ಋತುಚಕ್ರ ರಜೆ: ಸರ್ಕಾರದ ಕ್ರಮ ಬಲವಾಗಿ ಸಮರ್ಥಸಿದ ಅಡ್ವಕೇಟ್ ಜನರಲ್
ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಋತುಚಕ್ರ ರಜೆ ರಜೆಯ ಬಗ್ಗೆ ಹೈಕೋರ್ಟ್ ನಲ್ಲಿ ಅಡ್ವಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಬಲವಾಗಿ ಸಮರ್ಥಿಸಿದ್ದಾರೆ.
ಋತುಚಕ್ರ ರಜೆಗೆ ಸಂಬಂಧಿಸಿದಂತೆ ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ, ‘ಬೆಂಗಳೂರು ಹೋಟೆಲ್ಗಳ ಸಂಘ’ದ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಸೇರಿದಂತೆ ಇತರರು ಹೈಕೋರ್ಟ್ ಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪೂರ್ಣಗೊಳಿಸಿದ್ದು ಈ ವೇಳೆ ಸರ್ಕಾರದ ಕ್ರಮವನ್ನು ಸಮರ್ಥಿಸಿದ ಅಡ್ವಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಮಹಿಳೆಯರ ಆರೋಗ್ಯ ಮತ್ತು ಘನತೆಯ ದೃಷ್ಟಿಯಿಂದ ಋತುಚಕ್ರ ರಜೆ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ. ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂವಿಧಾನದ 162ನೇ ವಿಧಿಯ ಪ್ರಕಾರ ರಾಜ್ಯ ಸರ್ಕಾರ ಇಂತಹ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿದೆ’ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರವು ‘ತಜ್ಞರ ಸಮಿತಿ ವರದಿಯ ಆಧಾರದಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಸಮಿತಿ ಈಗಾಗಲೇ ಅರ್ಜಿದಾರರ ಅಹವಾಲು, ಆಕ್ಷೇಪ ಮತ್ತು ಸಲಹೆಗಳನ್ನು ಆಲಿಸಿದೆ. ಕಾನೂನು ಆಯೋಗವೂ ಈ ಬಗ್ಗೆ ಶಿಫಾರಸು ಮಾಡಿತ್ತು’ ಎಂಬ ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು. ವಾದ ಪ್ರತಿವಾದಗಳನ್ನ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನ ಪೂರ್ಣಗೊಳಿಸಿದ ತೀರ್ಪು ಕಾಯ್ದಿರಿಸಿತು.
ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ವೇತನಸಹಿತ ಋತುಚಕ್ರದ ರಜೆ ನೀಡುವಂತೆ ಹೊರಡಿಸಲಾದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಆದೇಶವು ಸಂವಿಧಾನದ 14ನೇ ವಿಧಿಯಡಿ ನೀಡಲಾದ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ. ಇದು ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ. ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
