23/09/2026

Law Guide Kannada

Online Guide

ಜಂಟಿಯಾಗಿ ವಾರಸುದಾರಿಕೆಯಿಂದ ಆಸ್ತಿ ಪಡೆದ ಮಾತ್ರಕ್ಕೆ ಅವಿಭಕ್ತ ಕುಟುಂಬವೆಂದು ಪರಿಗಣಿಸಲಾಗುವುದಿಲ್ಲ- ಹೈಕೋರ್ಟ್

ಇಂದೋರ್: ಅವಿಭಕ್ತ ಕುಟುಂಬದ ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಹೊಸ ವ್ಯಾಖ್ಯೆ ಬರೆದಿದೆ. ಆಸ್ತಿಯನ್ನು ಜಂಟಿಯಾಗಿ ವಾರಸುದಾರಿಕೆಯಿಂದ ಪಡೆದ ಮಾತ್ರಕ್ಕೆ. ಅದು ಸದಾಕಾಲದ ಅವಿಭಕ್ತ ಹಿಂದೂ ಕುಟುಂಬವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

2003ರಲ್ಲಿ ಸತ್ನಾದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ನೀಡಿದ್ದ ಡಿಕ್ರಿಯನ್ನು ಮಾರ್ಪಡಿಸುವ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಪೀಠವು, ತಂದೆಯ ಮರಣದ ನಂತರ ಸಹೋದರರು ಆಸ್ತಿಯನ್ನು ಜಂಟಿಯಾಗಿ ವಾರಸುದಾರಿಕೆಯಿಂದ ಪಡೆದಿರುವುದರಿಂದ ಮಾತ್ರ, ಅದು ಸ್ವಯಂಚಾಲಿತವಾಗಿ ಅವಿಭಕ್ತ ಹಿಂದೂ ಕುಟುಂಬ ಅಥವಾ ಸಹಪಾಲುದಾರಿಕೆ ಆಗುವುದಿಲ್ಲ. ಹಾಗೆಯೇ, ಕುಟುಂಬದ ಸದಸ್ಯರು ವೈಯಕ್ತಿಕವಾಗಿ ಸಂಪಾದಿಸಿದ ಆಸ್ತಿಗಳೂ ಕೇವಲ ಈ ಕಾರಣದಿಂದ ಜಂಟಿ ಕುಟುಂಬದ ಆಸ್ತಿಗಳಾಗಿ ಪರಿವರ್ತನೆಯಾಗುವುದಿಲ್ಲ. ಸಹಮಾಲೀಕರಾಗಿ ವಿಭಜನೆಯಾಗದೆ ಉಳಿದಿರುವ ಆಸ್ತಿ ಮತ್ತು ಸಹಪಾಲುದಾರಿಕೆಯ ಅಸ್ತಿತ್ವ- ಇವೆರಡೂ ಕಾನೂನಿನ ದೃಷ್ಟಿಯಲ್ಲಿ ಭಿನ್ನವಾದ ಪರಿಕಲ್ಪನೆಗಳಾಗಿವೆ ಎಂದು ತಿಳಿಸಿತು.

ವಿಚಾರಣಾ ನ್ಯಾಯಾಲಯದ ನಿಲುವನ್ನು ಪರಿಶೀಲಿಸಿದ ನ್ಯಾಯಪೀಠವು, ಸಹೋದರರು ಕೆಲವು ಪಿತ್ರಾರ್ಜಿತ ಆಸ್ತಿಯನ್ನು ಜಂಟಿಯಾಗಿ ಪಡೆದಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರ ನಡುವೆ ಸದಾಕಾಲವೂ ಅವಿಭಕ್ತ ಹಿಂದೂ ಕುಟುಂಬ ಅಸ್ತಿತ್ವದಲ್ಲಿದೆ ಎಂದು ಊಹಿಸುವುದು ಮತ್ತು ನಂತರದಲ್ಲಿ ಅವರಲ್ಲಿ ಯಾರೇ ಸಂಪಾದಿಸಿದ ಆಸ್ತಿಯನ್ನೂ ಜಂಟಿ ಕುಟುಂಬದ ಆಸ್ತಿಯೆಂದು ಪರಿಗಣಿಸುವುದು ಸ್ವೀಕರಿಸಲಾಗದಷ್ಟು ತೀವ್ರವಾದ ಪ್ರತಿಪಾದನೆಯಾಗಿದೆ ಎಂದು ಅಭಿಪ್ರಾಯಪಟ್ಟಿತು.

