4 ತಿಂಗಳು, 10 ಪ್ರಕರಣ, 22 ಮಂದಿಗೆ ಗಲ್ಲು ಶಿಕ್ಷೆ: ಮರಣಶಾಸನ ಬರೆದ ಜಡ್ಜ್: 100 ಕೊಲೆ ಕೇಸ್ ಬೇರೆ ಪೀಠಕ್ಕೆ ಶಿಫ್ಟ್!
ಮುಜಫ್ಫರ್ ನಗರ: ನ್ಯಾಯಾಲಯದ ಪ್ರಕರಣಗಳ ಇತ್ಯರ್ಥವಾಗಬೇಕಾದರೇ ವರ್ಷಾನುಗಟ್ಟಲೇ ಸಮಯ ಹಿಡಿಯುತ್ತವೆ, ವಿಚಾರಣೆ ನಡೆಸಿ ತೀರ್ಪು ಪ್ರಕಟವಾದರೂ ಕಠಿಣ ಶಿಕ್ಷೆಗಳನ್ನು ನೀಡುವುದಕ್ಕೆ ಭಾರೀ ಸಮಯವಾಗುತ್ತದೆ ಎಂಬ ಟೀಕೆಗಳು ಸಾಮಾನ್ಯವಾಗಿ ಜನರಲ್ಲಿದೆ. ಆದರೆ, ಇಲ್ಲೊಬ್ಬರು ಉತ್ತರ ಪ್ರದೇಶದ ನ್ಯಾಯಾಧೀಶರು ಕೇವಲ ನಾಲ್ಕು ತಿಂಗಳುಗಳಲ್ಲಿ ಹತ್ತು ಪ್ರಕರಣಗಳಲ್ಲಿ 22 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ದೇಶಾದ್ಯಂತ ವೈರಲ್ ಆಗಿದ್ದಾರೆ.
ಹೌದು, ಕಳೆದ ನಾಲ್ಕು ತಿಂಗಳಲ್ಲಿ 10 ಪ್ರಕರಣಗಳಲ್ಲಿ 22 ಅಪರಾಧಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಮರಣದಂಡನೆ ಶಿಕ್ಷೆ ವಿಧಿಸಿದ್ದು ಇದೀಗ ಇವರ ಮುಂದೆ ಬಾಕಿ ಇರುವ ಸುಮಾರು 100 ಕೊಲೆ ಪ್ರಕರಣಗಳನ್ನು ಆಡಳಿತಾತ್ಮಕ ಆದೇಶದ ಮೂಲಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧಿಗಳನ್ನು ಒಳಗೊಂಡ ಪ್ರಕರಣಗಳನ್ನು ದಿವಾಕರ್ ನೇತೃತ್ವದ ತ್ವರಿತ ನ್ಯಾಯಾಲಯದಿಂದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಸಿಂಗ್ ಅವರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಉತ್ತರ ಪ್ರದೇಶದ ಮುಜಫ್ಫರ್ನಗರದ ಫಾಸ್ಟ್ಟ್ರ್ಯಾಕ್ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿರುವ ರವಿ ಕುಮಾರ್ ದಿವಾಕರ್ ಅವರ ನ್ಯಾಯಾಲಯದಲ್ಲಿ ಬಾಕಿ ಇದ್ದ ಕೊಲೆ ಸೇರಿದಂತೆ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 100 ಪ್ರಕರಣಗಳನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಹಾಗೆಯೇ ನಿಖರವಾಗಿ 97 ಕ್ರಿಮಿನಲ್ ಪ್ರಕರಣಗಳ ಕಡತಗಳನ್ನು ಹಿಂಪಡೆಯಲಾಗಿದೆ. ಈ ಪ್ರಕರಣಗಳನ್ನು ಮುಜಫ್ಫರ್ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಸಿಂಗ್ ಅವರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿರುವ ಗಂಭೀರ ಪ್ರಕರಣಗಳೇ ಈ ವರ್ಗಾವಣೆಯ ವ್ಯಾಪ್ತಿಯಲ್ಲಿವೆ ಎಂದು ವರದಿಯಾಗಿದೆ.
