ಸವಲತ್ತು ಸೇವಾ ಪ್ರಯೋಜನಗಳ ಬಗ್ಗೆಯೇ ಚಿಂತನೆ: ಜನರ ಬಗ್ಗೆ ಕಾಳಜಿಯಿಲ್ಲ- ನ್ಯಾಯಾಗಾಧಿಕಾರಿಗಳಿಗೆ CJI ತರಾಟೆ
ನವದೆಹಲಿ: ನ್ಯಾಯಾಂಗ ಅಧಿಕಾರಿಗಳು ಸೇವಾ ಸಂಬಂಧಿತ ಮತ್ತು ನಿವೃತ್ತಿ ನಂತರದ ಸೌಲಭ್ಯಗಳಿಗಾಗಿ ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ನ್ಯಾಯಾಂಗಾಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿ ತರಾಟೆಗೆ ತೆಗೆದುಕೊಂಡಿದೆ.
ಕೇರಳದಲ್ಲಿ ಬಾರ್ ಸದಸ್ಯರಿಗೆ ಮೀಸಲಾಗಿರುವ ನೇರ ನೇಮಕಾತಿ ಕೋಟಾದಡಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಪೀಠವು ತರಾಟೆ ತೆಗೆದುಕೊಂಡಿದೆ. ವಿಚಾರಣಾ ನ್ಯಾಯಾಲಯಗಳಲ್ಲಿ ಇವರು ಲಭ್ಯವಿರುತ್ತಾರೆಯೇ ಮತ್ತು ಅಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಾರೆಯೇ? ಸಿಜೆಐ ಸೂರ್ಯಕಾಂತ್ ಪ್ರಶ್ನಿಸಿದರು. ಅವರು ಈಗ ಅತಿಯಾಗಿ ಮಾತನಾಡುತ್ತಿದ್ದಾರೆ. ಪ್ರತಿಯೊಂದು ವಿಷಯದಲ್ಲೂ, ನ್ಯಾಯಾಂಗ ಅಧಿಕಾರಿಗಳು ನಮಗೆ ಇದನ್ನು ಮಂಜೂರು ಮಾಡಿ ಎಂದು ಕೋರಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅವರು ಎಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದಾರೆ? ಇಡೀ ದಿನ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ನೀವು ಹತ್ತು ಗಂಟೆಗೆ ಹೋದರೆ, ನ್ಯಾಯಾಲಯದಲ್ಲಿ ಯಾರೂ ಇರುವುದಿಲ್ಲ. ಅವರು ತಮ್ಮ ಕೊಠಡಿಗಳಲ್ಲಿ ಕುಳಿತು ಕಾಫಿ ಕುಡಿಯುತ್ತಿರುತ್ತಾರೆ. ಏನಾಗುತ್ತಿದೆ ಎಂಬುದು ನಮಗೆ ಗೊತ್ತಿಲ್ಲವೇನೋ ಎಂಬಂತೆ ಅವರ ವರ್ತನೆ ಇರುತ್ತದೆ ಎಂದು ಸಿಜೆಐ ಸೂರ್ಯಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊರಗಡೆ ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ, ಇವರಿಗೆ ಆ ವಿಷಯಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ತಮಗೆ ಯಾವ ಸವಲತ್ತುಗಳು ಮತ್ತು ಸೇವಾ ಪ್ರಯೋಜನಗಳು ಸಿಗುತ್ತಿವೆ ಎಂಬುದರ ಬಗ್ಗೆಯೇ ಅವರು ದಿನದ 24 ಗಂಟೆಯೂ ಯೋಚಿಸುತ್ತಿರುತ್ತಾರೆ. ತಮ್ಮ ನಿವೃತ್ತಿ ವಯಸ್ಸನ್ನು ಹೆಚ್ಚಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಚಿಂತನೆಯಲ್ಲಿರುತ್ತಾರೆ ಎಂದು ಸಿಜೆಐ ಸೂರ್ಯಕಾಂತ್ ವಾಗ್ದಾಳಿ ನಡೆಸಿದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
