20/05/2026

Law Guide Kannada

Online Guide

ನಟ ದರ್ಶನ್ ವಿರುದ್ದ ‘ಮೀಡಿಯಾ’ ಟ್ರಯಲ್: ಕಠಿಣ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದು ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್ ಅವರ ವಿರುದ್ಧ ಮೀಡಿಯಾ ಟ್ರಯಲ್ ನಡೆಸುವ ಮಾಧ್ಯಮಗಳ, ಅದರಲ್ಲೂ ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ತಮ್ಮ ವಿರುದ್ಧ ನಡೆಯುತ್ತಿರುವ ಮೀಡಿಯ ಟ್ರಯಲ್ ನಿರ್ಬಂಧಿಸಲು, ಅದರಲ್ಲೂ ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ದೇಶನ ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಆದೇಶಿಸುವಂತೆ ಕೋರಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, “ಬೇಕಾಬಿಟ್ಟಿ ವರದಿ ಮಾಡುವ ಮಾಧ್ಯಮಗಳ ವಿರುದ್ಧ ಸಕ್ಷಮ ಪ್ರಾಧಿಕಾರಗಳು ಕ್ರಮಕೈಗೊಳ್ಳದಿರುವುದು ಸ್ಟೇಚ್ಛೆಯ ಕ್ರಮ, ಅಸಮರ್ಥನೀಯ. ಮೇಲ್ನೋಟಕ್ಕೆ ಕಾನೂನು ಮತ್ತು ನ್ಯಾಯಾಂಗದ ಆದೇಶಗಳ ಉಲ್ಲಂಘನೆಯಂತೆ ಕಾಣುತ್ತದೆ. ಮಾಧ್ಯಮಗಳು ನಡೆಸುತ್ತಿರುವ ಮೀಡಿಯಾ ಟ್ರಯಲ್, ದರ್ಶನ್ ಅವರ ನ್ಯಾಯಯುತ ವಿಚಾರಣೆಯ ಹಕ್ಕಿಗೆ ಗಂಭೀರ ಹಾನಿ ಉಂಟು ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಮಾಧ್ಯಮ ಪ್ರಜಾಪ್ರಭುತ್ವದ ಕಾವಲುನಾಯಿಯಾಗಿದೆ. ಅದಕ್ಕೆ ಅದರದ್ದೇ ಆದ ಘನತೆ, ಗೌರವ ಇದೆ. ಆದರೆ, ಅದು ನ್ಯಾಯಾಧೀಶರು, ತೀರ್ಪುಗಾರ ಮತ್ತು ಆ ತೀರ್ಪಿನ ಅನುಷ್ಠಾನಗೊಳಿಸುವ ಸ್ನಾನಕ್ಕೆ ಹೋದರೆ ಕಾನೂನು ಮುರಿದು ಬೀಳಲಿದೆ. ಸ್ಟುಡಿಯೊಗಳ ಪ್ರಜ್ವಲಿಸುವ ದೀಪಗಳ ಮುಂದೆ ನ್ಯಾಯದಾನ ಪ್ರಕ್ರಿಯೆ ಮಸುಕಾಗಲು ಅವಕಾಶ ನೀಡಲಾಗದು” ಎಂದು ನ್ಯಾಯಪೀಠವು ಮಾಧ್ಯಮಗಳ ವಿರುದ್ಧ ತೀಕ್ಷ್ಮವಾದ ಕಿಡಿ ಕಾರಿದೆ.

ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ನಿಯಂತ್ರಣ) ಕಾಯಿದೆಯ ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿರುವ ಮಾಧ್ಯಮಗಳು ಪ್ರಸಾರ ಮಾಡಿರುವ “ದರ್ಶನ್ ವಿರುದ್ಧದ ಕಂಟೆಂಟ್” ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ತೆಗೆಯಲು ನಿರ್ದೇಶಿಸಬೇಕು. ಆದೇಶ ಉಲ್ಲಂಘಿಸುವ ಮಾಧ್ಯಮಗಳಿಗೆ ದಂಡ ವಿಧಿಸಬೇಕು, ಅವರ ಪರವಾನಗಿ ರದ್ದುಪಡಿಸುವುದರ ಜೊತೆಗೆ ಕಾನೂನಿನ ಅನ್ವಯ ಸೂಕ್ತ ಪ್ರಕ್ರಿಯೆ ಆರಂಭಿಸಬೇಕು ಎಂದು ಆದೇಶಿಸಿರುವ ನ್ಯಾಯಪೀಠ, ಈ ಸಂಬಂಧಿತ ಅನುಪಾಲನಾ ವರದಿಯನ್ನು ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ನಿರ್ದೇಶಿಸಿದೆ.

ಮಾಧ್ಯಮ ವರದಿಗಳು ನ್ಯಾಯಾಂಗ ನಿರ್ಣಯವನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ. ನ್ಯಾಯಾಲಯದ ದೃಶ್ಯಗಳನ್ನು ವಾಸ್ತವಿಕವಾಗಿ ಪ್ರದರ್ಶಿಸುವ ಮೂಲಕ ಮತ್ತು ಆಯ್ದ ನಿರೂಪಣೆಗಳನ್ನು ಬಿಂಬಿಸುವ ಮೂಲಕ, ಮಾಧ್ಯಮಗಳು ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಕೆಲಸದಲ್ಲಿನಿರತವಾಗಿದ್ದು, ದರ್ಶನ್ ಅವರ ನ್ಯಾಯಯುತ ವಿಚಾರಣೆಯ ಹಕ್ಕನ್ನು ದುರ್ಬಲಗೊಳಿಸಿವೆ ಎಂದು ನ್ಯಾಯಪೀಠ ಚಾಟಿ ಬೀಸಿದೆ.

ವಿದ್ಯುನ್ಮಾನ ಮಾಧ್ಯಮಗಳು ನ್ಯಾಯಾಲಯದಲ್ಲಿ ಕಲಾಪವನ್ನು ಪುನರ್ ರೂಪಿಸುವ ಮಟ್ಟಕ್ಕೆ ಹೋಗಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಮುಖವನ್ನು ಮರೆಮಾಚಲಾಗಿದೆ. ಉಳಿದಂತೆ ಆರೋಪಿಗಳು ಮತ್ತು ವಕೀಲರ ಮುಖವನ್ನು ಮುಕ್ತವಾಗಿ ಪ್ರಸಾರ ಮಾಡುತ್ತಿವೆ. ಪ್ರತಿದಿನದ ವಿಚಾರಣೆಯಂದು ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ವಿಚಾರಣೆಗೆ ಬಾಕಿ ಇರುವ ನ್ಯಾಯಾಂಗ ಪ್ರಕ್ರಿಯೆಯನ್ನು ಒಂದು ರೀತಿ ಸಾರ್ವಜನಿಕ ಪ್ರದರ್ಶನವನ್ನಾಗಿಸಿವೆ ಎಂದು ನ್ಯಾಯಪೀಠವು ಹೇಳಿದ್ದು ಇಂತಹ ಮಾಧ್ಯಮಗಳ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.