12/09/2026

Law Guide Kannada

Online Guide

7 ರೂ. ಅಲ್ಪ ಲಾಭಕ್ಕೆ ಆಸೆ ಪಟ್ಟ ಅಂಗಡಿ ಮಾಲೀಕನಿಗೆ ಬಿತ್ತು 7 ಲಕ್ಷ ರೂ. ದಂಡ

ಅನ್ನವರಂ : ಸಾಮಾನ್ಯವಾಗಿ ವ್ಯಾಪಾರಿಗಳು ಅಂಗಡಿ ಮಾಲೀಕರು ಲಾಭಕ್ಕಾಗಿ ಗ್ರಾಹಕರಿಂದ ಹೆಚ್ಚಿನ ಹಣ ಕೀಳುವ ಕೆಲಸಕ್ಕೆ ಕೈಹಾಕುವ ಪ್ರಸಂಗಗಳು ನಮ್ಮ ಸುತ್ತಮುತ್ತ ನಮ್ಮ ನಡುವೆಯೇ ನಡೆಯುತ್ತಿರುತ್ತವೆ. ಆದರೆ ಇದರ ಬಗ್ಗೆ ಯಾರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದರೂ ಗ್ರಾಹಕರು ಈ ಬಗ್ಗೆ ಪ್ರಶ್ನಿಸದೆ ಸುಮ್ಮನಾಗಿಬಿಡುತ್ತಾರೆ. ಆದರೆ ಇಲ್ಲೊಬ್ಬ ಗ್ರಾಹಕರು ನೀರಿನ ಬಾಟಲ್ ಗೆ ಹೆಚ್ಚುವರಿ 7 ರೂ. ಕೇಳಿದ ಅಂಗಡಿ ಮಾಲೀಕನ ವಿರುದ್ದ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಗ್ರಾಹಕ ಕಾನೂನು ಮೊರೆ ಹೋಗಿದ್ದರಿಂದಾಗಿ, ಅಲ್ಪ ಲಾಭಕ್ಕೆ ಆಸೆ ಪಟ್ಟ ಅಂಗಡಿ ಮಾಲೀಕ ಬರೊಬ್ಬರಿ 7 ಲಕ್ಷ ರೂ, ದಂಡ ಕಟ್ಟುವ ಪರಿಸ್ಥಿತಿ ಬಂದಿದೆ, ಹೌದು, ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿರುವ ಅನ್ನವರಂ ದೇವಾಲಯದ ಆವರಣದ ಅಂಗಡಿಯೊಂದರಲ್ಲಿ ನೀರಿನ ಬಾಟಲಿಯ ಮೇಲೆ ಅಂಗಡಿಯಾತ ಹೆಚ್ಚುವರಿಯಾಗಿ ಏಳು ರೂಪಾಯಿ ತೆಗೆದುಕೊಂಡಿದ್ದ. ಇದನ್ನು ಪ್ರಶ್ನಿಸಿ ಗ್ರಾಹಕರೊಬ್ಬರು ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ಈ ವ್ಯಾಜ್ಯದ ವಿಚಾರಣೆ ನಡೆಸಿದ ಕಾಕಿನಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಂಗಡಿ ಮಾಲೀಕನಿಗೆ ಬರೋಬ್ಬರಿ 7 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಕಾಕಿನಾಡ ಜಿಲ್ಲೆಯ ಪಿಠಾಪುರಂ ಪ್ರದೇಶದ ಭಕ್ತರಾದ ಡಿ.ವೆಂಕಟೇಶ್ವರ ರಾವ್ ಕಳೆದ ಫೆಬ್ರವರಿ 22ರಂದು ಅನ್ನವರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸತ್ಯಗಿರಿ ಬೆಟ್ಟದ ಮೇಲಿರುವ ಸತ್ಯದೇವ ಫ್ಯಾನ್ಸಿ, ಕೋಕೊನಟ್ಸ್ ಅಂಡ್ ಕೂಲ್ ಡ್ರಿಂಕ್ಸ್ ಎಂಬ ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿ ಮಾಡಿದ್ದರು. ಬಾಟಲಿಯ ಗರಿಷ್ಠ ಬೆಲೆ 18 ರೂ. ಆಗಿದ್ದು, ಅದಕ್ಕೆ ಅಂಗಡಿಯವ 25 ರೂ. ಪಡೆದಿದ್ದರು.

ಇದನ್ನು ಪ್ರಶ್ನಿಸಿ ಗ್ರಾಹಕ ರಾವ್ ಸಾಕ್ಷ್ಯದೊಂದಿಗೆ ವಾಟ್ಸ್ ಆ್ಯಪ್ ಮೂಲಕ ಅನ್ನವರಂ ದೇವಸ್ಥಾನದ ಆಡಳಿತ ಮಂಡಳಿಗೆ ಅಧಿಕೃತ ದೂರು ನೀಡಿದ್ದರು. ಆದರೆ, ದೇವಸ್ಥಾನದ ಆಡಳಿತವು ಆ ವ್ಯಾಪಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವೆಂಕಟೇಶ್ವರ ರಾವ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು.

ದೂರಿನ ವಿಚಾರಣೆ ನಡೆಸಿದ ಗ್ರಾಹಕರ ಆಯೋಗ ಅಧ್ಯಕ್ಷರಾದ ಸಿ.ಹೆಚ್.ರಘುಪತಿ ವಸಂತ ಕುಮಾರ್, ಅಂಗಡಿಯವರು ಕಾನೂನುಬಾಹಿರವಾಗಿ ಹೆಚ್ಚುವರಿ ಹಣ ವಸೂಲಿ ಮಾಡಿದ್ದಾರೆ ಎಂದು ತೀರ್ಮಾನಿಸಿ ಅಂಗಡಿ ಮಾಲೀಕರಿಗೆ 7 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.