ಮರದ ಕೊಂಬೆ ಬಿದ್ದು ಅವಘಡ: ವ್ಯಕ್ತಿಗೆ 2.82 ಕೋಟಿ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು : ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಜಿ. ಚಂದನ್ ಎಂಬುವವರಿಗೆ 2.82 ಕೋಟಿ ರೂ. ಪರಿಹಾರ ನೀಡುವಂತೆ ಬಿಬಿಎಂಪಿ (ಪ್ರಸ್ತುತ ಜಿಬಿಎ)ಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಗಾಯಾಳು ಚಂದನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಅಪಾಯಕಾರಿ ಮರದ ಕೊಂಬೆ ರಸ್ತೆ ಮೇಲೆ ಬೀಳುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ತುರ್ತು ಕ್ರಮ ಕೈಗೊಳ್ಳದ ಬಿಬಿಎಂಪಿ (ಹಾಲಿ ಜಿಬಿಎ) ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿತು. ಹಾಗೆಯೇ ಅರ್ಜಿದಾರನಿಗೆ ಶೇ.6 ಬಡ್ಡಿಯೊಂದಿಗೆ ಪರಿಹಾರ ಧನ ಪಾವತಿಸುವಂತೆ ಆದೇಶಿಸಿತು.
ಪರಿಹಾರ ಮೊತ್ತದಲ್ಲಿ ಬಿಬಿಎಂಪಿ ಈಗಾಗಲೇ ಪಾವತಿಸಿರುವ 5 ಲಕ್ಷ ರೂ.ಗಳನ್ನು ಕಡಿತಗೊಳಿಸಿ, ಉಳಿದ 2,77,29,695 – ಗಳನ್ನು ಅರ್ಜಿದಾರರಿಗೆ ಪಾವತಿಸಬೇಕು. ಅಪಘಾತ ಸಂಭವಿಸಿದ 2024ರ ಮಾರ್ಚ್ 7ರಿಂದ ಪರಿಹಾರ ಪಾವತಿಸುವ ದಿನದವರೆಗೆ ಶೇ.6 ವಾರ್ಷಿಕ ಬಡ್ಡಿ ಅನ್ವಯಿಸುತ್ತದೆ. ಬಿಬಿಎಂಪಿ ಮತ್ತು ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳು ತೀರ್ಪಿನ ಪ್ರತಿ ದೊರೆತ 12 ವಾರಗಳೊಳಗೆ ಆರ್ಟಿಜಿಎಸ್ ಮೂಲಕ ಪರಹಾರದ ಮೊತ್ತ ಪಾವತಿಸಬೇಕು ಎಂದು ನಾಯಾಲಯ ಆದೇಶಿಸಿದೆ.
ಶಾಲೆ ಈಗಾಗಲೇ 3 ಲಕ್ಷ ಪಾವತಿಸಿದ್ದು, ಚಂದನ್ ಅವರ ಮಗಳಿಗೆ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ನೀಡಿರುವ ಭರವಸೆಯನ್ನು ಪಾಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಇದೇ ವೇಳೆ, ಬೆಂಗಳೂರು ನಗರದಲ್ಲಿನ ಅಪಾಯಕಾರಿ ಮರಗಳ ತೆರವು ಸೇರಿದಂತೆ ಸಾರ್ವಜನಿಕ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಹಲವು ನಿರ್ದೇಶನಗಳನ್ನು ನೀಡಿದೆ. ಅಪಾಯದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಬಂದ ಬಳಿಕವೂ ಮರ ಖಾಸಗಿ ಜಾಗದಲ್ಲಿದ್ದರೂ ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳುವುದು ಬಿಬಿಎಂಪಿಯ ಕಾನೂನುಬದ್ಧ ಕರ್ತವ್ಯ ಅಪಾಯ ತಿಳಿದಿದ್ದ ಸಂದರ್ಭದಲ್ಲಿ ಪ್ರಕೃತಿ ಕಾರಣವನ್ನು ನೆಪವಾಗಿ ಬಳಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ..
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚಂದನ್ 2024ರ ಮಾರ್ಚ್ 7ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಕಚೇರಿಗೆ ತೆರಳುತ್ತಿದ್ದ ವೇಳೆ ಬೆಂಗಳೂರಿನ ಶಾಂತಲಾ ನಗರದ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಆವರಣದಲ್ಲಿದ್ದ ಮರದ ದಪ್ಪ ಕೊಂಬೆ ಅವರ ಮೇಲೆ ಬಿದ್ದಿತ್ತು. ಇದರಿಂದ, ಅವರ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದು, ತಕ್ಷ ಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ ಅವರು ಟ್ರಾಮಾಟಿಕ್ ಪ್ಯಾರಾಫೀಜಿಯಾ ಸಮಸ್ಯೆಗೆ ಒಳಗಾಗಿದ್ದರು.
2024ರ ಫೆಬ್ರವರಿ 16ರಂದು ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯು ಬಿಬಿಎಂಪಿಗೆ ಪತ್ರ ಬರೆದು ಆ ಪತ್ರವನ್ನು ಫೆಬ್ರವರಿ 22ರಂದು ಬಿಬಿಎಂಪಿಗೆ ಸಲ್ಲಿಸಲಾಗಿತ್ತು. ಕೊಂಬೆ ಯಾವಾಗ ಬೇಕಾದರೂ ಮುರಿದು ಬೀಳಬಹುದು ಮತ್ತು ಮಕ್ಕಳು, ನಿವಾಸಿಗಳು ಹಾಗೂ ವಾಹನಗಳಿಗೆ ತುಂಬಾ ಅಪಾಯಕಾರಿ ಎಂದು ಶಾಲೆಯ ಪತ್ರದಲ್ಲಿ ವಿವರಿಸಲಾಗಿತ್ತು. ಆದರೆ, ಅಪಘಾತ ಸಂಭವಿಸಿದ ದಿನ ಅಂದರೆ ಮಾರ್ಚ್ 7ರಂದು ಬಿಬಿಎಂಪಿ ಕೊಂಬೆ ಕತ್ತರಿಸಲು ಅನುಮತಿ ನೀಡಿತ್ತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
