ರಸ್ತೆ ರಂಪಾಟ ಪ್ರಕರಣ : ನ್ಯಾಯಾಧೀಶೆ ಬೇರೆಡೆಗೆ ವರ್ಗಾವಣೆ
ಬೆಂಗಳೂರು: ‘ರಸ್ತೆ ರಂಪಾಟಕ್ಕೆ ಸಂಬಂಧ ಯುವಕನೊಬ್ಬನ ಮೇಲೆ ದರ್ಪದಿಂದ ವರ್ತಿಸಿ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪ ಹೊತ್ತಿರುವ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಅವರನ್ನು ಹುಮನಾಬಾದ್ ಪ್ರಧಾನ ಸಿವಿಲ್ ಜಡ್ಜ್ ಆಗಿ ವರ್ಗಾವಣೆ ಮಾಡಲಾಗಿದೆ.
ಈ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ‘ಗಾಯತ್ರಿ ಅವರನ್ನು ತಕ್ಷಣದಿಂದಲೇ ಬೀದರ್ ಜಿಲ್ಲೆಯ ಹುಮನಾಬಾದ್ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ಗೆ ವರ್ಗಾವಣೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ
ನ್ಯಾಯಾಧೀಶೆ ‘ಗಾಯತ್ರಿ ಅವರು ಮಾಲೂರಿನಲ್ಲಿ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ರಸ್ತೆಯಲ್ಲಿ ಬಂದ ಕೆ.ಎಂ.ವಿನಯ್ ಎಂಬ ಯುವಕನ ಜೊತೆ ದರ್ಪದಿಂದ ವರ್ತಿಸಿ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪ ಕೇಳಿ ಬಂದಿದ್ದು ಈ ಆರೋಪದಡಿ ವಿಚಾರಣೆ ನಡೆಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ ಕೋಲಾರ ಜಿಲ್ಲೆಯ ಉಸ್ತುವಾರಿ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿಗೆ ಮನವಿ ಸಲ್ಲಿಸಿತ್ತು.
ಈ ಮಧ್ಯೆ ಇದೇ ವೇಳೆ ನ್ಯಾಯಾಧೀಶೆ ಗಾಯತ್ರಿ ಅವರು ಕೆ.ಎಂ.ವಿನಯ್ ಅವರ ತಾಯಿ ವಿ.ಕವಿತಾ ಮತ್ತು ವಿನಯ್ ಅವರ ಅಜ್ಜ ಪಿ.ವೆಂಕಟೇಶ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಈ ಎಫ್ ಐಆರ್ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗಾಯತ್ರಿ ಅವರಿಗೆ ಛೀಮಾರಿ ಹಾಕಿತ್ತು. ಅಂತೆಯೇ, ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಅವರ ಅವಗಾಹನೆಗೆ ತರುವಂತೆ ಆದೇಶಿಸಿತ್ತು.
ಇದೀಗ ನ್ಯಾಯಾಧೀಶೆ ಗಾಯಿತ್ರಿ ಅವರು ನಡೆದುಕೊಂಡ ವರ್ತನೆಯ ವಿರುದ್ಧ ಕೇಳಿಬಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅವರನ್ನು ಹುಮನಾಬಾದ್ಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ವರ್ಗಾವಣೆ ಆದೇಶಕ್ಕೆ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ‘ಈ ಕ್ರಮ ಏನೇನೂ ಸಾಲದು. ಗಾಯತ್ರಿ ಅವರನ್ನು ವರ್ಗಾವಣೆ ಮಾಡುವ ಬದಲಿಗೆ ಅಮಾನತುಗೊಳಿಸಿ ನ್ಯಾಯಾಂಗದ ಘನತೆ ಕಾಪಾಡಬೇಕಿತ್ತು’ ಎಂದು ತಿಳಿಸಿದ್ದಾರೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
