23/08/2026

Law Guide Kannada

Online Guide

4ನೇ ಮಗುವಿನ ಜನನಕ್ಕೆ ಮಾತೃತ್ವ ರಜೆ ಪಡೆಯಲು ಹಕ್ಕಿಲ್ಲ- ಹೈಕೋರ್ಟ್

ಅಲಹಾಬಾದ್: ಎರಡು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ನಂತರದ ಮಗುವಿನ ಜನನಕ್ಕೆ ಮಾತೃತ್ವ ರಜೆಯನ್ನು ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅಲಹಾಬಾದ್ ಹೈಕೋರ್ಟ್, ನಾಲ್ಕನೇ ಮಗುವಿನ ಜನನಕ್ಕೆ ಆರು ತಿಂಗಳ ಮಾತೃತ್ವ ರಜೆ ಕೋರಿ ಸಲ್ಲಿಸಿದ್ದ ಶಶಿ ಕುಮಾರಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಮಂಜು ರಾಣಿ ಚೌಹಾಣ್ ಅವರ ಪೀಠವು ತಿರಸ್ಕರಿಸಿದ್ದು, ನಾಲ್ಕನೇ ಮಗುವಿಗೆ ಮಾತೃತ್ವ ರಜೆ ಇಲ್ಲ. ಹಿಂದಿನ ಮಕ್ಕಳ ಜನನದ ಸಂದರ್ಭದಲ್ಲಿ ಅವರು ಮಾತೃತ್ವ ರಜೆಯನ್ನು ಪಡೆದಿರದಿದ್ದರೂ ಇದೇ ನಿಯಮ ಅನ್ವಯಿಸುತ್ತದೆ ಎಂದು ತಿಳಿಸಿದೆ.

ನಾಲ್ಕನೇ ಮಗುವಿಗೆ ಮಾತೃತ್ವ ರಜೆ ಏಕೆ ನಿರಾಕರಣೆ ಏಕೆ..?
ಅರ್ಜಿದಾರೆ ಶಶಿ ಕುಮಾರಿ ಅವರು 2026ರ ಜೂನ್ 19ರಂದು ತಮ್ಮ ಮಾತೃತ್ವ ರಜೆಯ ಮನವಿಯನ್ನು ತಿರಸ್ಕರಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದದರು. ಅವರು ತಮ್ಮ ನಾಲ್ಕನೇ ಮಗುವಿನ ಜನನಕ್ಕಾಗಿ ಆರು ತಿಂಗಳ ಮಾತೃತ್ವ ರಜೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. ಈ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಮೊದಲ ಮೂರು ಮಕ್ಕಳ ಜನನದ ಸಂದರ್ಭದಲ್ಲಿ ಅವರು ಯಾವುದೇ ಮಾತೃತ್ವ ರಜೆಯನ್ನು ಪಡೆದಿರಲಿಲ್ಲ. ಆದ್ದರಿಂದ ನಾಲ್ಕನೇ ಮಗುವಿನ ಸಂದರ್ಭದಲ್ಲಿ ಮೊದಲ ಬಾರಿಗೆ ಮಾತೃತ್ವ ರಜೆಯ ಸೌಲಭ್ಯವನ್ನು ಪಡೆಯಲು ಮನವಿ ಮಾಡಲಾಗಿದ್ದು, ಅದನ್ನು ತಿರಸ್ಕರಿಸಿರುವುದು ಅನ್ಯಾಯ ಮತ್ತು ಅಸಮಂಜಸವಾಗಿದೆ ಎಂದು ವಾದಿಸಿದರು.

ಇತ್ತ ವಾದ ಮಂಡಿಸಿದ ರಾಜ್ಯ ಸರ್ಕಾರ, ಮತ್ತೊಂದು ಮಗುವಿನ ಜನನಕ್ಕಾಗಿ ಮಾತೃತ್ವ ರಜೆಯನ್ನು ಮಂಜೂರು ಮಾಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ, ನಾಲ್ಕನೇ ಮಗುವಿನ ಜನನಕ್ಕಾಗಿ ಅರ್ಜಿದಾರರಿಗೆ ಮಾತೃತ್ವ ರಜೆ ಪಡೆಯುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿತು.

ಹೈಕೋರ್ಟ್ ರಾಜ್ಯ ಸರ್ಕಾರದ ವಾದವನ್ನು ಅಂಗೀಕರಿಸಿದ ನ್ಯಾಯಪೀಠವು, ಮಾತೃತ್ವ ರಜೆ ನಿರಾಕರಿಸಿದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿತು. ಈ ನ್ಯಾಯಾಲಯದಿಂದ ಯಾವುದೇ ಮಧ್ಯಪ್ರವೇಶದ ಅಗತ್ಯವಿಲ್ಲ” ಎಂದು ನ್ಯಾಯಮೂರ್ತಿ ಮಂಜು ರಾಣಿ ಚೌಹಾಣ್ ಹೇಳಿ, ಅರ್ಜಿಯನ್ನು ವಜಾಗೊಳಿಸಿದರು.

ಎರಡು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಮಹಿಳಾ ಸರ್ಕಾರಿ ನೌಕರರಿಗೆ ಮಾತೃತ್ವ ರಜೆ ನೀಡಲಾಗುವುದಿಲ್ಲ ಎಂಬ ಆರ್ಥಿಕ ಕೈಪಿಡಿಯ ಸ್ಪಷ್ಟ ನಿಯಮವನ್ನು ಪರಿಗಣಿಸಿ ಅರ್ಜಿಯನ್ನು ವಜಾಗೊಳಿಸಲಾಯಿತು. ಅಂದರೆ, ಹಿಂದಿನ ಮಕ್ಕಳ ಜನನದ ಸಂದರ್ಭದಲ್ಲಿ ಮಾತೃತ್ವ ರಜೆಯನ್ನು ಪಡೆಯದೆ ಇದ್ದಿರುವುದು ನಂತರದ ಮಗುವಿನ ಜನನಕ್ಕೆ ಅನ್ವಯಿಸುವ ನಿಯಮವನ್ನು ಬದಲಿಸುವುದಿಲ್ಲ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.