23/04/2026

Law Guide Kannada

Online Guide

ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ಕೇಸ್: ಮೂವರು ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದ ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ರೊಪ್ಪಿಕೊಂಡ ಮೂವರು ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಸೈಯದ್ ಇಕ್ರಾಮುದ್ದೀನ್ (44), ಸೈಯ್ಯದ್ ಆಸೀಫ್ (46) ಹಾಗೂ ಮೊಹಮ್ಮದ್ ಅತಿಫ್ (26) ಜೈಲುಶಿಕ್ಷೆಗೆ ಗುರಿಯಾದ ಅಪರಾಧಿಗಳು. ಅಪರಾಧಿಗಳಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 36 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಏನಿದು ಘಟನೆ..
2020ರ ಅ.11ರಂದು ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಶ್ರೀನಿವಾಸ್ ಮೂರ್ತಿ ಅವರ ಸೋದರಳಿಯ ನವೀನ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎಂದು ಆರೋಪಿಸಿ ನಡೆದ ಗಲಾಟೆಯಲ್ಲಿ, ಎರಡು ಪೊಲೀಸ್ ಠಾಣೆ ಧ್ವಂಸಗೊಳಿಸಿ, ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಈ ಸಂದರ್ಭಧಲ್ಲಿ ಗುಂಡೇಟಿನಿಂದ ಮೂವರು ಸಾವನ್ನಪ್ಪಿದ್ದರು. ಗಲಭೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 12 ವಾಹನಗಳಿಗೆ ಹಾನಿಯಾಗಿತ್ತು. 5 ದ್ವಿಚಕ್ರ ವಾಹನಗಳು ಮತ್ತು 1 ಇನ್ನೋವಾ ಕಾರು ಸುಟ್ಟುಹೋಗಿತ್ತು.

ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿ ಪೀಠೋಪಕರಣ ಧ್ವಂಸಗೊಳಿಸಿ ಗಲಭೆ ಗಲಭೆಗೆ ಒಳಸಂಚು ರೂಪಿಸಿದ್ದ ಆರೋಪದ ಮೇರೆಗೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಎನ್ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳ ತನಿಖೆ ವೇಳೆ ಆರೋಪಿಗಳು ಒಳಸಂಚು ಮತ್ತು ಇನ್ನಿತರರ ಸಹಚರರೊಂದಿಗೆ ಸೇರಿ ಗಲಭೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿತ್ತು. ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದಲ್ಲಿ ಒಟ್ಟು 199 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, 187 ಆರೋಪಿಗಳನ್ನು ಬಂಧಿಸಲಾಗಿತ್ತು. ಆ ಪೈಕಿ ನಾಲ್ವರು ಶರಣಾಗಿದ್ದರು, ಓರ್ವ ಆರೋಪಿ ಮೃತಪಟ್ಟಿದ್ದನು. ಎನ್ಐಎ ವಿಶೇಷ ನ್ಯಾಯಾಲಯದಲ್ಲಿ 138 ಮಂದಿ ವಿರುದ್ಧ ಚಾರ್ಜಶೀಟ್ ಸಲ್ಲಿಸಲಾಗಿತ್ತು.

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ನ್ಯಾಯಾಧೀಶರ ಸೂಚನೆ ಮರೆಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಹಾಜರು ಪಡಿಸಲಾಗಿತ್ತು. ಇದೀಗ ಅಪರಾಧಿಗಳಿಗೆ ಕೋರ್ಟ್ ಜೈಲುಶಿಕ್ಷೆ ವಿಧಿಸಿದೆ. ಎನ್ಐಎ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.