ವಿ.ಡಿ ಸಾವರ್ಕರ್ ಕುರಿತ ಪ್ರಶ್ನೆ: ಶಾಲಾ ಶಿಕ್ಷಕರ ಸಸ್ಪೆಂಡ್ ಆದೇಶಕ್ಕೆ ಹೈಕೋರ್ಟ್ ತಡೆ
ತಿರುವನಂತಪುರಂ: ಸ್ವಾತಂತ್ರ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಕುರಿತು ಪ್ರಶ್ನೆ ರೂಪಿಸಿ ವಿವಾದಕ್ಕೆ ಕಾರಣವಾಗಿದ್ದ ಸರ್ಕಾರಿ ಶಾಲಾ ಶಿಕ್ಷಕರನ್ನು ಅಮಾನತು ಮಾಡಿದ್ದ ಆದೇಶಕ್ಕೆ ಒಂದು ತಿಂಗಳ ಅವಧಿಗೆ ಕೇರಳ ಹೈಕೋರ್ಟ್ ತಡೆ ನೀಡಿದೆ.
ಈ ಕುರಿತು ನ್ಯಾಯಮೂರ್ತಿ ವಿಜು ಅಬ್ರಹಾಂ ಅವರ ಪೀಠವು ಮಧ್ಯಂತರ ಆದೇಶ ನೀಡಿದ್ದು ಶಿಕ್ಷಕರ ವಿರುದ್ಧದ ಶಿಸ್ತುಕ್ರಮದ ವಿಚಾರಣೆಯನ್ನು ಮುಂದುವರಿಸಲು ಅನುಮತಿ ನೀಡಿದೆ.
ಏನಿದು ವಿವಾದ
2026ರಲ್ಲಿ ನಡೆದ “ಸೋಶಿಯಲ್ ಸೈನ್ಸ್ ಕ್ಲಬ್ ಫ್ರೀಡಂ ಕ್ವಿಜ್” ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಯೊಂದರಿಂದ ಉಂಟಾದ ವಿವಾದ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಬ್ರಿಟಿಷರಿಂದ ಅತಿ ಹೆಚ್ಚು ಶಿಕ್ಷೆ ಅನುಭವಿಸಿದ ಸ್ವಾತಂತ್ರ ಹೋರಾಟಗಾರ ಯಾರು ಎಂಬ ಪ್ರಶ್ನೆಯನ್ನು ಟೈ-ಬ್ರೇಕರ್ ಆಗಿ ಕೇಳಲಾಗಿತ್ತು. ಅದರ ಅಧಿಕೃತ ಉತ್ತರದ ಕೀಲಿಯಲ್ಲಿ ವಿ.ಡಿ. ಸಾವರ್ಕರ್ ಅವರ ಹೆಸರನ್ನು ನಮೂದಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಕೇರಳ ಶಿಕ್ಷಣ ಕಾಯ್ದೆ, 1958ರ ಸೆಕ್ಷನ್ 12A ಅಡಿಯಲ್ಲಿ ಶಿಕ್ಷಕ ಗುರುಪ್ರಸಾದ್ ರೈ ಕೆ. ಅವರನ್ನು ಅಮಾನತುಗೊಳಿಸಿ ಕಾಸರಗೋಡಿನ ಶಿಕ್ಷಣ ಉಪನಿರ್ದೇಶಕರು ಆದೇಶ ಹೊರಡಿಸಿದ್ದರು.
ಈ ಆದೇಶ ಪ್ರಶ್ನಿಸಿ ಶಿಕ್ಷಕ ಗುರುಪ್ರಸಾದ್ ರೈ ಕೆ. ಅವರು ಕೇರಳ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 13ರಂದು ಕೇರಳ ಹೈಕೋರ್ಟ್, ಅಮಾನತುಗೊಂಡಿದ್ದ ಮೇಲ್ದರ್ಜೆ ಪ್ರಾಥಮಿಕ ಶಾಲಾ ಶಿಕ್ಷಕರು ಸಲ್ಲಿಸಿದ್ದ ರಿಟ್ ಅರ್ಜಿಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿತ್ತು.
