ನೈಜ ಕೇಸ್ ಗಳ ತನಿಖೆಗೆ ನಿರಾಸಕ್ತಿ: ಮರ ಸುತ್ತುವ ಪ್ರೇಮಿಗಳ ಹಿಂದೆ ಪೊಲೀಸರ ಕಣ್ಣು- ಹೈಕೋರ್ಟ್ ವ್ಯಂಗ್ಯ
ಬೆಂಗಳೂರು: ಕರ್ನಾಟಕದ ಪೊಲೀಸರು ಎಷ್ಟು ಬಲಶಾಲಿಗಳು ಎಂದರೆ ಅವರು ಮತ್ತು ಮರ ಸುತ್ತುವ ಪ್ರೇಮಿಗಳು ಲಿವ್ ಇನ್ ಸಂಬಂಧದ ಜೋಡಿಗಳು ಹಾಗೂ ದಂಪತಿಯ ಹಿಂದೆ ಹೋಗುತ್ತಾರೆ. ನೈಜ ಅಪರಾಧಗಳನ್ನು ಯಾರೂ ತನಿಖೆ ಮಾಡುತ್ತಿಲ್ಲ ಎಂದು ಹೈಕೋರ್ಟ್ ಪೊಲೀಸರ ಕಾರ್ಯವೈಖರಿಯ ಬಗ್ಗೆ ವ್ಯಂಗ್ಯವಾಡಿದೆ.
ಕಾಂತಾರ ಸಿನಿಮಾದ ದೈವಪಾತ್ರಕ್ಕೆ ಅಪಮಾನ ಮಾಡಿದ ಸಂಬಂಧದ ಪ್ರಕರಣ ರದ್ದತಿ ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ನಡೆಸುತ್ತಿದ್ದ ಈ ರೀತಿಯಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಸಹ ಜೀವನ ನಡೆಸುವ ಪ್ರೇಮಿಗಳು, ಪಾರ್ಕ್ ನಲ್ಲಿ ಮರ ಸುತ್ತುವ ಪ್ರೇಮಿಗಳ ಬಗ್ಗೆ ಗಮನ ಹರಿಸುವುದರಲ್ಲೇ ಪೊಲೀಸರು ಕಾಲ ಹರಣ ಮಾಡುತ್ತಿದ್ದಾರೆ. ನೈಜ ಪ್ರಕರಣಗಳ ತನಿಖೆಗೆ ಅವರು ನಿರಾಸಕ್ತಿ ಹೊಂದಿದ್ದಾರೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
ವಿಚಾರಣೆಯ ವೇಳೆ “ರಣವೀರ್ ಸಿಂಗ್ ಅವರು ಚಾಮುಂಡಿ ಬೆಟ್ಟಕ್ಕೆ ನೀಡಲು ಭದ್ರತೆಯ ಸಮಸ್ಯೆ ಇದೆ” ಎಂದು ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೇಳಿದರು. ಈ ಹಂತದಲ್ಲಿ ದೂರುದಾರರ ಪರ ವಕೀಲ ಸಿಜಿ ಮಲೆಯಾಳ್ ಅವರು “ಕರ್ನಾಟಕ ಪೊಲೀಸರು ಶಕ್ತಿಯುತವಾಗಿದ್ದು, ರಕ್ಷಣೆ ನೀಡುತ್ತಾರೆ” ಎಂದು ಸಮರ್ಥನೆಗೆ ಮುಂದಾದರು.
ಈ ವೇಳೆ ಸಿಜಿ ಮಲೆಯಾಳ್ ಅವರನ್ನು ತಡೆದ ನ್ಯಾಯಪೀಠವು , ಕರ್ನಾಟಕ ಪೊಲೀಸರು ಎಷ್ಟು ಬಲಶಾಲಿಗಳು ಎಂದರೆ ಅವರು ಲಿವ್ ಇನ್ ಸಂಬಂಧ, ದಂಪತಿಯ ಹಿಂದೆ ಹೋಗುತ್ತಾರೆ. ನೈಜ ಅಪರಾಧಗಳನ್ನು ಯಾರೂ ತನಿಖೆ ಮಾಡುತ್ತಿಲ್ಲ. ಎಲ್ಲರೂ ಬಿಎನ್ಎಸ್ ಸೆಕ್ಷನ್ 69ರ (ಮದುವೆ ನೆಪದಲ್ಲಿ ಲೈಂಗಿಕ ದುರ್ಬಳಕೆ ಸಂಬಂಧಿತ ಅಪರಾಧಗಳು) ಅಡಿ ಅಪರಾಧಗಳನ್ನು ಮಾತ್ರ ತನಿಖೆ ಮಾಡುತ್ತಾರೆ” ಎಂದು ಚಾಟಿ ಬೀಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
