ಪ್ರೀತಿ, ಆರೋಗ್ಯಕರ ಹಾಗೂ ಯಾವುದೇ ಅಡೆತಡೆಯಿಲ್ಲದ ಸಂಬಂಧವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಹೈಕೋರ್ಟ್ ತಿಳಿ ಹೇಳಿದೆ.

ಮಂಗಳೂರಿನ ಪತ್ನಿಗೆ ಪತಿಯು 2 ಕೋಟಿ ರೂಪಾಯಿ ಶಾಶ್ವತ ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯವು ಜೂನ್ 20, 2026 ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, ಮಂಗಳೂರಿನ 40 ವರ್ಷದ ವ್ಯಕ್ತಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ಇತ್ಯರ್ಥಪಡಿಸುವಾಗ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ
ಕಾಲೇಜು ಸಹಪಾಠಿಗಳಾಗಿದ್ದ ಈ ದಂಪತಿ 2011 ರಲ್ಲಿ ಮಂಗಳೂರಿನಲ್ಲಿ ವಿವಾಹವಾಗಿ ನಂತರ ಯುಕೆಗೆ (UK) ತೆರಳಿದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ವೈವಾಹಿಕ ಜೀವನದಲ್ಲಿನ ಬಿರುಕಿನ ಕಾರಣದಿಂದಾಗಿ, ಪತ್ನಿ 2021 ರಲ್ಲಿ ಪತಿಯನ್ನು ತೊರೆದರು. ನಂತರ ಭಾರತದಲ್ಲಿ ವಿಚ್ಛೇದನಕ್ಕಾಗಿ ಮೊಕದ್ದಮೆ ಹೂಡಲಾಯಿತು. ವೈದ್ಯೆಯಾಗಿರುವ ಪತ್ನಿಯ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಕೌಟುಂಬಿಕ ನ್ಯಾಯಾಲಯವು 2 ಕೋಟಿ ರೂಪಾಯಿಗಳ ಶಾಶ್ವತ ಜೀವನಾಂಶವನ್ನು ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ 50 ಲಕ್ಷ ರೂಪಾಯಿಗಳಿಗೆ ಇಳಿಸಿತು. ಪ್ರತಿ ಮಗುವಿನ ನಿರ್ವಹಣೆ, ಶಿಕ್ಷಣ, ವೈದ್ಯಕೀಯ ಮತ್ತು ಇತರ ಸಮಂಜಸವಾದ ಅಗತ್ಯಗಳಿಗಾಗಿ ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಅಥವಾ ಅದಕ್ಕೂ ಮುನ್ನ ತಲಾ 25,000 ರೂಪಾಯಿಗಳನ್ನು ಪಾವತಿಸುವಂತೆ ಪತಿಗೆ ಹೈಕೋರ್ಟ್ ನ್ಯಾಯಪೀಠವು ನಿರ್ದೇಶನ ನೀಡಿದೆ.

ಮಗು ಪ್ರೌಢಾವಸ್ಥೆಯನ್ನು ತಲುಪುವವರೆಗೆ, ಪ್ರತಿ ವರ್ಷ ಪೂರ್ಣಗೊಂಡ ನಂತರ ಈ ನಿರ್ವಹಣಾ ಮೊತ್ತವನ್ನು ಪ್ರತಿ ಮಗುವಿಗೆ ತಿಂಗಳಿಗೆ 5,000 ರೂಪಾಯಿಗಳಷ್ಟು ಹೆಚ್ಚಿಸಬೇಕು. ವಿವಾಹ ಸಂಬಂಧ ಅಂತ್ಯಗೊಂಡಿದ್ದರೂ, ಪತಿಯು ಮಕ್ಕಳ ಕಡೆಗಿನ ತಮ್ಮ ಪೋಷಕತ್ವದ ಜವಾಬ್ದಾರಿಗಳನ್ನು, ವಿಶೇಷವಾಗಿ ಅವರ ಮದುವೆಯ ಸಮಯದಲ್ಲಿ, ಮುಂದುವರಿಸಬೇಕು ಮತ್ತು ತಮ್ಮ ಆರ್ಥಿಕ ಸಾಮರ್ಥ್ಯದ ಮಿತಿಯಲ್ಲಿ ಪ್ರೀತಿ ಹಾಗೂ ವಾತ್ಸಲ್ಯದಿಂದ ಮಕ್ಕಳ ಮದುವೆ ವೆಚ್ಚಗಳಿಗೆ ಕೊಡುಗೆ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ತಾಯಿಯ ಸಮ್ಮುಖದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ತಲಾ ಮೂರು ಗಂಟೆಗಳ ಕಾಲ ಮಕ್ಕಳನ್ನು ಭೇಟಿಯಾಗುವ ಮತ್ತು ಅವರೊಂದಿಗೆ ಸಮಯ ಕಳೆಯುವ ಹಕ್ಕನ್ನು ಪತಿಗೆ ನೀಡಲಾಗುತ್ತಿದೆ. ಜೊತೆಗೆ, ಪತಿಯು ಆಡಿಯೋ ಅಥವಾ ವಿಡಿಯೋ ಕರೆ ಮೂಲಕ ಮಕ್ಕಳೊಂದಿಗೆ ಸಂವಹನ ನಡೆಸಬಹುದು ಎಂದು ನ್ಯಾಯಪೀಠ ತಿಳಿಸಿದೆ.
ಹಾಗೆಯೇ ಪತಿಯ ಪೂರ್ವಾನುಮತಿ ಪಡೆಯದೆ ಮತ್ತು ಸಮರ್ಥ ನ್ಯಾಯಾಲಯದಿಂದ ಆದೇಶಗಳನ್ನು ಪಡೆಯದೆ ಪತ್ನಿಯು ಮಕ್ಕಳನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಭಾರತದ ಹೊರಗೆ ಸ್ಥಳಾಂತರಿಸುವಂತಿಲ್ಲ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.