25/09/2026

Law Guide Kannada

Online Guide

ಕಾನೂನು ವಿ.ವಿಯಲ್ಲಿ ಜಾತಿ ತಾರತಮ್ಯ ಆರೋಪ: ತನಿಖೆಗೆ ಆದೇಶಿಸಿದ ಕೋರ್ಟ್

ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್ ನ ಡಾ.ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲು ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ.

ವಿದ್ಯಾರ್ಥಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರಿದ್ದ ಪೀಠವು, ತನಿಖೆಗೆ ಆದೇಶಿಸಿದೆ.

‘ಕಾನೂನು ವಿಭಾಗದ ಮುಖ್ಯಸ್ಥರು ಮತ್ತು ಹಾಸ್ಟೆಲ್ ವಾರ್ಡನ್ ತಮ್ಮ ಆಡಳಿತಾಧಿಕಾರ ಬಳಸಿಕೊಂಡು ಜಾತಿ ಕಿರುಕುಳ ನೀಡುತ್ತಿದ್ದು, ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕುಲಪತಿಗೆ ದೂರು ಕೊಟ್ಟರೂ ಕ್ರಮ ಜರುಗಿಸಿಲ್ಲ. ಅಲ್ಲದೆ ಜಾತಿಯ ಕಾರಣಕ್ಕೆ ನನ್ನ ಉತ್ತರ ಪತ್ರಿಕೆಯನ್ನು ಅತ್ಯಂತ ಬಿಗಿಯಾದ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ ಎಂದು ಬಿಎ ಎಲ್ ಎಲ್ಬಿ ವಿದ್ಯಾರ್ಥಿಯೊಬ್ಬರು ಅರ್ಜಿಯಲ್ಲಿ ಆರೋಪಿಸಿದ್ದರು.

‘ನಾಲ್ಕನೇ ಸೆಮಿಸ್ಟರ್ ನ ಸಾಂವಿಧಾನಿಕ ಕಾನೂನು-1 ವಿಷಯದಲ್ಲಿ ನಾನು ಹೆಚ್ಚು ಅಂಕ ಗಳಿಸಿದ್ದೆ. ಮೇಲ್ಮಾತಿಗೆ ಸೇರಿದ ಅಧಿಕಾರಿ ‘ಆತ ನನ್ನ ಪತ್ರಿಕೆಯಲ್ಲಿ ಅಷ್ಟೇ ಅಂಕ ಗಳಿಸಲಿ ನೋಡುತ್ತೇನೆ’ ಎಂದಿದ್ದರು. ಹೀಗಾಗಿ ಕಠಿಣ ಮೌಲ್ಯಮಾಪನ ಮಾಡಲಾಗಿದೆ’ ಎಂದು ವಿದ್ಯಾರ್ಥಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು ತನಿಖೆಗೆ ಆದೇಶಿಸಿ ದೂರುದಾರ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಸೂಚನೆ ನೀಡಿತು. ಐದನೇ ಸೆಮಿಸ್ಟರ್ನಲ್ಲಿ ದೂರುದಾರರ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಸ್ವತಂತ್ರ ಸಮಿತಿ ರಚಿಸಲು ನ್ಯಾಯಾಲಯ ಕುಲಪತಿಗೆ ಸೂಚಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.