29/09/2026

Law Guide Kannada

Online Guide

ಕೋರ್ಟ್ ಮೇಲೆಯೇ ‘ಮ್ಯಾಚ್ ಫಿಕ್ಸಿಂಗ್’ ಆರೋಪ ಮಾಡಿದ ವಕೀಲರಿಗೆ ಜೈಲು ಶಿಕ್ಷೆಪ್ರಕಟ

ಬೆಂಗಳೂರು: ವಿಚಾರಣಾ ನ್ಯಾಯಾಲಯವು ಮ್ಯಾಚ್ ಫಿಕ್ಸಿಂಗ್ ಮೂಲಕ ತನ್ನ ತೀರ್ಪು ನೀಡಿದೆ ಎಂಬ ಆರೋಪ, ನಂತರ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳಿಗೆ ಆಧಾರವಾಗಿರುವ ಹೈಕೋರ್ಟ್ ಆದೇಶವು “ಸುಳ್ಳು, ಕಟ್ಟುಕಥೆ ಮತ್ತು ನಕಲಿ” ಎಂದು ಈ ಎರಡು ಆರೋಪಗಳನ್ನ ಮಾಡಿದ ವಕೀಲರೊಬ್ಬರಿಗೆ ಕರ್ನಾಟಕ ಹೈಕೋರ್ಟ್ ಕ್ರಿಮಿನಲ್ ನ್ಯಾಯಾಂಗ ನಿಂದನೆಗಾಗಿ 15 ದಿನಗಳ ಸರಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈ ವಕೀಲರ ವಿರುದ್ಧ ಎರಡೂ ಆರೋಪಗಳು ಸಾಬೀತಾಗಿದ್ದು, ಅವರು ಬೇಷರತ್ತಾದ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ ಎಂಬುದನ್ನು ಗಮನಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಡಿಕೆ ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಅಲ್ಲದೆ ವಕೀಲರ ವೃತ್ತಿಯಲ್ಲಿ ಅವರ ಮುಂದುವರಿಕೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳಿಗಾಗಿ ಬಾರ್ ಕೌನ್ಸಿಲ್‌ ಗೆ ಆದೇಶವನ್ನು ತಿಳಿಸುವಂತೆ ನ್ಯಾಯಾಲಯವು ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.

ಏನಿದು ವಿವಾದ? ವಕೀಲರು ಆರೋಪ ಮಾಡಿದ್ದೇಕೆ..?
ಆಗಸ್ಟ್ 13, 2025 ರಂದು ಕ್ರಿಮಿನಲ್ ಮೇಲ್ಮನವಿ ಸಂಖ್ಯೆ 1054/2018 ರ ವಿಚಾರಣೆ ವೇಳೆಯಲ್ಲಿ ನಡೆದ ಘಟನೆಯಿಂದಾಗಿ ವಕೀಲರ ವಿರುದ್ದ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳು ಆರಂಭವಾಯಿತು.

ಮೇಲ್ಮನವಿದಾರರ ಪರವಾಗಿ ಹಾಜರಾಗಿದ್ದ ವಕೀಲರನ್ನು, ಪ್ರಾಸಿಕ್ಯೂಷನ್ ಅವಲಂಬಿಸಿರುವ ಸಂದರ್ಭಗಳನ್ನು ಮತ್ತು ಸಂಬಂಧಿತ ಸಾಕ್ಷಿಗಳು ಮತ್ತು ದಾಖಲೆಗಳನ್ನು ವಿವರಿಸುವ ಲಿಖಿತ ಸಾರಾಂಶವನ್ನು ಸಲ್ಲಿಸಲು ಪೀಠವು ಕೇಳಿತು. ಸಮಯ ನೀಡಲಾಗಿದ್ದರೂ, ಅವರು ಸಾರಾಂಶವನ್ನು ಸಲ್ಲಿಸಲಿಲ್ಲ. ಆದರೂ ನ್ಯಾಯಾಲಯವು ವಿಚಾರಣೆಯನ್ನು ಮುಂದುವರೆಸಿತು, ಆದರ ಪ್ರಶ್ನೆಗಳು ಎದ್ದಾಗ, ವಿಚಾರಣಾ ನ್ಯಾಯಾಲಯವು “ಮ್ಯಾಚ್ ಫಿಕ್ಸಿಂಗ್” ಮೂಲಕ ತೀರ್ಪು ನೀಡಿದೆ ಎಂದು ವಕೀಲರು ಹೇಳಿದ್ದರು. ಅಂತಹ ಅವಹೇಳನಕಾರಿ ಮತ್ತು ಆಧಾರರಹಿತ ಆರೋಹಗಳನ್ನು ಮಾಡದಂತೆ ಸೂಚಿಸಿದ್ದರೂ, ವಕೀಲರು ಹೇಳಿಕೆಯನ್ನು ಮುಂದುವರೆಸಿದರು ಎಂದು ಹೈಕೋರ್ಟ್ ದಾಖಲಿಸಿತು.

