ಭೂಸ್ವಾಧೀನ: ಮಾಲೀಕರ ಇಚ್ಛೆಗೆ ವಿರುದ್ಧವಾಗಿ ಸರ್ಕಾರಕ್ಕೆ ಆದೇಶಿಸಲು ಸಾಧ್ಯವಿಲ್ಲ- ಹೈಕೋರ್ಟ್
ಬೆಂಗಳೂರು: ಭೂಮಾಲೀಕರ ಇಚ್ಚೆಗೆ ವಿರುದ್ದವಾಗಿ ಜಮೀನು ಸ್ವಾಧೀನ ಪಡೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗದು. ಸರ್ಕಾರಕ್ಕೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರು ಪೂರ್ವ ತಾಲೂಕಿನ ಕಾಡುಬೀಸನಹಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕಾಗಿ ಗುರುತಿಸಲಾಗಿದ್ದ ಜಾಗದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕ್ರಮವನ್ನು ಪ್ರಶ್ನಿಸಿ ಐಟಿ ಕಂಪನಿಯಾದ ಬ್ರೈಟ್ಸ್ವೋರ್ಡ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದ್ದು ಖಾಸಗಿ ಜಾಗದ ಮಾಲೀಕರ ಇಚ್ಛೆಗೆ ವಿರುದ್ಧವಾಗಿ ಮತ್ತು ಅವರ ಒಪ್ಪಿಗೆಯಿಲ್ಲದೇ ಭೂಮಿಯನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಲು ಸಾಧ್ಯವಿಲ್ಲ ಸ್ಪಷ್ಪಪಡಿಸಿತು.
ವಿವಾದಿತ ಜಾಗದಲ್ಲಿ ಈಗಾಗಲೇ ವಸತಿ ವಿಲ್ಲಾಗಳು, ಲೇಔರ್ಟ್ಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಕಟ್ಟಡಗಳು ನಿರ್ಮಾಣಗೊಂಡು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿವೆ. ಈ ಹಂತದಲ್ಲಿ ಅವುಗಳನ್ನು ಕೆಡವಿ ಐಟಿ ಕಂಪನಿಗೆ ಜಾಗ ಕೊಡುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ.ಕೆಐಎಡಿಬಿ ನಿಯಮಗಳ ಪ್ರಕಾರ ಉದ್ದೇಶಿತ ಯೋಜನೆಗೆ ಭೂಮಿ ಹಸ್ತಾಂತರಿಸುವ ಮುನ್ನ ಭೂಮಾಲೀಕರ ಪೂರ್ವ ಒಪ್ಪಿಗೆ ಪಡೆಯುವಂತೆ ಮೇಲ್ಮನವಿ ಅರ್ಜಿ ಐಟಿ ಕಂಪನಿಗೆ ಸೂಚಿಸಲಾಗಿತ್ತು. ಆದರೆ, ಕಂಪನಿ ಒಪ್ಪಿಗೆ ಪಡೆಯುವಲ್ಲಿ ವಿಫಲವಾಗಿದೆ. ಕಡ್ಡಾಯ ಭೂಸ್ವಾಧೀನಕ್ಕಾಗಿ ಖಾಸಗಿ ಮಾಲೀಕರ ಇಚ್ಛೆಗೆ ವಿರುದ್ಧವಾಗಿ ಸರ್ಕಾರಕ್ಕೆ ಒತ್ತಡ ಹೇರಲಾಗದು ಎಂದು ನ್ಯಾಯಪೀಠ ತಿಳಿಸಿದೆ.