ನ್ಯಾಯಾಧೀಶ ದಿವಾಕರ್ ಅವರ ನ್ಯಾಯಾಲಯವು ಏಪ್ರಿಲ್ನಿಂದ ಆಗಸ್ಟ್ 2026ರ ಅವಧಿಯಲ್ಲಿ 10 ಪ್ರಕರಣಗಳಲ್ಲಿ 22 ಮಂದಿಗೆ ಮರಣದಂಡನೆ ವಿಧಿಸಿದೆ. ಏಪ್ರಿಲ್ 6ರಿಂದ ಜುಲೈ 2ರವರೆಗೆ ನಡೆದ ಐದು ಪ್ರಕರಣಗಳಲ್ಲೇ 11 ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು ಎಂದು ಹಿಂದಿನ ವರದಿಗಳು ದಾಖಲಿಸಿವೆ.
ಈ ತೀರ್ಪುಗಳ ಪೈಕಿ ಹಲವು ಪ್ರಕರಣಗಳು ಹಲವು ವರ್ಷಗಳಿಂದ ಬಾಕಿ ಇದ್ದ ಕೊಲೆ ಪ್ರಕರಣಗಳಾಗಿವೆ. ಅಂದರೆ, 2026ರಲ್ಲಿ ಶಿಕ್ಷೆ ಪ್ರಕಟವಾದರೂ, ಸಂಬಂಧಿಸಿದ ಅಪರಾಧಗಳು 2010, 2011, 2014, 2019 ಮುಂತಾದ ಹಿಂದಿನ ವರ್ಷಗಳಲ್ಲಿ ನಡೆದಿದ್ದವು ಎನ್ನಲಾಗಿದೆ.
2010ರ ಮಾಜಿ ಗ್ರಾಮ ಮುಖ್ಯಸ್ಥನ ಪ್ರಕರಣದಲ್ಲಿ ಗಲ್ಲು
ಪಂಚಾಯತ್ ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ 2010ರಲ್ಲಿ ಜುಲೈ 6ರಂದು 60 ವರ್ಷದ ರಾಜ್ಬೀರ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಮಾಜಿ ಗ್ರಾಮ ಮುಖ್ಯಸ್ಥ ಪ್ರಮೋದ್ ಮತ್ತು ಆತನ ಸಹಚರ ಸಹದೇವ್ಗೆ ಮರಣದಂಡನೆ ವಿಧಿಸಲಾಯಿತು. ನ್ಯಾಯಾಲಯ ಪ್ರಕರಣವನ್ನು ‘ಅಪರೂಪದಲ್ಲೇ ಅಪರೂಪ’ದ ವರ್ಗಕ್ಕೆ ಸೇರಿಸಿದೆ ಎಂದು ವರದಿ ಮಾಡಿತ್ತು. ಈ ಶಿಕ್ಷೆ ಅಲಹಾಬಾದ್ ಹೈಕೋರ್ಟ್ನ ದೃಢೀಕರಣಕ್ಕೆ ಒಳಪಟ್ಟಿರುತ್ತದೆ.
ಕರ್ತವ್ಯದಲ್ಲಿದ್ದ ಹೋಮ್ಗಾರ್ಡ್ ಹತ್ಯೆ ಪ್ರಕರಣ
ಜುಲೈ 2ರಂದು ಕರ್ತವ್ಯದಲ್ಲಿದ್ದ ಹೋಮ್ಗಾರ್ಡ್ ಸಿಬ್ಬಂದಿ ರತಿರಾಮ್ ಅವರನ್ನು ಕೊಂದ ಪ್ರಕರಣದಲ್ಲಿ ದೀಪಕ್ ಗೆ ಮರಣದಂಡನೆ ವಿಧಿಸಲಾಯಿತು. ಗರಿಷ್ಠ ಶಿಕ್ಷೆ ವಿಧಿಸಬೇಕಾದ ‘ಅಪರೂಪದಲ್ಲೇ ಅಪರೂಪ’ದ ಪ್ರಕರಣವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
2011ರ ತಾಯಿ-ಮಗ ಕೊಲೆ ಪ್ರಕರಣ
ಮೇ 30ರಂದು ಸುಮಾರು 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ರಾಜೇಶ್ ದೇವಿ ಮತ್ತು ಅವರ ಆರು ವರ್ಷದ ಪುತ್ರ ಹಿಮಾಂಶು ಕೊಲೆ ಪ್ರಕರಣದ ಆರೋಪಿ ರಹೀಸ್ಗೆ ಮರಣದಂಡನೆ ವಿಧಿಸಲಾಯಿತು. ಪ್ರಕರಣದಲ್ಲಿ ಬಲಿಪಶುಗಳನ್ನು ಕಬ್ಬಿನ ಹೊಲಕ್ಕೆ ಕರೆದೊಯ್ದು ಹತ್ಯೆ ಮಾಡಲಾಗಿತ್ತು ಎಂಬುದು ಪ್ರಾಸಿಕ್ಯೂಷನ್ನ ವಾದವಾಗಿತ್ತು.
