ಅಲಹಾಬಾದ್: ಉಚ್ಛ ನ್ಯಾಯಾಲಯ ಹೊರಡಿಸಿದ ಜಾಮೀನು ರಹಿತ ವಾರಂಟ್ ಸ್ವೀಕರಿಸುವ ಪೊಲೀಸ್ ಅಧಿಕಾರಿ ಅದನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವೈಯಕ್ತಿಕವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
ನ್ಯಾಯಾಲಯ ಆರೋಪಿ ವಿರುದ್ಧ ಹೊರಡಿಸುವ ಜಾಮೀನು ರಹಿತ ವಾರಂಟ್ಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಪೊಲೀಸರ ಆದ್ಯ ಜವಾಬ್ದಾರಿ. ಹೈಕೋರ್ಟ್ ಹೊರಡಿಸಿದ ಜಾಮೀನು ರಹಿತ ವಾರಂಟ್ ಸ್ವೀಕರಿಸುವ ಪೊಲೀಸ್ ಅಧಿಕಾರಿ ಅದನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ಚಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಅಶ್ಲೀಲ ವಿಡಿಯೊವನ್ನು ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 2024ರಲ್ಲಿ ಅಜಂಗಢ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ ನ್ಯಾಯಪೀಠವು ಮೇಲಿನ ನಿರ್ದೇಶನಗಳನ್ನು ನೀಡಿದೆ.
ವಾರಂಟ್ ಗೆ ಒಳಪಟ್ಟ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಸಂಬಂಧಪಟ್ಟ ಅಧಿಕಾರಿಯ ಕರ್ತವ್ಯವಾಗಿದೆ. ಇಂತಹ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ನೀಡುವ ಅಧಿಕಾರವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ವಾರಂಟ್ ಜಾರಿಗೊಳಿಸುವುದನ್ನು ಖುದ್ದಾಗಿ ಖಚಿತಪಡಿಸಿಕೊಳ್ಳದಿರುವುದಕ್ಕೆ ಎಸ್ಎಸ್ಪಿ ನ್ಯಾಯಾಲಯದ ಮುಂದೆ ಕ್ಷಮೆಯಾಚಿಸಿದರು. ಅವರ ಕ್ಷಮೆಯಾಚನೆಯನ್ನು ನ್ಯಾಯಪೀಠ ಸ್ವೀಕರಿಸಿತು.
ಎಸ್ಎಸ್ಪಿ ಅವರ ಸೇವಾ ದಾಖಲೆಯಲ್ಲಿ ಯಾವುದೇ ಕಳಂಕವಿಲ್ಲದಿರುವುದನ್ನು ಪರಿಗಣಿಸಿದ ನ್ಯಾಯಪೀಠವು, ಮೃತಪಟ್ಟ ಆರೋಪಿಯ ಅಪ್ರಾಪ್ತ ವಯಸ್ಸಿನ ಇಬ್ಬರು ಪುತ್ರಿಯರನ್ನು ದತ್ತು ಪಡೆದುಕೊಂಡಿರುವ ಅವರ ಕ್ರಮವನ್ನೂ ಪ್ರಶಂಸಿಸಿತು. ಭವಿಷ್ಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬ ನಿರೀಕ್ಷೆಯೊಂದಿಗೆ ಎಸ್ಎಸ್ಪಿ ವಿರುದ್ಧದ ವಿಚಾರವನ್ನು ನ್ಯಾಯಪೀಠವು ಮುಕ್ತಾಯಗೊಳಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
