16/05/2026

Law Guide Kannada

Online Guide

ತಾಯಿಯನ್ನ ನೋಡಿಕೊಳ್ಳದ ಮಗಳ ನಡೆಗೆ ತೀವ್ರ ಖಂಡನೆ: ಆಸ್ತಿ ವಾಪಸ್ ನೀಡುವಂತೆ ಆದೇಶಿಸಿ ಶಾಕ್ ಕೊಟ್ಟ ಹೈಕೋರ್ಟ್

ಬೆಂಗಳೂರು: ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಕಡೆಗಣಿಸಿದ ಮಗಳಿಗೆ ಹೈಕೋರ್ಟ್ ಶಾಕ್ ನೀಡಿದ್ದು ಮಗಳ ಹೆಸರಿಗೆ ವರ್ಗಾವಣೆಯಾಗಿದ್ದ ಆಸ್ತಿಯನ್ನು ಮರಳಿ ತಾಯಿಗೆ ನೀಡುವಂತೆ ಆದೇಶಿಸಿದೆ.

ಹೌದು, ವಯಸ್ಸಾದ ಕಾಲದಲ್ಲಿ ತಾಯಿಯನ್ನು ಕಡೆಗಣಿಸಿದ ಮಗಳ ನಡೆಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್ , ಮಗಳ ಹೆಸರಿಗೆ ವರ್ಗಾವಣೆಯಾಗಿದ್ದ ಆಸ್ತಿಯನ್ನು ವಾಪಸ್ ತಾಯಿಗೆ ನೀಡುವಂತೆ ಆದೇಶಿಸಿದೆ.

ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠವು ಈ ತೀರ್ಪು ನೀಡಿದ್ದು, ತಾಯಿಯನ್ನು ನೋಡಿಕೊಳ್ಳುವುದು ಕೇವಲ ಸಾಮಾಜಿಕ ಅಥವಾ ನೈತಿಕ ಜವಾಬ್ದಾರಿಯಲ್ಲ, ಅದು ಕಾನೂನುಬದ್ಧ ಹೊಣೆಗಾರಿಕೆಯೂ ಹೌದು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಏನಿದು ಪ್ರಕರಣ..
62 ವರ್ಷದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಹೇಮಾ ಅವರು ತಾವು ಕಷ್ಟಪಟ್ಟು ಸಂಪಾದಿಸಿದ್ದ ಆಸ್ತಿಯನ್ನು ತಮ್ಮ ಮಕ್ಕಳಿಗೆ ವರ್ಗಾವಣೆ ಮಾಡಿದ್ದರು. ವೃದ್ಧಾಪ್ಯದಲ್ಲಿ ಮಗಳು ಆರ್. ಪವಿತ್ರಾ ಮತ್ತು ಮಗ ಆರ್. ವೇಣುಗೋಪಾಲ್ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಅವರ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ಆದರೆ, ಆಸ್ತಿ ಕೈ ಸೇರಿದ ಮೇಲೆ ಮಕ್ಕಳು ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಆಕೆಯನ್ನು ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿದ್ದರು. ಅಲ್ಲದೆ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ಇದರಿಂದ ನೊಂದ ತಾಯಿ ಹೇಮಾ, ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007’ರ ಅಡಿಯಲ್ಲಿ ತಮಗೆ ನ್ಯಾಯ ಕೊಡಿಸುವಂತೆ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠವು ,ತಾಯಿಯನ್ನು ಕಡೆಗಣಿಸಿದ ಕಾರಣ, ಮಕ್ಕಳಿಗೆ ಮಾಡಿಕೊಡಲಾಗಿದ್ದ ದಾನಪತ್ರವನ್ನು ರದ್ದುಗೊಳಿಸಿ ಆಸ್ತಿಯನ್ನು ಮರಳಿ ತಾಯಿಯ ಹೆಸರಿಗೆ ನೋಂದಣಿ ಮಾಡಿಕೊಡುವ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಸ್ವಂತ ಮನೆಯಿದ್ದರೂ ವೃದ್ಧ ತಾಯಿಯನ್ನು ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿರುವುದು ಮಕ್ಕಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ತರಾಟೆ ತೆಗೆದುಕೊಂಡ ನ್ಯಾಯಪೀಠವು, ತಾಂತ್ರಿಕ ಕಾರಣಗಳನ್ನು ನೀಡಿ ಹಿರಿಯ ನಾಗರಿಕರ ಕಾಯ್ದೆಯ ಮೂಲ ಉದ್ದೇಶವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಮಕ್ಕಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಾನಪತ್ರದಲ್ಲಿ ‘ನೋಡಿಕೊಳ್ಳಬೇಕು’ ಎಂದು ಸ್ಪಷ್ಟವಾಗಿ ಬರೆಯದಿದ್ದರೂ, ಆಸ್ತಿ ನೀಡುವ ಹಿಂದೆ ಅಂತಹದೊಂದು ನಂಬಿಕೆ ಇರುತ್ತದೆ ಎಂಬುದು ಕಾನೂನಿನ ಆಶಯ” ಎಂದು ಹೇಳಿದ ನ್ಯಾಯಪೀಠ, ಮಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.