23/04/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್ ನಲ್ಲಿ ಸೀಲು, ಸಹಿ ಕಡ್ಡಾಯವಲ್ಲ: ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಸೀಲು ಮತ್ತು ಸಹಿ ಕಡ್ಡಾಯವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.

ಆರೋಪಿ ಬೆಂಗಳೂರಿನ ಆರ್. ಜಗದೀಶ್ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಏಕಸದಸ್ಯ ಪೀಠವು, ಸೀಲು ಅಥವಾ ಸಹಿಗಳಿಲ್ಲದ ಕಂಪ್ಯೂಟರ್ ಆಧಾರಿತ ಬ್ಯಾಂಕ್ ರಿಟರ್ನ್ ಮೆಮೊಗಳು ಮಾನ್ಯ ಪುರಾವೆಗಳಾಗಿವೆ. ಎಲೆಕ್ಟ್ರಾನಿಕ್ ವಿಧಾನದಲ್ಲಿ ಚೆಕ್ ಕ್ಲಿಯರ್ ಆಗಿರುವುದರಿಂದ ಸೀಲು ಮತ್ತು ಸಹಿ ಕಡ್ಡಾಯವಲ್ಲ. ಸಹಿ ಮತ್ತು ಸೀಲ್, ಅಧಿಕೃತ ಮುದ್ರೆ ಇತ್ಯಾದಿ ದೂರನ್ನು ತಿರಸ್ಕರಿಸಲು ಅಧಿಕೃತ ಆಧಾರವಲ್ಲ ಎಂದು ಸ್ಪಷ್ಟಪಡಿಸಿದೆ.

ಚೆಕ್ ಅನ್ನು ಹಸ್ತಚಾಲಿತ ಸಂಗ್ರಹಣೆಗೆ ಕಳುಹಿಸುವಾಗ ಬ್ಯಾಂಕಿನ ಸೀಲು ಮತ್ತು ಸಹಿ ಕಡ್ಡಾಯ ಅವಶ್ಯಕತೆ ಎಂಬುದನ್ನು ಸಹ ಒಪ್ಪಲು ಸಾಧ್ಯವಿಲ್ಲ. ದೂರುದಾರ ಮತ್ತು ಆರೋಪಿ ನಡುವೆ ಕೊಡುಕೊಳ್ಳುವಿಕೆ ನಡೆದಿದೆ ಎಂಬುದು ದೃಢಪಟ್ಟಿದೆ. ವರ್ಗಾವಣಿಯ ಲಿಖಿತಗಳ ಅಧಿನಿಯಮದ ಸೆಕ್ಷನ್ 139ರ ಅಡಿ ತನಗೆ ಲಭ್ಯವಿರುವ ಅವಕಾಶವನ್ನು ದೂರುದಾರ ಬಳಕೆ ಮಾಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ದೂರುದಾರರ ಸೊಸೈಟಿಗೆ ಖಾತರಿಯಾಗಿ ಎರಡು ಚೆಕ್ ನೀಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದು ಇದರಲ್ಲಿ ಒಂದನ್ನು ದೂರುದಾರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಖಾಲಿ ಚೆಕ್ ಅನ್ನು ಸೊಸೈಟಿಯು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ದಾಖಲೆ ಇಟ್ಟಿಲ್ಲ ಎಂದು ಆರೋಪಿ ಹೇಳಿದ್ದಾರೆ.

03.11.2015 ರಂದು ಚೆಕ್ ನೀಡಲಾಗಿದ್ದು, ಈ ವೇಳೆಗೆ ಆದಿತ್ಯ ಸೊಸೈಟಿಯಿಂದ ಪಡೆದಿದ್ದ ಸಾಲವನ್ನು ತೀರಿಸಲಾಗಿದೆ. ಆದರೆ, ತಾನು ನೀಡಿದ್ದ ಎರಡು ಖಾಲಿ ಚೆಕ್ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿರಲಿಲ್ಲ. ಅಲ್ಲದೇ, ಚೆಕ್ ದುರ್ಬಳಕೆ ಮಾಡಿಕೊಂಡಿರುವುದಕ್ಕೂ ಆರೋಪಿಯು ದೂರುದಾರನ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ನ್ಯಾಯಪೀಠವು ತೀರ್ಪಿನಲ್ಲಿ ಉಲ್ಲೇಖಿಸಿದೆ.

ಆರೋಪಿಯು 3 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಮುಂದಿನ ದಿನಾಂಕ ಹಾಕಿ ಚೆಕ್ ಅನ್ನು ಖಾತರಿಯಾಗಿ ನೀಡಿದ್ದರು. ನಿಗದಿತ ದಿನಾಂಕದು ಚೆಕ್ ಅನ್ನು ನಗದು ಮಾಡಿಕೊಳ್ಳಲು ಬ್ಯಾಂಕ್ ಗೆ ಸಲ್ಲಿಸಿದಾಗ ಖಾತೆಯಲ್ಲಿ ಹಣವಿಲ್ಲ ಎಂದು ಚೆಕ್ ಬೌನ್ಸ್ ಆಗಿತ್ತು. ಅದಾದ ನಂತರ ದೂರುದಾರರು ಆರೋಪಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸದಿದ್ದಾಗ ದಾವೆ ಹೂಡಿದ್ದರು.

ಬೆಂಗಳೂರು ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ, 4 ಲಕ್ಷ ರೂ. ದಂಡ ವಿಧಿಸಿತ್ತು. 3.95 ಲಕ್ಷ ರೂ. ಪರಿಹಾರವನ್ನಾಗಿ ಪಾವತಿಸಲು ನಿರ್ದೇಶಿಸಿತ್ತು. ಐದು ಸಾವಿರ ರು. ಸರಕಾರಕ್ಕೆ ದಂಡವನ್ನಾಗಿ ಪಾವತಿಸಲು ಸೂಚನೆ ನೀಡಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.