12 ವರ್ಷಗಳ ಹಿಂದಿನ ಪವನ್ ಕುಮಾರ್ ಕೊಲೆ
ಆಗಸ್ಟ್ 13ರಂದು 2014ರಲ್ಲಿ ನಡೆದ ಪವನ್ ಕುಮಾರ್ ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ಮರಣದಂಡನೆ ವಿಧಿಸಲಾಯಿತು. ಶಾಮ್ಲಿ ಜಿಲ್ಲೆಯ ಭಭೀಸಾ ಗ್ರಾಮದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ದಾಳಿಯಲ್ಲಿ ಪವನ್ ಕುಮಾರ್ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
2019ರ ವಕೀಲ ಸಮೀರ್ ಸೈಫಿ ಕೊಲೆ
ಏಪ್ರಿಲ್ 6ರಂದು 2019ರಲ್ಲಿ ಅಪಹರಿಸಿ ಕೊಲೆ ಮಾಡಲಾಗಿದ್ದ ವಕೀಲ ಸಮೀರ್ ಸೈಫಿ ಪ್ರಕರಣದಲ್ಲಿ ಮೂವರಿಗೆ ಮರಣದಂಡನೆ ವಿಧಿಸಲಾಯಿತು. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಅಪಹರಣ ಮತ್ತು ಕೊಲೆ ನಡೆದಿತ್ತು ಎಂದು ತನಿಖಾ ಸಂಸ್ಥೆಯ ಆರೋಪವಾಗಿತ್ತು. ಮತ್ತೊಬ್ಬ ಆರೋಪಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
2019ರ ಮತ್ತೊಂದು ಕೊಲೆ ಪ್ರಕರಣ: ಮಹಿಳೆ ಮತ್ತು ಮೂವರು ಪುತ್ರರಿಗೆ ಮರಣದಂಡನೆ ಏಪ್ರಿಲ್ 28ರಂದು 2019ರ ಕೊಲೆ ಪ್ರಕರಣದಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ ಮೂವರು ಪುತ್ರರಿಗೆ ಮರಣದಂಡನೆ ವಿಧಿಸಲಾಯಿತು. ಪ್ರಕರಣವನ್ನು ನ್ಯಾಯಾಲಯ ‘ಅಪರೂಪದಲ್ಲೇ ಅಪರೂಪ’ದ ಪ್ರಕರಣವೆಂದು ಪರಿಗಣಿಸಿತ್ತು ಎಂದು ವರದಿಯಾಗಿದೆ.
ಈ ರವಿ ಕುಮಾರ್ ದಿವಾಕರ್ ಯಾರು ಇವರ ಹಿನ್ನೆಲೆ ಏನು…?
ದೇಶಾದ್ಯಂತ ಬಾರಿ ಸುದ್ದಿಯಾಗುತ್ತಿರುವ 46 ವರ್ಷದ ರವಿ ಕುಮಾರ್ ದಿವಾಕರ್ ಅವರು 2009ರಲ್ಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಯಾಗಿ ಅಜಂಗಢ, ಸುಲ್ತಾನಪುರ, ಬದಾಯೂಂ, ವಾರಾಣಸಿ, ಬರೇಲಿ ಮತ್ತು ಚಿತ್ರಕೂಟ ಸೇರಿದಂತೆ ಹಲವು ಸ್ಥಳಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2023ರಲ್ಲಿ ಅವರು ಹೈಯರ್ ಜುಡಿಷಿಯಲ್ ಸರ್ವಿಸ್ಗೆ ಸೇರಿದರು. 2025ರ ನವೆಂಬರ್ನಿಂದ ಮುಜಫ್ಫರ್ನಗರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಿದ್ಯಾರ್ಹತೆಗಳಲ್ಲಿ B.Com, LL.B ಮತ್ತು LL.M ಸೇರಿವೆ. 2022ರಲ್ಲಿ ವಾರಾಣಸಿಯ ಜ್ಞಾನವಾಪಿ ಸಂಕೀರ್ಣದ ವೀಡಿಯೋಗ್ರಫಿ ಸಮೀಕ್ಷೆಗೆ ಆದೇಶ ನೀಡಿದ ನಂತರ ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು.
