ಮಗುವಿನ ಪಿತೃತ್ವ ನಿರಾಕರಣೆ ಕ್ರೌರ್ಯಕ್ಕೆ ಸಮ: ವಿಚ್ಛೇದನ ಮಂಜೂರು ಆದೇಶ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು:, ಮಗುವಿನ ಪಿತೃತ್ವವನ್ನು ನಿರಾಕರಿಸಿ ಡಿಎನ್ ಎ ಪರೀಕ್ಷೆಗೆ ಒಳಪಡಲು ಮುಂದಾಗದಿರುವುದು ಮತ್ತು ಪತ್ನಿಯ ನಡತೆಯ ಬಗ್ಗೆ ಆರೋಪ ಮಾಡುವುದು ಪತಿಯೇ ಪತ್ನಿಗೆ ನೀಡುವ ಮಾನಸಿಕ ಕ್ರೌರ್ಯವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಪತ್ನಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಮತ್ತು ನ್ಯಾಯಮೂರ್ತಿ ರಾಘವೇಂದ್ರ ಸೀತಾರಾಮ್ ಶ್ರೀವತ್ಸ ಅವರಿದ್ದ ವಿಭಾಗೀಯ ಪೀಠವು ಈ ರೀತಿ ಅಭಿಪ್ರಾಯಪಟ್ಟಿದ್ದು ಹಾಗೆಯೇ ಆಧಾರರಹಿತ ಆರೋಪಗಳನ್ನು ಪರಿಗಣಿಸಿ ಪತಿಗೆ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ವಿಚಾರಣೆ ವೇಳೆ ಪತಿಯ ವಿರುದ್ದ ಕಿಡಿಕಾರಿದ ನ್ಯಾಯಪೀಠವು, ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಪತಿ, ತನಗೆ ಜನಿಸಿದ ಮಗುವಿನ ಪಿತೃತ್ವವನ್ನು ನಿರಾಕರಿಸಿದ್ದಾನೆ. ಈ ಮೂಲಕ ಹೆಂಡತಿಯ ಚಾರಿತ್ರ್ಯವಧೆ ಮಾಡಿದ್ದಾನೆ. ಆದರೆ, ನ್ಯಾಯಾಲಯ ಮಗುವಿನ ತಂದೆ ಯಾರು ಎಂಬುದನ್ನು ಪರೀಕ್ಷೆಗೆ ತಿಳಿಯಲು ಒಳಪಡಲು ಸೂಚಿಸಿದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 112ರ ಪ್ರಕಾರ ವಿವಾಹದ ಅವಧಿಯಲ್ಲಿ ಜನಿಸುವ ಮಗು ಕಾನೂನುಬದ್ದವಾಗಿ ಗಂಡನದ್ದೇ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಗಟ್ಟಿ ಸಾಕ್ಷ್ಯಗಳಿಲ್ಲದೆ ಪತ್ನಿಯ ನಡತೆಯ ಬಗ್ಗೆ ಸಾರ್ವಜನಿಕವಾಗಿ ನಿಂದಿಸುವುದು ಆಕೆಗೆ ಮಾಡುವ ಅತ್ಯಂತ ಭೀಕರ ಮಾನಸಿಕ ಎಂದು ಕ್ರೌರ್ಯವಾಗುತ್ತದೆ, ಎಂದು ತಿಳಿಸಿತು.
ಪತ್ನಿಯ ವಿರುದ್ದ ಸಾಮಾನ್ಯ ಆರೋಪ ಮಾಡುವುದನ್ನು ಹೊರತುಪಡಿಸಿದರೆ ಅದನ್ನು ಸಾಬೀತುಪಡಿಸುವಲ್ಲಿ ಪತಿ ವಿಫಲನಾಗಿರುವುದಲ್ಲದೇ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳನ್ನು ಸಹ ಒದಗಿಸಿಲ್ಲ. ಪತ್ನಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಹೆರಿಗೆಯವರೆಗೂ ತವರು ಮನೆಯಲ್ಲಿರುವಂತೆ ಪೊಲೀಸರ ಸಮ್ಮುಖದಲ್ಲಿ ಪತಿ ಭರವಸೆ ನೀಡಿದ್ದಾರೆ. ಆದರೆ, ಪತ್ನಿಯಿಂದ ಕ್ರೌರ್ಯ ನಡೆದಿದೆ ಎಂದು ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿ ಆತುರದ ನಿರ್ಧಾರ ತೆಗೆದುಕೊಂಡು ತಪ್ಪುಮಾಡಿದೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿ ವಿಚ್ಚೇದನ ಮಂಜೂರು ಆದೇಶವನ್ನ ರದ್ದುಪಡಿಸಿ ತೀರ್ಪು ನೀಡಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
