ನ್ಯಾಯಾಲಯಗಳಲ್ಲಿ ಠೇವಣಿ ಇರಿಸುವುದು ಪಾವತಿಗೆ ಸಮವಲ್ಲ: ಏಕರೂಪದ ವ್ಯವಸ್ಥೆ ರೂಪಿಸಿ – ಸುಪ್ರೀಂ ನಿರ್ದೇಶನ
ನವದೆಹಲಿ: ‘ನ್ಯಾಯಾಲಯದಲ್ಲಿ ಹಣವನ್ನು ಠೇವಣಿ ಇರಿಸುವುದು ಪಾವತಿಗೆ ಸಮನಾಗುವುದಿಲ್ಲ ಮತ್ತು ಸಾಲಗಾರರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ ಏಕರೂಪದ ವ್ಯವಸ್ಥೆ ರೂಪಿಸಲು ಕಾನೂನು ಆಯೋಗಕ್ಕೆ ನಿರ್ದೇಶನ ನೀಡಿದೆ.
ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ನ್ಯಾಷನಲ್ ಆಗೊ ಸೀಡ್ಸ್ ಕಾರ್ಪೋರೇಷನ್ ನಡುವಿನ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು ‘ನ್ಯಾಯಾಲಯದಲ್ಲಿ ಹಣವನ್ನು ಠೇವಣಿ ಇರಿಸುವುದು ಪಾವತಿಗೆ ಸಮವಲ್ಲ. ‘ಸಾಲಗಾರನ ನಿಯಂತ್ರಣವನ್ನು ಮೀರಿ ಇರಿಸಲಾದ ಠೇವಣಿಯು ಬಾಧ್ಯತೆಯನ್ನು ನಿವಾರಿಸುವುದಿಲ್ಲ ಎಂದು ತಿಳಿಸಿತು.
ಹಾಗೆಯೇ ಮೇಲ್ಮನವಿಗಳ ಸಮಯದಲ್ಲಿ ಮಾಡಿದ ಠೇವಣಿ ನಿರ್ವಹಿಸಲು ಏಕರೂಪದ ವ್ಯವಸ್ಥೆಯನ್ನು ರೂಪಿಸುವಂತೆ ಕಾನೂನು ಆಯೋಗಕ್ಕೆ ಸೂಚಿಸಿದ ನ್ಯಾಯಪೀಠ, ಸುಧಾರಣೆಗಳನ್ನು ಶಿಫಾರಸು ಮಾಡುವ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸುವಂತೆ ಕಾನೂನು ಆಯೋಗಕ್ಕೆ ಸಲಹೆ ನೀಡಿದೆ.
ನ್ಯಾಯಾಲಯದಲ್ಲಿ ಹಣವನ್ನು ಠೇವಣಿ ಇರಿಸಿದ ನಂತರವೂ ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್, ಮಧ್ಯಸ್ಥಿಕೆ ತೀರ್ಮಾನದ ಮೇಲೆ ನ್ಯಾಷನಲ್ ಅಗೊ ಸೀಡ್ಸ್ ಗೆ ಶೇ 12ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ₹1.46 ಕೋಟಿ ಪಾವತಿಸಲು ಬಾಧ್ಯಸ್ಥವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 34ರ ಅಡಿಯಲ್ಲಿ ಬೀಜ ನಿಗಮವು ಈ ತೀರ್ಪನ್ನು ಪ್ರಶ್ನಿಸಿತ್ತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