ಜಾಗದ ಹಕ್ಕು ಹೊಂದಿದ್ದ ಹಿತಾಸಕ್ತಿ ವ್ಯಕ್ತಿಗಳಿಗೆ ಕಾಯ್ದೆಯ ಸೆಕ್ಷನ್ 28(2)ರ ಅಡಿ ಕೆಐಎಡಿಬಿ ಸಮರ್ಪಕವಾಗಿ ನೋಟಿಸ್ ನೀಡಿ ವಿಚಾರಣೆ ನಡೆಸದ ಕಾರಣ ಮೂಲ ಭೂಸ್ವಾಧೀನ ಪ್ರಕ್ರಿಯೆಯಲ್ಲೇ ಲೋಪವಾಗಿದೆ. ಕೆಐಎಡಿಬಿ ಈ ಜಾಗವನ್ನು ಭೂಸ್ವಾಧೀನದಿಂದ ಕೈಬಿಟ್ಟಿರುವುದು ಕಾನೂನುಬದ್ಧವಾಗಿದ್ದು, ಐಟಿ ಕಂಪನಿಗೆ ಅಗತ್ಯವಿದ್ದಲ್ಲಿ ಪರ್ಯಾಯ ಜಾಗ ನೀಡುವ ಪ್ರಕ್ರಿಯೆಯನ್ನು ಪರಿಗಣಿಸಬಹುದು ಎಂಬುದಾಗಿ ತಿಳಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ನ್ಯಾಯಪೀಠವು ಎತ್ತಿ ಹಿಡಿದಿದೆ. ಅಲ್ಲದೇ, ಭೂ ಸ್ವಾಧೀನ ಪ್ರಕ್ರಿಯೆಗೆ ಮುಂಗಡ ಪಾವತಿಯಿಂದಾಗಿ ಕಂಪನಿಗೆ ನಷ್ಟ ಉಂಟಾಗಿದಲ್ಲಿ ಸಿವಿಲ್ ನ್ಯಾಯಾಲಯದ ಮೂಲಕ ಸರ್ಕಾರದ ವಿರುದ್ಧ ಪರಿಹಾರ ಧನ ಕೋರಬಹುದು ಎಂದು ಹೇಳಿದೆ.
ಏನಿದು ಪ್ರಕರಣ…?
ಕಾಡುಬೀಸನಹಳ್ಳಿಯಲ್ಲಿ ಸುಮಾರು 43 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ‘ಮಾಹಿತಿ ತಂತ್ರಜ್ಞಾನ ಪಾರ್ಕ್’ (ಐಟಿ ಪಾರ್ಕ್) ಸ್ಥಾಪಿಸಲು ಬ್ರೈಟ್ ಸ್ವೋರ್ಡ್ ಕಂಪನಿಯು ಕರ್ನಾಟಕ ಉದ್ಯೋಗದ ಮಿತ್ರಕ್ಕೆ ಮನವಿ ಸಲ್ಲಿಸಿತ್ತು. ಮನವಿಯನ್ನು ಪರಿಗಣಿಸಿದ್ದ ಏಕಗವಾಕ್ಷಿ ಸಮಿತಿ ಅನುಮೋದನೆ ನೀಡಿ, 8.5 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಕಂಪನಿಗೆ ಹಸ್ತಾಂತರಿಸುವಂತೆ ಕೆಐಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಶೇ. 40ರಷ್ಟು ಮೊತ್ತವನ್ನು ಮುಂಗಡವಾಗಿ ಪಾವತಿಸುವಂತೆ ಕಂಪನಿಗೆ ವಿಶೇಷ ಭೂಸ್ವಾಧೀನಾಧಿಕಾರಿಗೆ ಸೂಚಿಸಲಾಗಿತ್ತು. ಅದಂತೆ ಕಂಪನಿ 38 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿತ್ತು. 2004ರಲ್ಲಿ ಪ್ರಾಥಮಿಕ ಹಾಗೂ ಅಂತಿಮ ಭೂಸ್ವಾಧೀನ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು. ಇದಾದ ಬಳಿಕ ಭೂಮಿಯ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಸರ್ವೇ ಕಾರ್ಯ ಮುಂದುವರೆದಿತ್ತು.
ಈ ನಡುವೆ ಭೂಸ್ವಾಧೀನಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದ ಜಮೀನಿನ ಮೂಲ ಮಾಲೀಕರು (ಬಾಲಕೃಷ್ಣ ನಾಯ್ಡು ಮತ್ತು ಇತರರು) ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಕೋರಿದ್ದರು. ಆದರೆ, ಕೆಐಎಡಿಬಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಲವು ಸುತ್ತಿನ ಕಾನೂನು ಹೋರಾಟದ ಬಳಿಕ ಏಕ ಸದಸ್ಯ ಪೀಠ, ಭೂ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