ನಂತರ ನ್ಯಾಯಾಲಯವು ಸೂಕ್ತ ಕ್ರಮಕ್ಕಾಗಿ ಈ ವಿಷಯವನ್ನು ಮುಖ್ಯ ನ್ಯಾಯಾಧೀಶರ ಮುಂದೆ ಇಡುವಂತೆ ನಿರ್ದೇಶಿಸಿತು, ಇದರ ಹರಿಣಾಮವಾಗಿ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ದಾಖಲಿಸಲಾಯಿತು.

ನಂತರ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಾಗ, ವಕೀಲರು ಬೇಷರತ್ತಾದ ಕ್ಷಮೆಯಾಚನೆಯನ್ನು ಸಲ್ಲಿಸುವ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದರು. ಆದಾಗ್ಯೂ, ನಂತರ ಈ ವಿಷಯವನ್ನು ಕೈಗೆತ್ತಿಕೊಂಡಾಗ, ಅವರು ವಿಚಾರಣೆಯನ್ನು ಪ್ರಶ್ನಿಸಲು ಬಯಸುವುದಾಗಿ ಮತ್ತು ಬೇಷರತ್ತಾದ ಕ್ಷಮೆಯಾಚಿಸಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಂಗ ನಿಂದನೆ ವಿಚಾರಣೆಯಲ್ಲಿ ವಕೀಲರು ಸಲ್ಲಿಸಿದ ಆಕ್ಷೇಪಣೆಗಳ ಹೇಳಿಕೆಯಿಂದ ಎರಡನೇ ಆರೋಹ ಹುಟ್ಟಿಕೊಂಡಿತು. ಕ್ರಿಮಿನಲ್‌ ಮೇಲ್ಮನವಿಯಲ್ಲಿ ಮೇಲ್ಮನವಿದಾರರ ವಕೀಲರಾಗಿ ಅವರು ಮುಂದುವರಿಯದಂತೆ ನೋಡಿಕೊಳ್ಳಲು ಇಡೀ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕಟ್ಟುಕಥೆ ಮಾಡಲಾಗಿದೆ ಎಂದು ವಕೀಲರು ಆರೋಪಿಸಿದರು. ಪ್ಯಾರಾಗ್ರಾಫ್ 13 ರಲ್ಲಿ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅವಲಂಬಿಸಿರುವ ವಿಷಯವು “ಸುಳ್ಳು ಕಟ್ಟುಕಥೆ, ನಕಲಿ” ಮತ್ತು ಅವರನ್ನು ತಪ್ಪಾಗಿ ಸಿಲುಕಿಸಲು ರಚಿಸಲಾಗಿದೆ ಎಂದು ವಾದಿಸಿದರು.

ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಲು ಅಧಾರವಾಗಿದ್ದ ಸೆಪ್ಟೆಂಬರ್ 15, 2025 ರ ಆದೇಶವು ಸುಳ್ಳು, ಕಟ್ಟುಕಥೆ ಮತ್ತು ನಕಲಿ ಮತ್ತು ಅವರನ್ನು ತಪ್ಪಾಗಿ ಸಿಲುಕಿಸಲು ರಚಿಸಲಾಗಿದೆ ಎಂದು ವಕೀಲರು ಆಪಾದಿಸಿದ್ದಾರೆ ಎಂಬುದನ್ನ ಹೈಕೋರ್ಟ್ ಗಮನಿಸಿತು.

ನ್ಯಾಯಾಲಯದ ಮುಂದೆ ವಕೀಲರ ದುರ್ವತನೆ ಮತ್ತು ನಡವಳಿಕೆಯನ್ನು ಪರಿಗಣಿಸಿ, ಪೀಠವು ವಕೀಲರಿಗೆ 15 ದಿನಗಳ ಸರಳ ಜೈಲು ಶಿಕ್ಷೆ ವಿಧಿಸಿ, ಅವರನ್ನು ತಕ್ಷಣ ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶಿಸಿತು.

ಕರ್ನಾಟಕ ಹೈಕೋರ್ಟ್ (ನ್ಯಾಯಾಂಗ ನಿಂದನೆ) ನಿಯಮಗಳು, 1981 ರ ನಿಯಮ 16 ರ ಅಡಿಯಲ್ಲಿ ಅಪರಾಧ ನಿರ್ಣಯ ವಾರಂಟ್ ಹೊರಡಿಸಲು ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ನಿರ್ದೇಶಿಸಲಾಯಿತು. ಅವರು ತಮ್ಮ ವೃತ್ತಿಯನ್ನು ಮುಂದುವರಿಸಲು ಅರ್ಹರೇ ಎಂಬುದರ ಕುರಿತು ಸೂಕ್ತ ಕ್ರಮಗಳಿಗಾಗಿ ಬಾರ್ ಕೌನ್ಸಿಲ್‌ಗೆ ಆದೇಶವನ್ನು ತಿಳಿಸಲು ರಿಜಿಸ್ಟ್ರಾರ್‌ಗೆ ನ್ಯಾಯಪೀಠ ನಿರ್ದೇಶಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.