25/07/2026

Law Guide Kannada

Online Guide

ಕುಡಿದು ವಾಹನ ಚಲಾಯಿಸಿ ಅಪಘಾತವಾದ್ರೆ ‘ವಿಮಾ ಪರಿಹಾರ’ ಕಡಿತ- ಹೈಕೋರ್ಟ್

ಬೆಂಗಳೂರು: ಮಧ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತವಾಗಿ ಮೃತಪಟ್ಟರೆ ಅಂತಹ ಚಾಲಕನ ಅಥವಾ ಸವಾರನ ಕುಟುಂಬಕ್ಕೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ದೊರೆಯುವುದಿಲ್ಲ ಎಂದು ಹೇಳಿದ ಹೈಕೋರ್ಟ್ ಅಪಘಾತ ಪ್ರಕರಣವೊಂದರ ಪರಿಹಾರದ ಮೊತ್ತವನ್ನ ಕಡಿತಗೊಳಿಸಿ ತೀರ್ಪು ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ತೀರ್ಪು ಪ್ರಕಟಿಸಿದ್ದು ವಿಮಾ ನಿಯಮಾವಳಿಗಳ ಪ್ರಕಾರ ಪೂರ್ಣ ಮೊತ್ತದ ನಷ್ಟಪರಿಹಾರಕ್ಕೆ ಇಂತಹ ಪ್ರಕರಣಗಳು ಅರ್ಹವಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟ ಶ್ರೀನಿವಾಸ್ ಹರಿಕಂತ್ರ ಎಂಬುವರ ಕುಟುಂಬಕ್ಕೆ ಮೊಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವು ಆರಂಭದಲ್ಲಿ 3.44 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಿಮಾ ಕಂಪನಿಯು ಹೈಕೋರ್ಟ್ ಮೊರೆ ಹೋಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಆದೇಶವನ್ನು ಭಾಗಶಃ ಪುರಸ್ಕರಿಸಿ, ಪರಿಹಾರ ಮೊತ್ತವನ್ನು 3.44 ಲಕ್ಷ ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಇಳಿಸಿ ಆದೇಶ ಹೊರಡಿಸಿದೆ.

ಅಪಘಾತಕ್ಕೊಳಗಾದ ಬೈಕ್ ಸವಾರ ಸ್ವತಃ ಮದ್ಯಪಾನ ಮಾಡಿ ಚಾಲನೆ ಮಾಡುವ ಮೂಲಕ ತಪ್ಪು ಎಸಗಿರುವುದರಿಂದ, ಆತನ ಕಾನೂನುಬದ್ಧ ವಾರಸುದಾರರಿಗೆ ಪೂರ್ಣ ಪ್ರಮಾಣದ ಪರಿಹಾರ ಪಡೆಯುವ ಹಕ್ಕಿರುವುದಿಲ್ಲ. ಆದಾಗ್ಯೂ, ವಾಹನ ಮಾಲೀಕರು ಹೊಂದಿದ್ದ ವೈಯಕ್ತಿಕ ಅಪಘಾತ ರಕ್ಷಣೆ ವಿಮಾ ಪಾಲಿಸಿಯ ನಿಯಮಗಳ ಅಡಿಯಲ್ಲಿ ಗರಿಷ್ಠ 1 ಲಕ್ಷ ರೂಪಾಯಿ ಪರಿಹಾರವನ್ನು ಮಾತ್ರ ವಿಮಾ ಕಂಪನಿಯು ಪಾವತಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

ಏನಿದು ಘಟನೆ
ಶ್ರೀನಿವಾಸ್ ಹರಿಕಂತ್ರ ಎಂಬುವವರು 2015ರ ಫೆಬ್ರವರಿ 5ರಂದು ತಮ್ಮ ಬೈಕ್ ನಲ್ಲಿ ಹಿಂಬದಿ ಸವಾರನೊಂದಿಗೆ ಬೆಂಗಳೂರಿನ ಬನಶಂಕರಿಯಲ್ಲಿ ಪ್ರಯಾಣಿಸುತ್ತಿದ್ದಾಗ, ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರು. ತೀವ್ರ ಗಾಯಗೊಂಡ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಮೃತನ ಕುಟುಂಬಸ್ಥರು ಪರಿಹಾರ ಕೋರಿ ನ್ಯಾಯಾಧಿಕರಣದ ಮೊರೆ ಹೋಗಿ 3.44 ಲಕ್ಷ ರೂ. ಪರಿಹಾರ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ವಿಮಾ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.