ಮರಣದಂಡನೆ ಇನ್ನೂ ಅಂತಿಮವಾಗಿಲ್ಲ
ಮುಜಫ್ಫರ್ನಗರದ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿದ ತಕ್ಷಣವೇ ಶಿಕ್ಷೆ ಜಾರಿಯಾಗುವುದಿಲ್ಲ. ಪ್ರಸ್ತುತ ಜಾರಿಯಲ್ಲಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 407ರ ಪ್ರಕಾರ, ಸೆಷನ್ಸ್ ನ್ಯಾಯಾಲಯ ವಿಧಿಸಿದ ಮರಣದಂಡನೆಯನ್ನು ಹೈಕೋರ್ಟ್ ದೃಢೀಕರಿಸಬೇಕು. ಹೈಕೋರ್ಟ್ ಶಿಕ್ಷೆಯನ್ನು ದೃಢೀಕರಿಸಬಹುದು, ರದ್ದುಗೊಳಿಸಬಹುದು ಅಥವಾ ಕಾನೂನಿನ ಪ್ರಕಾರ ಪರ್ಯಾಯ ಆದೇಶ ನೀಡಬಹುದಾಗಿದೆ.
ಅದರರ್ಥ, ದಿವಾಕರ್ ಅವರ ನ್ಯಾಯಾಲಯ ನೀಡಿರುವ 22 ಮರಣದಂಡನೆಗಳೂ ಪ್ರಸ್ತುತ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ಶಿಕ್ಷಾ ತೀರ್ಪುಗಳು; ಅವು ಅಂತಿಮವಾಗಿ ಜಾರಿಗೊಳ್ಳಬೇಕಾದರೆ ಮೇಲ್ಮನವಿ ಮತ್ತು ದೃಢೀಕರಣದ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಬೇಕು.
ಪ್ರಕರಣಗಳನ್ನು ವರ್ಗಾಯಿಸಿರುವುದು ಆಡಳಿತಾತ್ಮಕ ಆದೇಶದ ಮೂಲಕ ನಡೆದಿದೆ ಎಂದು ವರದಿಯಾಗಿದೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ತ್ಯಾಗಿ ಅವರು, ನ್ಯಾಯಾಲಯದಿಂದ ಮರಣದಂಡನೆ ವಿಧಿಸುವ ಸಾಧ್ಯತೆಯ ಬಗ್ಗೆ ಕೆಲವು ವಕೀಲರು ಮತ್ತು ಕಕ್ಷಿದಾರರಲ್ಲಿ ಆತಂಕವಿತ್ತು ಎಂದು ಹೇಳಿದ್ದಾರೆ.
ಆದರೆ ಪ್ರಕರಣಗಳ ವರ್ಗಾವಣೆಯನ್ನು ನ್ಯಾಯಾಧೀಶರ ತೀರ್ಪುಗಳು ತಪ್ಪಾಗಿವೆ ಎಂಬ ನ್ಯಾಯಾಂಗ ನಿರ್ಣಯವೆಂದು ಪರಿಗಣಿಸಲು ಯಾವುದೇ ಆಧಾರವಿಲ್ಲ. ಲಭ್ಯವಿರುವ ವರದಿಗಳ ಪ್ರಕಾರ ಇದು ಆಡಳಿತಾತ್ಮಕ ಮರುಹಂಚಿಕೆ. ಈ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡೇ ಬೆಳವಣಿಗೆಯನ್ನು ವರದಿ ಮಾಡುವುದು ಅಗತ್ಯ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
