07/03/2026

Law Guide Kannada

Online Guide

ಪಾಟೀ ಸವಾಲು ನಡೆಸದೆ ಆರೋಪಿಗೆ ಶಿಕ್ಷೆ ಕ್ರಮ ಸರಿಯಲ್ಲ: ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ವಿಚಾರಣಾ ನ್ಯಾಯಾಲಯವು ಅಗತ್ಯ ಸಂದರ್ಭದಲ್ಲಿ ಆರೋಪಿಗೆ ಉಚಿತ ಕಾನೂನು ನೆರವು ನೀಡಬೇಕು. ಸಾಕ್ಷ್ಯಗಳ ಪಾಟೀ ಸವಾಲು ನಡೆಸದೆ ಆರೋಪಿಗೆ ಶಿಕ್ಷೆ ವಿಧಿಸಿದ್ದು ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ಹೈಕೋರ್ಟ್ ಆಕ್ಷೇಪಿಸಿದ್ದು, ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನ ರದ್ದುಪಡಿಸಿದೆ.

ಪೋಕ್ಸ್ ಪ್ರಕರಣದಲ್ಲಿ ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶದಿಂದ ಬಾಧಿತರಾದ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. “ಸೋಮಶೇಖರ್ @ ಸೋಮ ವಿರುದ್ಧ ಕರ್ನಾಟಕ ರಾಜ್ಯ” ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು ಅರ್ಜಿದಾರರಿಗೆ ವಕೀಲರ ನೆರವು ನೀಡಬೇಕು ಮತ್ತು ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನ ಮೂಲಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಸಾಕ್ಷಿಗಳ ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಪರ ವಕೀಲರು ನ್ಯಾಯಾಲಯದ ಕಲಾಪಕ್ಕೆ ಹಾಜರಾಗದಿದ್ದರೆ, ಅವರಿಗೆ ಉಚಿತ ಕಾನೂನು ನೆರವು ನೀಡುವ ಬಾಧ್ಯತೆಯನ್ನು ವಿಚಾರಣಾ ನ್ಯಾಯಾಲಯ ಹೊಂದಿದೆ. ಯಾವುದೇ ನಾಗರಿಕರೂ ನ್ಯಾಯ ಪಡೆಯುವ ಅವಕಾಶದಿಂದ ವಂಚಿತರಾಗುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಸದರಿ ಪ್ರಕರಣದಲ್ಲಿ ಆರೋಪಿಗೆ ವಿಚಾರಣಾ ನ್ಯಾಯಾಲಯವು ಪಾಟೀ ಸವಾಲಿಗೆ ಅವಕಾಶ ನೀಡಿತ್ತು. ಆ ಸಂದರ್ಭದಲ್ಲಿ ಅವರ ಪರ ವಾದಿಸುತ್ತಿದ್ದ ವಕೀಲರು ಗೈರು ಹಾಜರಾಗಿದ್ದರು. ಈ ವೇಳೆ ಸಿಆರ್ಪಿಸಿ ಸೆಕ್ಷನ್ 304ರ ಪ್ರಕಾರ, ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ವಕೀಲರ ನೆರವು ನೀಡಬೇಕಿತ್ತು. ಇಂತಹ ಸಂದರ್ಭದಲ್ಲಿ ಆರೋಪಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡುವ ಬಾಧ್ಯತೆಯನ್ನು ವಿಚಾರಣಾ ನ್ಯಾಯಾಲಯ ಹೊಂದಿತ್ತು ಎಂದು ನ್ಯಾಯಪೀಠ ಹೇಳಿದೆ.

ವಿಚಾರಣಾ ನ್ಯಾಯಾಲಯವು ಆರೋಪಿಗೆ ತನ್ನ ಪರ ಅಭಿರಕ್ಷೆ ನಡೆಸಲು ಉಚಿತ ಕಾನೂನು ನೆರವು ಕೊಡಬೇಕಿತ್ತು. ಆದರೆ, ವಿಚಾರಣಾ ನ್ಯಾಯಾಲಯ ಉಚಿತ ಕಾನೂನು ನೆರವು ನೀಡಿಲ್ಲ. ಸಾಕ್ಷ್ಯಗಳ ಪಾಟೀ ಸವಾಲು ನಡೆಸದೆ ಶಿಕ್ಷೆ ವಿಧಿಸುವ ಕ್ರಮ ಸರಿಯಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.