ಚೆಕ್ ದುರ್ಬಳಕೆ ಪ್ರಕರಣಗಳು ಹೆಚ್ಚಳ: ಕಳವಳ ವ್ಯಕ್ತಪಡಿಸಿದ ಹೈಕೋರ್ಟ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚೆಕ್ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇವುಗಳು ಇತರೇ ಗಂಭೀರ ಸ್ವರೂಪದ ಪ್ರಕರಣಗಳ ವಿಲೇವಾರಿಗೆ ಅಡ್ಡಿಯಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಕಳವಳ ವ್ಯಕ್ತಪಡಿಸಿದ್ದಾರೆ.
ಚೆಕ್ ಅಮಾನ್ಯ ಪ್ರಕರಣವೊಂದರ ವಿಚಾರಣೆ ವೇಳೆ ಮಾತನಾಡಿರುವ ನ್ಯಾಯಮೂರ್ತಿ ಶ್ರೀಶಾನಂದ ಅವರು, ” ಇತ್ತೀಚೆಗೆ ಚೆಕ್ ದುರ್ಬಳಕೆ ಪ್ರಕರಣಗಳು ಹೆಚ್ಚಾಗಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕ್ರಿಮಿನಲ್ ಕೇಸುಗಳ ಪೈಕಿ ಸುಮಾರು ಶೇಕಡಾ 38ರಷ್ಟು ಪ್ರಕರಣಗಳು ಚೆಕ್ ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿವೆ. ಇದರಿಂದ ಕೊಲೆ ಸೇರಿ ಇನ್ನಿತರ ಗಂಭೀರ ಸ್ವರೂಪದ ಅಪರಾಧಗಳಿಗೆ ಸಂಬಂಧಿಸಿದ ಕೇಸ್ ಗಳ ವಿಚಾರಣೆ ಮತ್ತು ಪ್ರಕರಣದ ವಿಲೇವಾರಿಗೆ ಅಡ್ಡಿಯಾಗುತ್ತಿದೆ ಎಂದರು.
ಸಾಮಾನ್ಯವಾಗಿ ಸಾಲ ನೀಡುವವರು ತಾವು ನೀಡುವ ಒಂದು ಸಾಲಕ್ಕೆ ಸಾಲ ಪಡೆದವರಿಂದ 10 ಚೆಕ್ ಸ್ವೀಕರಿಸುತ್ತಾರೆ. 4 ಸಾವಿರ ರೂ. ಸಾಲ ನೀಡಿದರೆ, ಚೆಕ್ ನಲ್ಲಿ 40 ಸಾವಿರ ರೂ. ಎಂದು ಬರೆಯುತ್ತಾರೆ. ಸಾಲ ಮರುಪಾವತಿ ಮಾಡಿದ್ದರೂ ದುರುದ್ದೇಶದಿಂದಲೇ ಚೆಕ್ ಬೌನ್ಸ್ ಕೇಸ್ ದಾಖಲಿಸುತ್ತಾರೆ. ಇಂತಹವು ಸಾಕಷ್ಟು ಪ್ರಕರಣಗಳಿವೆ ಎಂದು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.
ಸಾಲ ನೀಡಿದವರು ಪಡೆದ ಚೆಕ್ ದುರ್ಬಳಕೆ ಮಾಡಿಕೊಳ್ಳುತ್ತಾರೆ. ತಾವು ಸ್ವೀಕರಿಸಿದ 10 ಚೆಕ್ ಗಳನ್ನು ಬಳಸಿ ಹತ್ತು ಕಡೆ ಚೆಕ್ ಬೌನ್ಸ್ ಕೇಸು ದಾಖಲಿಸುತ್ತಾರೆ. ಒಂದು ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯವೊಂದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದರೇ. ಆ ಕೇಸ್ ನಲ್ಲಿ ಸಾಲ ಪಡೆದವರು ನ್ಯಾಯಾಲಯಕ್ಕೆ ಹಾಜರಾಗಿ, ಜಾಮೀನು ಪಡೆದ ಹೊತ್ತಿಗೆ ಮತ್ತೊಂದು ಚೆಕ್ ಬೌನ್ಸ್ ಕೇಸಿನಲ್ಲಿ ಇನ್ನೊಂದು ಕೋರ್ಟ್ ವಾರೆಂಟ್ ಜಾರಿಗೊಳಿಸುತ್ತದೆ. ಹೀಗೆ ಸಾಲ ಪಡೆದವರು ದಿನಂಪ್ರತಿ ಕೋರ್ಟ್ಗೆ ಹಾಜರಾಗುತ್ತಲೇ ಇರುತ್ತಾರೆ. ಆ ಕೇಸುಗಳ ಇತ್ಯರ್ಥವಾಗುವ ವೇಳೆಗೆ ಸಾಲ ಪಡೆದವರ ಪ್ರಾಣ ಹೋಗಿರುತ್ತದೆ” ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