ನ್ಯಾಯಮೂರ್ತಿ ವಿಜು ಅಬ್ರಹಾಂ ಅವರ ಪೀಠವು ಮಧ್ಯಂತರ ಆದೇಶ ನೀಡುತ್ತಾ, “ಅಮಾನತು ಆದೇಶಕ್ಕೆ ಒಂದು ತಿಂಗಳ ಅವಧಿಗೆ ತಡೆ ನೀಡಲು ನಾನು ಬಯಸುತ್ತೇನೆ. ಆದರೆ ಶಿಸ್ತುಕ್ರಮದ ವಿಚಾರಣೆಯನ್ನು ಮುಂದುವರಿಸಲು ಅನುಮತಿಸುತ್ತೇನೆ” ಎಂದು ಆದೇಶ ನೀಡಿತು.
ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರು, ತಮ್ಮ ವಿರುದ್ಧ ಹೊರಡಿಸಲಾದ ಅಮಾನತು ಆದೇಶವು ಕೇರಳ ಶಿಕ್ಷಣ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ. ವಿಶೇಷವಾಗಿ, ಕಾಯ್ದೆಯ ಸೆಕ್ಷನ್ 12A(2)(a)ರ proviso ಅನ್ನು ಏಕೆ ಅನ್ವಯಿಸಲಾಗಿಲ್ಲ ಎಂಬುದನ್ನು ಅಮಾನತು ಆದೇಶದಲ್ಲಿ ವಿವರಿಸಲಾಗಿಲ್ಲ ಎಂದು ಅವರು ಆಕ್ಷೇಪಿಸಿದರು.
ಸಂಬಂಧಿತ ಪ್ರಶ್ನೆಯಿಂದ ಉಂಟಾದ ಅನಗತ್ಯ ವಿವಾದದ ಪರಿಣಾಮವಾಗಿ ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಕರು ವಾದಿಸಿದರು. ಪ್ರಶ್ನೆ ಪತ್ರಿಕೆಯಲ್ಲಿನ ಒಂದು ಪ್ರಶ್ನೆಗೆ ನೀಡಲಾದ ಉತ್ತರವು ಸಮಾಜದ ಒಂದು ವರ್ಗಕ್ಕೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಮುಂದುವರಿದು ವಾದ ಮಂಡಿಸಿದ ಅರ್ಜಿದಾರರು, ತಮ್ಮ ನೇಮಕಾತಿ ಪ್ರಾಧಿಕಾರವಾಗಿದ್ದ AUPS, ಪಲ್ಲತ್ತಡ್ಕದ ಮ್ಯಾನೇಜರ್ ಅವರೇ ತಮ್ಮ ಶಿಸ್ತು ಪ್ರಾಧಿಕಾರವೂ ಆಗಿರುವುದರಿಂದ, ಸಂಬಂಧಿತ ಅಧಿಕಾರಿಯು ಸೆಕ್ಷನ್ 12A(2)ರ proviso ಅನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದರು.
ಇದಕ್ಕೆ ವಿರುದ್ದವಾಗಿ ವಾದ ಮಂಡಿಸಿದ ರಾಜ್ಯ ಸರ್ಕಾರ, ಸಾವರ್ಕರ್ ಗಿಂತಲೂ ಹೆಚ್ಚಿನ ಅವಧಿ ಜೈಲು ಶಿಕ್ಷೆ ಅನುಭವಿಸಿದ ಇತರ ಸ್ವಾತಂತ್ರ ಹೋರಾಟಗಾರರು ಇದ್ದಾರೆ ಎಂದು ರಾಜ್ಯ ಸರ್ಕಾರ ವಾದಿಸಿತು. ಈ ಸಂಬಂಧ ಉದಂತ ಸಾಯಿ ಮತ್ತು ತ್ರೈಲೋಕ್ಯನಾಥ್ ಚಕ್ರವರ್ತಿ ಅವರ ಹೆಸರುಗಳನ್ನು ರಾಜ್ಯವು ಉಲ್ಲೇಖಿಸಿತು.ಆದಾಗ್ಯೂ, ಶಿಕ್ಷಕರ ಅಮಾನತು ಆದೇಶಕ್ಕೆ ಒಂದು ತಿಂಗಳ ಕಾಲ ತಡೆ ನೀಡಿದ ಹೈಕೋರ್ಟ್, ಇದೇ ವೇಳೆ ಶಿಸ್ತುಕ್ರಮದ ಪ್ರಕ್ರಿಯೆ ಮುಂದುವರಿಯಬಹುದು ಎಂದು ತಿಳಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
