ಖುಲಾಸೆ ಆದೇಶದ ವಿರುದ್ದ ಮೇಲ್ಮನವಿ ವ್ಯಾಪ್ತಿ: ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ
ನವದೆಹಲಿ: ಮ್ಯಾಜಿಸ್ಟ್ರೇಟ್ ನೀಡಿದ ಖುಲಾಸೆ ಆದೇಶದ ವಿರುದ್ಧ ಬಾಧಿತ ವ್ಯಕ್ತಿ ಸಲ್ಲಿಸುವ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯದಲ್ಲೇ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ, ಸೆಷನ್ಸ್ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸಲು ಸ್ವಾತಂತ್ರ್ಯ ನೀಡಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ. ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಪೀಠವು ಎತ್ತಿಹಿಡಿದಿದೆ. ಮ್ಯಾಜಿಸ್ಟ್ರೇಟ್ ನೀಡಿದ ಖುಲಾಸೆ (Acquittal)ಆದೇಶದ ವಿರುದ್ಧ ಬಾಧಿತ ವ್ಯಕ್ತಿ (Victim) ಸಲ್ಲಿಸುವ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಬೇಕು ಎಂದು ತಿಳಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (BNSS)ರ ಸೆಕ್ಷನ್ 413ರ proviso (ಪರಂತುಕ) ಪ್ರಕಾರ, ಮ್ಯಾಜಿಸ್ಟ್ರೇಟ್ ನೀಡಿದ ಖುಲಾಸೆ ಆದೇಶದ ವಿರುದ್ಧ ಬಾಧಿತ ಪಕ್ಷಕಾರರು ಸಲ್ಲಿಸುವ ಮೇಲ್ಮನವಿಯು ಆ ಮ್ಯಾಜಿಸ್ಟ್ರೇಟ್ ನೀಡಿದ ದೋಷನಿರ್ಣಯದ (Conviction) ವಿರುದ್ಧ ಸಾಮಾನ್ಯವಾಗಿ ಮೇಲ್ಮನವಿ ಸಲ್ಲಿಸಬೇಕಾದ ನ್ಯಾಯಾಲಯದ ಮುಂದೆ ಸಲ್ಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ತಂದೆಯೇ ಈ ಪ್ರಕರಣದಲ್ಲಿ ಬಲಿಪಶುವಾಗಿದ್ದರು. ಭಾರತೀಯ ದಂಡ ಸಂಹಿತೆ, 1860ರ ಸೆಕ್ಷನ್ 304A ಸಹಿತ ಸೆಕ್ಷನ್ 34 ಅಡಿಯಲ್ಲಿ FIR ದಾಖಲಾಗಿತ್ತು. ಈ ಅಪರಾಧವು ಜಾಮೀನು ನೀಡಬಹುದಾದ (Bailable) ಅಪರಾಧವಾಗಿತ್ತು. ಮೃತ ವ್ಯಕ್ತಿಯು ಖಿನ್ನತೆಯ ಕಾಯಿಲೆ (Depressive disorders)ಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದನು. ವೈದ್ಯರು ಮತ್ತು ನರ್ಸ್ಗಳ ನಿರ್ಲಕ್ಷ್ಯದಿಂದಲೇ ತನ್ನ ಮಗನ ಸಾವು ಸಂಭವಿಸಿದೆ ಎಂದು ತಂದೆ ಆರೋಪಿಸಿದ್ದರು. ಆದರೆ, ವಿಚಾರಣೆ ನಡೆಸಿದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆರೋಪಿಗಳನ್ನು ಖುಲಾಸೆಗೊಳಿಸಿದರು.
ಮ್ಯಾಜಿಸ್ಟ್ರೇಟ್ ತೀರ್ಪನ್ನು ಪ್ರಶ್ನಿಸಿ ಬಾಧಿತ ವ್ಯಕ್ತಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆರಂಭದಲ್ಲಿ ಏಕಸದಸ್ಯ ಪೀಠವು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿತ್ತು. ಆದರೆ ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಮತ್ತೊಬ್ಬ ಏಕಸದಸ್ಯ ಪೀಠವು ಸಂಬಂಧಿತ ಕಾನೂನು ನಿಬಂಧನೆಗಳನ್ನು ಪರಿಶೀಲಿಸಿ, ಈ ಮೇಲ್ಮನವಿ ಹೈಕೋರ್ಟ್ನಲ್ಲಿ ನಿರ್ವಹಣೀಯವಲ್ಲ (not maintainable) ಎಂದು ತೀರ್ಮಾನಿಸಿತು. ಆದ್ದರಿಂದ, ಸೆಷನ್ಸ್ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ, ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿತು. ನಂತರ ಇದರ ವಿರುದ್ದ ಭಾದಿತ ವ್ಯಕ್ತಿ ಸುಪ್ರೀಂಕೋರ್ಟ್ ಕದ ತಟ್ಟಿದ್ದರು.
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು ಮ್ಯಾಜಿಸ್ಟ್ರೇಟ್ ನೀಡಿದ ಖುಲಾಸೆ ಆದೇಶದ ವಿರುದ್ಧ ಬಾಧಿತ ವ್ಯಕ್ತಿ ಸಲ್ಲಿಸುವ ಮೇಲ್ಮನವಿಯೂ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಬೇಕು, ಹೈಕೋರ್ಟ್ ಮುಂದೆ ಅಲ್ಲ ಎಂದು ತೀರ್ಮಾನಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
