SC, ST ಕಾಯ್ದೆ ನಾಲ್ಕು ಗೋಡೆಗಳ ಮಧ್ಯೆ ನಡೆದ ಘಟನೆಗಳಿಗೆ ಅನ್ವಯಿಸಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ನಾಲ್ಕು ಗೋಡೆಗಳ ಮಧ್ಯೆ ನಡೆಯುವ, ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಿಲ್ಲದ ಮುಚ್ಚಿದ ಸ್ಥಳಗಳಲ್ಲಿ ನಡೆದ ಘಟನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಶಾಲೆಯೊಂದರ ಮ್ಯಾನೇಜರ್ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(r) ಹಾಗೂ 3(1)(s) ಅಡಿಯಲ್ಲಿ ದಾಖಲಾಗಿದ್ದ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್, ಸಾಕ್ಷ್ಯಾಧಾರಗಳಿಲ್ಲದೆ ಅಥವಾ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಘಟನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಅನ್ವಯಿಸಲು ಸಾಧ್ಯವಿಲ್ಲ. ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಿಲ್ಲದ ಮುಚ್ಚಿದ ಸ್ಥಳಗಳಲ್ಲಿ ನಡೆದ ಘಟನೆಗಳನ್ನು ಈ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಾಯ್ದೆಯ ಪ್ರಕಾರ, ಘಟನೆಯು ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಾಗುವಂತಹ ತೆರೆದ ಸ್ಥಳದಲ್ಲಿ ನಡೆದಿರಬೇಕು. ನಾಲ್ಕು ಗೋಡೆಗಳ ಮಧ್ಯೆ, ಸಾರ್ವಜನಿಕ ವೀಕ್ಷಣೆ ಇಲ್ಲದ ಸ್ಥಳದಲ್ಲಿ ನಡೆದ ಘಟನೆಯನ್ನು ಈ ಕಾಯ್ದೆಯ ವ್ಯಾಪ್ತಿಗೆ ತರಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಎಫ್ಐಆರ್ನಲ್ಲಿ ನಿರ್ದಿಷ್ಟ ಜಾತಿ ನಿಂದನೆ ಮಾತುಗಳ ಉಲ್ಲೇಖವಿಲ್ಲದಿರುವುದು ಮತ್ತು ದಾಖಲೆಗಳು ಕೇವಲ ಗಲಾಟೆಯನ್ನು ಮಾತ್ರ ತೋರಿಸುತ್ತಿರುವುದನ್ನು ಗಮನಿಸಿದ ನ್ಯಾಯಪೀಠವು, ಎಫ್ ಐಆರ್ ನಲ್ಲಿ ಶಾಲಾ ಮ್ಯಾನೇಜರ್ ಯಾವುದೇ ನಿರ್ದಿಷ್ಟ ಜಾತಿ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎಂಬ ಉಲ್ಲೇಖವಿರಲಿಲ್ಲ. ಪ್ರಾಸಿಕ್ಯೂಷನ್ ಒದಗಿಸಿದ ದಾಖಲೆಗಳು ಕೇವಲ ಉಭಯ ಬಣಗಳ ನಡುವಿನ ಜಗಳವನ್ನು ತೋರ್ಪಡಿಸುತ್ತವೆಯೇ ಹೊರತು, ಜಾತಿ ನಿಂದನೆ ನಡೆದಿರುವುದನ್ನು ದೃಢಪಡಿಸುವುದಿಲ್ಲ ಎಂದು ತಿಳಿಸಿದೆ. ಆದ್ದರಿಂದ ಮ್ಯಾನೇಜರ್ ವಿರುದ್ಧದ ಎಸ್ಸಿ/ಎಸ್ಟಿ ಕಾಯ್ದೆಯ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗಿದ್ದು, ಇತರ ಸಾಮಾನ್ಯ ಆರೋಪಗಳ ಕಾನೂನು ವಿಚಾರಣೆ ಮುಂದುವರಿಯಲಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
