ಅಂತರ್ಜಾತಿ ವಿವಾಹ: ಮಗಳನ್ನೇ ಕೊಂದಿದ್ದ ದಂಪತಿಗೆ ಜೀವಾವಧಿ ಶಿಕ್ಷೆ ಪ್ರಕಟ
ಮಥುರಾ: ದೇಶದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚುತ್ತಲೇ ಇದ್ದು, ಈ ನಡುವೆ ಅಂತರ್ಜಾತಿ ವಿವಾಹವಾಗಿದ್ದಕ್ಕೆ ತನ್ನ 21 ವರ್ಷದ ಸ್ವಂತ ಮಗಳನ್ನೇ ಗುಂಡಿಕ್ಕಿ ಕೊಂದಿದ್ದ ದೆಹಲಿ ಮೂಲದ ದಂಪತಿಗೆ ಮಥುರಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸುಮಾರು ನಾಲ್ಕು ವರ್ಷಗಳ ಹಿಂದೆ (2022ರ ನವೆಂಬರ್) ನಡೆದಿದ್ದ ದೆಹಲಿಯ ‘ಆಯುಷಿ ಹತ್ಯೆ’ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳಾದ ಆಕೆಯ ತಂದೆ ನಿತೇಶ್ ಯಾದವ್ ಹಾಗೂ ತಾಯಿ ಬ್ರಜಬಾಲಾ ಅವರನ್ನು ದೋಷಿಗಳು ಎಂದು ಘೋಷಿಸಿದೆ. ಸ್ವಂತ ಮಗಳನ್ನೇ ಬರ್ಬರವಾಗಿ ಕೊಂದಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
21 ವರ್ಷದ ಆಯುಷಿ ದೆಹಲಿಯ ಕಾಲೇಜೊಂದರಲ್ಲಿ ಬಿ.ಸಿ.ಎ. (BCA) ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು ಈ ನಡುವೆ ಭರತ್ಪುರ ಮೂಲದ ತನ್ನ ಸಹಪಾಠಿ ಛತ್ರಪಾಲ್ ಗುರ್ಜರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪೋಷಕರ ವಿರೋಧದ ನಡುವೆಯೂ ಆರ್ಯ ಸಮಾಜ ಮಂದಿರದಲ್ಲಿ ಆತನನ್ನು ವಿವಾಹವಾಗಿದ್ದಳು. ಮಗಳ ಈ ಅಂತರ್ಜಾತಿ ಪ್ರೇಮ ವಿವಾಹದಿಂದ ಪೋಷಕರು ತೀವ್ರ ಆಕ್ರೋಶಗೊಂಡಿದ್ದು, ಸಮಾಜದಲ್ಲಿ ತಮ್ಮ ಮರ್ಯಾದೆ ಹಾಳಾಯಿತು ಎಂದು ತೀವ್ರ ನೊಂದಿದ್ದರು.
ಆಯುಷಿ 2022ರ ನವೆಂಬರ್ 17ರಂದು ಪತಿಯ ಮನೆಯಿಂದ ಹಿಂದಿರುಗಿದ್ದಳು. ಈ ವೇಳೆ ಪೋಷಕರ ನಡುವೆ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆಸಿದ್ದ ಆಯಿಷಿ “ನಾನು ಪ್ರಾಪ್ತ ವಯಸ್ಕಳು, ನನ್ನ ನಿರ್ಧಾರ ತೆಗೆದುಕೊಳ್ಳಲು ನನಗೆ ಹಕ್ಕಿದೆ” ಎಂದು ಆಯುಷಿ ವಾದಿಸಿದ್ದಳು. ಇದರಿಂದ ಕೋಪಗೊಂಡ ತಂದೆ ನಿತೇಶ್ ಯಾದವ್, ತನ್ನ ಬಳಿಯಿದ್ದ ಪರವಾನಗಿ ಹೊಂದಿದ್ದ ರಿವಾಲ್ವರ್ನಿಂದ ಮಗಳ ಎದೆ ಮತ್ತು ತಲೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಭೀಕರ ಕೃತ್ಯಕ್ಕೆ ತಾಯಿ ಬ್ರಜಬಾಲಾ ಕೂಡ ಮೂಕಸಾಕ್ಷಿಯಾಗಿ, ಬಳಿಕ ಸಾಕ್ಷ್ಯ ನಾಶಕ್ಕೆ ಪತಿಗೆ ಸಾಥ್ ನೀಡಿದ್ದಳು.
ಸೂಟ್ಕೇಸ್ ನಲ್ಲಿ ಶವ ಸಾಗಿಸಿದ್ದರು…
ಆಯುಷಿಯ ಹತ್ಯೆಯ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ, ಕೆಂಪು ಬಣ್ಣದ ದೊಡ್ಡ ಟ್ರಾಲಿ ಬ್ಯಾಗ್ನಲ್ಲಿ (ಸೂಟ್ ಕೇಸ್) ತುಂಬಲಾಗಿತ್ತು. ಬಳಿಕ ದೆಹಲಿಯಿಂದ ಕಾರಿನಲ್ಲಿ ಶವವನ್ನು ತಂದು ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇ ಸರ್ವಿಸ್ ರಸ್ತೆಯ ಪೊದೆಯಲ್ಲಿ ಎಸೆದು ದಂಪತಿ ಪರಾರಿಯಾಗಿದ್ದರು.ನವೆಂಬರ್ 18ರಂದು ರಕ್ತಸಿಕ್ತವಾಗಿದ್ದ ಟ್ರಾಲಿ ಬ್ಯಾಗ್ ಅನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಪರಿಚಿತ ಶವವಾಗಿ ಪತ್ತೆಯಾಗಿದ್ದ ಆಯುಷಿಯ ಗುರುತನ್ನು ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಕರೆಗಳ ಮಾಹಿತಿ ಹಾಗೂ ವಿವಾಹ ನೋಂದಣಿ ಪ್ರಮಾಣಪತ್ರದಂತಹ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಮಥುರಾ ಪೊಲೀಸರು ಭೇದಿಸಿದ್ದರು.
ಬಳಿಕ ಪೋಷಕರನ್ನೇ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಹತ್ಯೆಯ ಕರಾಳ ಸತ್ಯ ಬಟಾಬಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡು, ಹತ್ಯೆಗೆ ಬಳಸಿದ್ದ ರಿವಾಲ್ವರ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ಬಲವಾದ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದರು. ಇದೀಗ ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ, ಹೆತ್ತ ಮಗಳನ್ನೇ ಕೊಂದ ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
