12/11/2026

Law Guide Kannada

Online Guide

ಒಬಿಸಿ ಅಭ್ಯರ್ಥಿಗಳ ಕ್ರೀಮಿ ಲೇಯರ್ ಅರ್ಹತೆ ನಿರ್ಧಾರ: ಕೇವಲ ಪೋಷಕರ ಸಂಬಳ, ಆದಾಯವೊಂದೇ ಮಾನದಂಡವಲ್ಲ- ಸುಪ್ರೀಂಕೋರ್ಟ್

ನವದೆಹಲಿ: ಒಬಿಸಿ ಅಭ್ಯರ್ಥಿಗಳ ಕ್ರೀಮಿ ಲೇಯರ್ ಅರ್ಹತೆಯನ್ನು ನಿರ್ಧರಿಸಲು ಕೇವಲ ಪೋಷಕರ ಸಂಬಳ (ವೇತನ) ಅಥವಾ ಆದಾಯವೊಂದನ್ನೇ ಮಾನದಂಡವಾಗಿ ಬಳಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಈ ತೀರ್ಪು ಪ್ರಕಟಿಸಿದೆ. ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿಗೆ ಸಂಬಂಧಿಸಿದಂತೆ ಒಬಿಸಿ ಕ್ರೀಮಿ ಲೇಯರ್ (ಕೆನೆಪದರ) ವ್ಯಾಪ್ತಿಯನ್ನು ನಿರ್ಧರಿಸಲು ಅಭ್ಯರ್ಥಿಯ ಪೋಷಕರ ಕೇವಲ ವೇತನ ಅಥವಾ ಆದಾಯವನ್ನು ಮಾತ್ರ ಮಾನದಂಡವಾಗಿ ಬಳಸಲು ಸಾಧ್ಯವಿಲ್ಲ. ಕ್ರೀಮಿ ಲೇಯರ್’ (ಕೆನೆಪದರ) ನಿರ್ಧಾರಕ್ಕೆ ಕೇವಲ ಪೋಷಕರ ವೇತನ ಅಥವಾ ಆದಾಯವೊಂದೇ ಮಾನದಂಡವಲ್ಲ, ಅವರ ಹುದ್ದೆಯ ಶ್ರೇಣಿ ಮತ್ತು ಸಾಮಾಜಿಕ ಸ್ಥಾನಮಾನವೂ ಅತ್ಯಂತ ಮುಖ್ಯ ಎಂದಿದೆ.

ಕ್ರೀಮಿ ಲೇಯರ್ ನಿರ್ಧರಿಸುವಾಗ ಕೇವಲ ಪೋಷಕರ ಆದಾಯ ಅಥವಾ ವೇತನವನ್ನು ಮಾತ್ರ ನೋಡಬಾರದು. ಅದರೊಂದಿಗೆ ಪೋಷಕರು ಹೊಂದಿರುವ ಹುದ್ದೆಯ ವರ್ಗ, ಅವರ ಸೇವಾ ಸ್ಥಿತಿ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸುವುದು ಅತ್ಯಗತ್ಯ. ಸರ್ಕಾರಿ ನೌಕರರ ಮಕ್ಕಳ ಕ್ರೀಮಿ ಲೇಯರ್ ನಿರ್ಧರಿಸುವಾಗ ಅವರ ಹುದ್ದೆಯನ್ನು ಪರಿಗಣಿಸಿ, ಸಾರ್ವಜನಿಕ ವಲಯದ ಉದ್ಯಮಗಳು, ಬ್ಯಾಂಕ್ ಗಳು ಅಥವಾ ಖಾಸಗಿ ವಲಯದ ನೌಕರರ ಮಕ್ಕಳನ್ನು ಕೇವಲ ‘ವೇತನ’ದ ಆಧಾರದ ಮೇಲೆ ಕ್ರೀಮಿ ಲೇಯರ್ ವ್ಯಾಪ್ತಿಗೆ ತರುವುದು ಸಂವಿಧಾನದ ವಿಧಿ 14 ಮತ್ತು 16ರ ಉಲ್ಲಂಘನೆಯಾಗುತ್ತದೆ ಮತ್ತು ಇದು ತಾರತಮ್ಯದಿಂದ ಕೂಡಿದೆ ಎಂದು ನ್ಯಾಯಪೀಠ ತಿಳಿಸಿದೆ.

ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಲು ಈ ತೀರ್ಪನ್ನು ಬಳಸುವಂತಿಲ್ಲ 
ಹಾಗೆಯೇ ಈ ತೀರ್ಪು ಈಗಾಗಲೇ ಮುಕ್ತಾಯಗೊಂಡಿರುವ ಹಳೆಯ ನೇಮಕಾತಿಗಳು, ಹಿರಿತನ ಅಥವಾ ಪ್ರಮೋಷನ್ಗಳಿಗೆ ಅನ್ವಯಿಸುವುದಿಲ್ಲ. ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಲು ಈ ತೀರ್ಪನ್ನು ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯುಪಿಎಸ್ಸಿ 2025ಕ್ಕೆ ಅನ್ವಯ 
ಯುಪಿಎಸ್ಸಿ ಸಿವಿಲ್ ಸರ್ವಿಸಸ್ ಪರೀಕ್ಷೆ 2025ರ ಫಲಿತಾಂಶ ಪ್ರಕಟವಾಗಿದ್ದರೂ, ಸೇವಾ ಹಂಚಿಕೆ ಪ್ರಕ್ರಿಯೆ ಇನ್ನೂ ಬಾಕಿ ಇರುವುದರಿಂದ, ಈ ಬ್ಯಾಚ್ನ ಅಭ್ಯರ್ಥಿಗಳಿಗೆ ನ್ಯಾಯಾಲಯದ ಪ್ರಸ್ತುತ ತೀರ್ಪಿನ ಅಡಿಯಲ್ಲೇ ಒಬಿಸಿ ಕ್ರೀಮಿ ಲೇಯರ್ ನಿರ್ಧಾರ ಮಾಡಿ ಸೇವೆಗಳನ್ನು ಹಂಚಿಕೆ ಮಾಡಬೇಕು ಎಂದು ನ್ಯಾಯಪೀಠವು ಆದೇಶಿಸಿದೆ.

ಪ್ರಕರಣದ ವಿವರ?
1993ರ ಕಚೇರಿ ಜ್ಞಾಪನ ಪತ್ರದ ಪ್ರಕಾರ ಕ್ರೀಮಿ ಲೇಯರ್ ನಿರ್ಧಾರಕ್ಕೆ ವೇತನ ಮತ್ತು ಕೃಷಿ ಆದಾಯವನ್ನು ಹೊರತುಪಡಿಸಲಾಗಿತ್ತು. ಆದರೆ 2004ರಲ್ಲಿ ಕೇಂದ್ರ ಸರ್ಕಾರ ತಂದಿದ್ದ ಸ್ಪಷ್ಟೀಕರಣವು ಪಿಎಸ್ಯು ಮತ್ತು ಖಾಸಗಿ ವಲಯದ ನೌಕರರ ಸಂಬಳವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಮಾಡಿತ್ತು. ಇದನ್ನು ಪ್ರಶ್ನಿಸಿ ಹಲವು ಯುಪಿಎಸ್ಸಿ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದರ ವಿರುದ್ದ ಕೇಂದ್ರ ಸರ್ಕಾರವು ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಿತ್ತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.