ಪ್ರಕರಣದ ವಿವರ
ಮೂವರು ಸಹೋದರರಾದ ಬಲದತ್ತ ಮೂಲಚಂದ್ ಮತ್ತು ರಾಮೇಶ್ವರ ಪ್ರಸಾದ್ ಹಾಗೂ ಅವರ ಸಹೋದರಿ ಕೃಷಿ ದೇವಿ ಅವರ ನಡುವಿನ ಆಸ್ತಿಗೆ ಸಂಬಂಧಿಸಿದ ವಿವಾದ ಇದಾಗಿದ್ದು ಅವರ ತಂದೆ ವೃಂದಾವನ ಅವರು ಮರಣ ಹೊಂದುವಾಗ ಐದು ಸರ್ವೇ ನಂಬರಿನ ಆಸ್ತಿಗಳನ್ನು ಬಿಟ್ಟು ಹೋಗಿದ್ದರು. ನಂತರ, ಮತ್ತೊಂದು ಐದು ಸರ್ವೇ ನಂಬರಿನ ಆಸ್ತಿಗಳನ್ನು ರಾಮೇಶ್ವರ ಪ್ರಸಾದ್ ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ ಖರೀದಿಸಲಾಗಿತ್ತು. ಅವರು 1998ರ ಮಾರ್ಚ್ ತಿಂಗಳಲ್ಲಿ ಸಂತಾನವಿಲ್ಲದೆ ಮರಣ ಹೊಂದಿದರು.

ಅವರ ಮರಣದ ನಂತರ, ರಾಮೇಶ್ವರ ಪ್ರಸಾದ್ ಅವರು ಮರಣಕ್ಕೆ ಐದು ದಿನಗಳ ಮೊದಲು ಮಾಡಿದ್ದರೆಂದು ಹೇಳಲಾದ, ಆದರೆ ನೋಂದಾಯಿಸದ ಹಾಗೂ ನೋಟರಿ ದೃಢೀಕರಿಸಿದ ಉಯಿಲಿನ ಆಧಾರದ ಮೇಲೆ, ಕೃಷಿ ದೇವಿಯವರು ಸಂಪೂರ್ಣ ಆಸ್ತಿಯ ಮೇಲಿನ ಮಾಲೀಕತ್ವವನ್ನು ಹಕ್ಕುಸ್ವಾಮ್ಯವಾಗಿ ಪ್ರತಿಪಾದಿಸಿದರು. ಉಳಿದ ಇಬ್ಬರು ಸಹೋದರರು ಆ ಉಯಿಲನ್ನು ಅನೂರ್ಜಿತವೆಂದು ಘೋಷಿಸುವಂತೆ ಸಿವಿಲ್ ದಾವೆ ಹೂಡಿದರು. ಕುಟುಂಬವು ಹಿಂದೂ ಅವಿಭಕ್ತ ಕುಟುಂಬವಾಗಿ (HUF) ಕಾರ್ಯನಿರ್ವಹಿಸುತ್ತಿತ್ತು ಮತ್ತುಋಷಿಕೇಶದಲ್ಲಿ ಉದ್ಯೋಗದಲ್ಲಿದ್ದಾಗ ತಾವು ಕಳುಹಿಸಿದ ಜಂಟಿ ಆದಾಯದಿಂದ ರಾಮೇಶ್ವರ ಪ್ರಸಾದ್ ಅವರ ಹೆಸರಿನಲ್ಲಿ ವಿವಾದಿತ ಜಮೀನುಗಳನ್ನು ಖರೀದಿಸಲಾಗಿತ್ತು ಎಂದು ಅವರು ವಾದಿಸಿದರು.

ವಿಚಾರಣಾ ನ್ಯಾಯಾಲಯವು ಸಹೋದರರ ಪರವಾಗಿ ತೀರ್ಪು ನೀಡಿ, ಎಲ್ಲಾ ಆಸ್ತಿಗಳೂ ಹಿಂದೂ ಅವಿಭಕ್ತ ಕುಟುಂಬದ ಮೂಲ ಆಸ್ತಿಯಿಂದ (HUF nucleus) ಬಂದವು ಎಂದು ನಿರ್ಧರಿಸಿತು. ಅಲ್ಲದೆ, ಸಹೋದರಿಯ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸಿತು. ಬಳಿಕ ಈ ಸಂಬಂಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.