ಕೇವಲ ದೂರು, ಪ್ರಾಥಮಿಕ ತನಿಖೆ ಆಧರಿಸಿ ಸರ್ಕಾರಿ ನೌಕರರ ಬಡ್ತಿ ತಡೆಗೆ ಕಾನೂನಿನಲ್ಲಿ ಅವಕಾಶವಿದೆಯೇ..?
ಬೆಂಗಳೂರು: ಕೇವಲ ದೂರು ಅಥವಾ ಪ್ರಾಥಮಿಕ ತನಿಖೆಯನ್ನು ಆಧರಿಸಿ ಸರ್ಕಾರಿ ನೌಕರರ ಬಡ್ತಿಗೆ ತಡೆ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ..? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ಪಷ್ಟ ಅಭಿಪ್ರಾಯವನ್ನ ನೀಡಿದೆ.
ತಮ್ಮ ಬಡ್ತಿ ನಿರಾಕರಣೆಯನ್ನು ಪ್ರಶ್ನಿಸಿ ಕುಷ್ಟಗಿ ಪುರಸಭೆಯ ಹಿರಿಯ ಆರೋಗ್ಯ ಪರಿವೀಕ್ಷಕ ಎಂ.ಎನ್.ಖಾಜಾ ಹುಸೇನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ)ವು’ಸರ್ಕಾರಿ ನೌಕರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗದೇ ದೂರು ಅಥವಾ ಪ್ರಾಥಮಿಕ ತನಿಖೆಯ ಆಧಾರದಡಿ ಬಡ್ತಿ ತಡೆಹಿಡಿಯುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆ ನಡೆಯುವ ದಿನಾಂಕದ ವೇಳೆಗೆ ನೌಕರನ ವಿರುದ್ಧ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗದೇ ಇದ್ದರೆ ಅಥವಾ ಇಲಾಖಾ ವಿಚಾರಣೆ ಬಾಕಿ ಇಲ್ಲದಿದ್ದರೆ ಬಡ್ತಿಯನ್ನು ತಡೆಯುವಂತಿಲ್ಲ. ಕೇವಲ ದೂರು, ಪೊಲೀಸರು ಮತ್ತು ಇಲಾಖೆಯ ನಡುವೆ ಪತ್ರ ವ್ಯವಹಾರಗಳ ಆಧಾರದಲ್ಲಿ ಅರ್ಹ ನೌಕರನಿಗೆ ಬಡ್ತಿ ನಿರಾಕರಿಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
‘ಅರ್ಜಿದಾರರ ಮನವಿಯನ್ನು ಪರಿಗಣಿಸಿ, ಅವರ ಕಿರಿಯ ನೌಕರರಿಗೆ ಬಡ್ತಿ ನೀಡಲಾದ ದಿನಾಂಕದಿಂದಲೇ ಖಾಜಾ ಹುಸೇನ್ ಅವರಿಗೂ ಮುಂಬಡ್ತಿ ನೀಡಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಸೇವಾ ಸೌಲಭ್ಯಗಳನ್ನು ಎಂಟು ವಾರಗಳ ಒಳಗಾಗಿ ಒದಗಿಸಬೇಕು’ ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ನ್ಯಾಯಪೀಠ ಸೂಚನೆ ನೀಡಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
