ಸಂಕ್ಷಿಪ್ತ ಕಾನೂನು ಅಭಿಪ್ರಾಯ
ವಿಷಯ: 29.10.2026ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ನಂತರ, ಕರ್ನಾಟಕ ಕಾಯ್ದೆ ಸಂಖ್ಯೆ 14ರ 2022ರ ಅಡಿಯಲ್ಲಿ ನೇಮಕಗೊಂಡಿರುವ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳನ್ನು ಮುಖ್ಯಮಂತ್ರಿಗಳು ರಕ್ಷಿಸಲು ಸಾಧ್ಯವೇ?
1. 29.10.2026ರಂದು ಶ್ರೀನಿವಾಸ ಟಿ. ವಿರುದ್ಧ ಕರ್ನಾಟಕ ಸರ್ಕಾರ (Srinivasa T. v. State of Karnataka, 2026 INSC 1173) ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ಯಾರಾ 17ರಲ್ಲಿ 2022ರ ಮೌಲ್ಯೀಕರಣ ಕಾಯ್ದೆಯನ್ನು (Validation Act) ಅಸಂವಿಧಾನಿಕ ಎಂದು ಘೋಷಿಸಿದೆ. ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಅವರ ನೇಮಕಾತಿಯನ್ನು ಉಳಿಸಿಕೊಳ್ಳಬೇಕೆಂಬ ವಾದವನ್ನು ಪ್ಯಾರಾ 18ರಲ್ಲಿ ತಿರಸ್ಕರಿಸಿದೆ. ಅಲ್ಲದೆ, ಪ್ಯಾರಾ 19ರಲ್ಲಿ “ಕಳಂಕಿತ ನೇಮಕಾತಿ ಪ್ರಕ್ರಿಯೆಯ ಆಧಾರದ ಮೇಲೆ ಮಾಡಲಾದ ನೇಮಕಾತಿಗಳೂ ಅಂತ್ಯಗೊಳ್ಳಲಿವೆ” ಎಂದು ಸ್ಪಷ್ಟವಾಗಿ ಹೇಳಿದ್ದು, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ನಿರ್ದೇಶಿಸಿದೆ.
2. ಸಂವಿಧಾನದ 141 ಮತ್ತು 144ನೇ ವಿಧಿಗಳ ಪ್ರಕಾರ, ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸಂವಿಧಾನದ 154 ಮತ್ತು 163ನೇ ವಿಧಿಗಳ ಅಡಿಯಲ್ಲಿ ಮುಖ್ಯಮಂತ್ರಿಗಳು ಚಲಾಯಿಸುವ ಕಾರ್ಯಾಂಗದ ಅಧಿಕಾರವೂ ಸಂವಿಧಾನ ಮತ್ತು ನ್ಯಾಯಾಲಯದ ಬದ್ಧ ತೀರ್ಪುಗಳಿಗೆ ಒಳಪಟ್ಟಿರುತ್ತದೆ.
3. ಸುಪ್ರೀಂಕೋರ್ಟ್ ತೀರ್ಪನ್ನು ಮೀರುವ, ಅಮಾನತುಗೊಳಿಸುವ ಅಥವಾ ನಿಷ್ಪ್ರಯೋಜಕಗೊಳಿಸುವ ಯಾವುದೇ ಸ್ವತಂತ್ರ ಅಧಿಕಾರ ಮುಖ್ಯಮಂತ್ರಿಗಳಿಗೆ ಇಲ್ಲ. ಕೇವಲ ಭರವಸೆ ನೀಡುವ ಮೂಲಕ, ಕಾರ್ಯಾಂಗದ ಆದೇಶ ಅಥವಾ ಸರ್ಕಾರಿ ಆದೇಶ (GO) ಹೊರಡಿಸುವ ಮೂಲಕ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ. ಅಸಂವಿಧಾನಿಕ ಎಂದು ಘೋಷಿಸಲ್ಪಟ್ಟ ಕಾಯ್ದೆಯನ್ನು ಇಂತಹ ಆದೇಶಗಳ ಮೂಲಕ ಮತ್ತೆ ಜಾರಿಗೆ ತರಲು ಸಾಧ್ಯವಿಲ್ಲ.
4. ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಅದೇ ಮೌಲ್ಯೀಕರಣ ಕಾಯ್ದೆಯನ್ನು ಮರುಜಾರಿಗೆ ತರಲು ಸಾಧ್ಯವಿಲ್ಲ. ಹೊಸದಾಗಿ ಯಾವುದೇ ಕಾನೂನು ರೂಪಿಸುವುದಾದರೂ, ಹಿಂದಿನ ಕಾನೂನಿನಲ್ಲಿದ್ದ ಸಾಂವಿಧಾನಿಕ ಲೋಪಗಳನ್ನು ಸರಿಪಡಿಸಿರಬೇಕು. ಅಂತಹ ಕಾನೂನೂ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ.
5. ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನವಿದ್ದರೆ, ಅದನ್ನು ಪ್ರಶ್ನಿಸಲು ಮರುಪರಿಶೀಲನಾ ಅರ್ಜಿ (Review Petition) ಸಲ್ಲಿಸುವ ಅವಕಾಶವಿದೆ. ಆದರೆ, ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ತೀರ್ಪಿನ ಜಾರಿಗೆ ತಡೆಯಾಗುವುದಿಲ್ಲ. ಸುಪ್ರೀಂಕೋರ್ಟ್ ಪ್ರತ್ಯೇಕವಾಗಿ ತಡೆಯಾಜ್ಞೆ ನೀಡಿದರೆ ಮಾತ್ರ ತೀರ್ಪಿನ ಅನುಷ್ಠಾನಕ್ಕೆ ತಡೆ ಉಂಟಾಗುತ್ತದೆ.
6. ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಮತ್ತು ಬೇಕೆಂದೇ ಪಾಲಿಸದಿದ್ದರೆ, ಸಂವಿಧಾನದ 129ನೇ ವಿಧಿ ಹಾಗೂ ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಸೆಕ್ಷನ್ 2(b) ಮತ್ತು 12ರ ಅಡಿಯಲ್ಲಿ ನ್ಯಾಯಾಂಗ ನಿಂದನೆ (Contempt of Court) ಪ್ರಕ್ರಿಯೆ ಎದುರಿಸಬೇಕಾಗಬಹುದು.
ತೀರ್ಮಾನ
2022ರ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ ನಂತರ, ಆ ಕಾಯ್ದೆಯಡಿ ಮಾಡಲಾದ ನೇಮಕಾತಿಗಳನ್ನು ಮುಂದುವರಿಸಲು ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಮುಖ್ಯಮಂತ್ರಿಗಳಿಗೆ ಕಾನೂನುಬದ್ಧ ಅಧಿಕಾರವಿಲ್ಲ.
ಪ್ರಭಾವಿತ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸುವುದು ಅಥವಾ ಅವರಿಗೆ ಭರವಸೆ ನೀಡುವುದರಿಂದ ಯಾವುದೇ ಕಾನೂನುಬದ್ಧ ರಕ್ಷಣೆ ದೊರೆಯುವುದಿಲ್ಲ.
ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ.
ಎಸ್. ಎಚ್. ಹೊಸಗೌಡರ್ ನಿವೃತ್ತ ಜಿಲ್ಲಾ ನ್ಯಾಯಾಧೀಶರು
ಸೂಚನೆ: ಇದು ಮೂಲ ಇಂಗ್ಲಿಷ್ ಕಾನೂನು ಅಭಿಪ್ರಾಯದ ಕನ್ನಡ ಅನುವಾದವಾಗಿದೆ. ಮೂಲ ಅಭಿಪ್ರಾಯದಲ್ಲಿರುವ ಕಾನೂನು ನಿಲುವುಗಳನ್ನು ಸ್ವತಂತ್ರವಾಗಿ ಪರಿಶೀಲಿಸಿದ ಅಭಿಪ್ರಾಯವಲ್ಲ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
