ಅನಗತ್ಯ ಸಾವಿರಾರು ಅರ್ಜಿ ವ್ಯವಸ್ಥೆ ಮೇಲೆ ಹೊರೆ: RTI ದುರ್ಬಳಕೆಗೆ ಹೈಕೋರ್ಟ್ ತೀವ್ರ ಅಸಮಾಧಾನ
ಬೆಂಗಳೂರು: ಅನಗತ್ಯವಾಗಿ ಸಾವಿರಾರು ಅರ್ಜಿಗಳನ್ನು ಸಲ್ಲಿಸುವ ಮೂಲಕ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್ಟಿಐ) ದುರ್ಬಳಕೆ ಮಾಡಿಕೊಂಡು ಆಡಳಿತ ವ್ಯವಸ್ಥೆಗೆ ತೊಡಕುಂಟುಮಾಡುವ ಪ್ರಕ್ರಿಯೆಯನ್ನು ಸಹಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸಿರುವ ರಾಜ್ಯ ಮಾಹಿತಿ ಆಯೋಗದ ಕ್ರಮ ಪ್ರಶ್ನಿಸಿ ಜಿ.ಆರ್. ಸುಧೀಂದ್ರ ಸೇರಿ 9 ಮಂದಿ ಆರ್ ಟಿಐ ಕಾರ್ಯಕರ್ತರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಸಾವಿರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಮಸ್ಯೆ ಉಂಟು ಮಾಡುವುದು ಮೇಲ್ನೋಟಕ್ಕೆ ಆರ್ ಟಿಐ ಕಾಯ್ದೆಯ ದುರ್ಬಳಕೆಯಂತೆ ಕಾಣುತ್ತಿದೆ. ಅನಗತ್ಯವಾಗಿ ಸಾವಿರಾರು ಅರ್ಜಿ ಸಲ್ಲಿಸುವುದರಿಂದ ವ್ಯವಸ್ಥೆಯ ಮೇಲೆ ಹೊರೆ ಬೀಳುತ್ತದೆ. ನಿಜವಾದ ಸಮಸ್ಯೆಗಳ ಕುರಿತಾಗಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮೇಲೆ ಪರಿಣಾಮಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.
ಒಬ್ಬೊಬ್ಬರೇ ಹತ್ತು ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಸಮಸ್ಯೆಗಳು ಯಾವುದೇ ವ್ಯಕ್ತಿಗೆ ಇರಲು ಸಾಧ್ಯವಿಲ್ಲ. ಆಡಳಿತ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆ ಮತ್ತು ನೈಜ ಅರ್ಜಿದಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಅಗತ್ಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಅನಗತ್ಯವಾಗಿ ಸಾವಿರಾರು ಅರ್ಜಿ: ಕಪ್ಪುಪಟ್ಟಿಗೆ ಸೇರಿಸಿದ್ದ ಸತ್ಯನ್
ಅನಗತ್ಯವಾಗಿ ಸಾವಿರಾರು ಆರ್ಟಿಐ ಅರ್ಜಿಗಳನ್ನು ಸಲ್ಲಿಸಿ ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿರುವ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ 26 ಆರ್ಟಿಐ ಕಾರ್ಯಕರ್ತರನ್ನು ರಾಜ್ಯ ಮಾಹಿತಿ ಆಯೋಗದ ಮಾಜಿ ಮುಖ್ಯ ಆಯುಕ್ತ ಡಾ.ಎಚ್ ಸಿ.ಸತ್ಯನ್ ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಿ 2025ರಲ್ಲಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ನಲ್ಲಿ ಮೆಟ್ಟಿಲೇರಿದ್ದರು.
ಅಫಿಡವಿಟ್ ಸಲ್ಲಿಸಿ: ಅರ್ಜಿದಾರರಿಗೆ ಸೂಚನೆ..
ಹಾಗೆಯೇ ವಿಚಾರಣೆ ವೇಳೆ ನ್ಯಾಯಪೀಠವು, ಸೆಪ್ಟಂಬರ್ 21ರೊಳಗೆ ಅರ್ಜಿದಾರರು ನ್ಯಾಯಾಲಯಕ್ಕೆ ವಿವರವಾದ ಅಫಿಡವಿಟ್ ಸಲ್ಲಿಸಬೇಕು. ಅದರಲ್ಲಿ ದಾಖಲಿಸಿದ ಒಟ್ಟು ಅರ್ಜಿಗಳ ಸಂಖ್ಯೆ, ದಿನಾಂಕ, ಮಾಹಿತಿ ಕೋರಿದ ಪ್ರಾಧಿಕಾರ, ಅರ್ಜಿಯಲ್ಲಿ ಕೇಳಲಾದ ನಿರ್ದಿಷ್ಟ ಮಾಹಿತಿ, ಮಾಹಿತಿ ಕೋರಲು ಕಾರಣ ಮತ್ತು ಆ ಮಾಹಿತಿಯನ್ನು ಯಾವ ಉದ್ದೇಶಕ್ಕೆ ಬಳಸಲು ಯೋಜಿಸಲಾಗಿತ್ತು ಎಂಬ ಬಗ್ಗೆ ಸ್ಪಷ್ಟ ವಿವರಣೆ ನೀಡುವಂತೆ ಸೂಚನೆ ನೀಡಿದೆ.
ಅರ್ಜಿಗಳ ಸಂಖ್ಯೆಗೆ ಆಶ್ಚರ್ಯ ಪಟ್ಟ ನ್ಯಾಯಪೀಠ
ಅರ್ಜಿದಾರ ಎಂ.ಜಗದೀಶ್ ಎಂಬುವವರು 1,294 ಅರ್ಜಿಗಳು, ಎಂ, ದವಾಲ್ವಾಬ್ ಎಂಬುವವರು 14,774 ಅರ್ಜಿಗಳು, ಹಾಗೂ ಜಿ.ಆರ್. ಸುಧೀಂದ್ರ ಎಂಬುವವರು 6,482 ಮೇಲ್ಮನವಿಗಳನ್ನು ದಾಖಲಿಸಿರುವುದು ತಿಳಿದುಬಂದಿದೆ. ತನಿಖಾ ವರದಿಗಾಗಿ ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ಪೀಠ, ಇಷ್ಟು ಬೃಹತ್ ಸಂಖ್ಯೆಯಲ್ಲಿ ಮಾಹಿತಿ ಕೋರಿ ಲೇಖನಗಳನ್ನು ಪ್ರಕಟಿಸಲು ಸಾಧ್ಯವೇ ಎಂದು ತರಾಟೆಗೆ ತೆಗೆದುಕೊಂಡು ವಿಚಾರಣೆಯನ್ನು ಸೆಪ್ಟಂಬರ್ 28 ಮುಂದೂಡಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
