19/09/2026

Law Guide Kannada

Online Guide

ನೂರಾರು ಪ್ರಕರಣಗಳು ಬಾಕಿ: ಸ್ಪಷ್ಟನೆ ನೀಡಲು ಇಡಿಗೆ ಸುಪ್ರೀಂ ಸೂಚನೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ ಅನ್ವಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ನಿರ್ಣಯ ಪ್ರಾಧಿಕಾರದ ಎದುರು ಬಾಕಿ ಉಳಿದಿರುವ ಪ್ರಕರಣಗಳ ಸಂಬಂಧ ಜಾರಿ ನಿರ್ದೇಶನಾಲಯದ ಬಳಿ ಸುಪ್ರೀಂಕೋರ್ಟ್ ಸ್ಪಷ್ಟಿಕರಣ ಕೇಳಿದೆ.

ಪಿಎಂಎಲ್ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ತಾತ್ಕಾಲಿಕ ಆಸ್ತಿ ಜಪ್ತಿಗಳನ್ನು ನ್ಯಾಯಾಂಗ ಸದಸ್ಯರ ಅನುಪಸ್ಥಿತಿಯಲ್ಲಿ ನ್ಯಾಯ ನಿರ್ಣಯ ಪ್ರಾಧಿಕಾರದ ಅಧಿಕಾರಿಗಳು ನಿರ್ಣಯಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಹಾಗೂ ವಿ.ಮೋಹನಾ ಅವರನ್ನೊಳಗೊಂಡ ಪೀಠವು, ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ ಅನ್ವಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ನಿರ್ಣಯ ಪ್ರಾಧಿಕಾರದ ಎದುರು ಬಾಕಿ ಉಳಿದಿರುವ ಹಲವು ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಇ.ಡಿಗೆ ಸೂಚಿಸಿತು.

ಹಾಗೆಯೇ ಹಲವಾರು ಪ್ರಕರಣಗಳು ಬಾಕಿ ಉಳಿದಿರುವುದನ್ನು ಗಮನಿಸಿದ ನ್ಯಾಯಪೀಠವು, ‘ಅವುಗಳನ್ನು ಕಾನೂನಿನ ಅಡಿಯಲ್ಲಿ ನಿಗದಿಪಡಿಸಿದ 180 ದಿನಗಳಲ್ಲಿ ಇತ್ಯರ್ಥ ಪಡಿಸಬೇಕಾಗಿ ಬಂದಲ್ಲಿ ವಿವೇಚನೆ ಅನುಸಾರ ಇತ್ಯರ್ಥ ಪಡಿಸುವಿರೋ ಅಥವಾ ಕೇವಲ ಸಹಿ ಮೂಲಕವೋ’ ಎಂದು ಇ.ಡಿ ಪರವಾಗಿ ಹಾಜರಾಗಿದ್ದ ವಕೀಲರನ್ನು ಪ್ರಶ್ನಿಸಿತು. ಜೊತೆಗೆ, ಬಾಕಿ ಇರುವ ಒಟ್ಟು ಪ್ರಕರಣಗಳ ಸಂಖ್ಯೆಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿತು.

‘ನೂರಾರು ಪ್ರಕರಣಗಳು ಬಾಕಿ ಇರುವಾಗಲೂ ಅವುಗಳನ್ನು ಇತ್ಯರ್ಥಪಡಿಸಲು ಕೇವಲ ಒಬ್ಬರೇ ಅಧಿಕಾರಿ ಏಕೆ ಇರುತ್ತಾರೆ?’ ಎಂದೂ ಪ್ರಶ್ನಿಸಿದ ನ್ಯಾಯಪೀಠ, ಈ ವಿಚಾರದ ಕುರಿತಂತೆಯೂ ಸ್ಪಷ್ಟಿಕರಣ ಕೇಳಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.