30/06/2026

Law Guide Kannada

Online Guide

ಫುಟ್ ಪಾತ್ ನಲ್ಲಿ ನಡೆಯುವುದು ‘ಮೂಲಭೂತ ಹಕ್ಕು’: ಈ ಹಕ್ಕಿಗೆ ಆದ್ಯತೆ ನೀಡಬೇಕು – ಸುಪ್ರೀಂ ನಿರ್ದೇಶನ

ನವದೆಹಲಿ: ಪುಟ್ ಪಾತ್ ನಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು.ಆದರೆ ‘ನಡೆಯುವ ಹಕ್ಕನ್ನು ಆಧುನಿಕ ಸಮಾಜದಲ್ಲಿ ವ್ಯವಸ್ಥಿತವಾಗಿ ಕಿತ್ತುಕೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್ ಗಂಭೀರವಾಗಿ ಆತಂಕ ವ್ಯಕ್ತಪಡಿಸಿದೆ.

“ಮುನಿಯಾರ್ ಇಲ್ಯಾಸ್ ಆಲಿಯಾಸ್ ಶೇಕ್ ರಿಯಾಜ್ ವಿರುದ್ಧ ಪಿ. ಅಯ್ಯಪ್ಪನ್ ಮತ್ತಿತರರು” ಪ್ರಕರಣದಲ್ಲಿ (2026 INSC 647) ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅತುಲ್ ಎಸ್. ಚಂದೂರ್ಕರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ರೀತಿ ಕಳವಳ ವ್ಯಕ್ತಪಡಿಸಿದೆ.

ಫುಟ್ ಪಾತ್ ಗೆ ಮೀಸಲಿಟ್ಟ ಜಾಗದಲ್ಲಿ ನಡೆದಾಡುವುದು ಸಂವಿಧಾನಿಕ ಹಕ್ಕು, ರಸ್ತೆಯಲ್ಲಿ ಮೋಟಾರ್ ವಾಹನಗಳ ಸಂಚಾರಕ್ಕಿಂತಲೂ ಈ ಹಕ್ಕಿಗೆ ಆದ್ಯತೆ ನೀಡಬೇಕು ಎಂದಿರುವ ನ್ಯಾಯಪೀಠವು ರಸ್ತೆಗಳ ಇಕ್ಕೆಲಗಳ ಪಾದಚಾರಿ ಮಾರ್ಗ ಮತ್ತು ರಸ್ತೆ, ದಾಟುವ ಝೀಬ್ರಾ ಕ್ರಾಸಿಂಗ್ ಮತ್ತು ಅದರ ಮಹತ್ವದ ಬಗ್ಗೆ ಇಡೀ ದೇಶದ ಪೌರಾಡಳಿತಕ್ಕೆ ನಿರ್ದೇಶನ ನೀಡಿದೆ.

1988ರ ಮೋಟಾರು ವಾಹನಗಳ ಕಾಯ್ದೆಯಲ್ಲಿ ನಡೆಯುವ ಹಕ್ಕು ಮೂಲಭೂತ ಹಕ್ಕನ್ನಾಗಿ ಗುರುತಿಸಲಾಗಿಲ್ಲ. ಮೋಟಾರು ವಾಹನ ಕಾಯ್ದೆಯಲ್ಲಿ ಇದೊಂದು ಕೊರತೆಯಾಗಿದೆ. ಹಲವು ವಿಧಗಳಲ್ಲಿ ಪಾದಚಾರಿಗಳ ಅಮೂಲ್ಯ ಹಕ್ಕುಗಳನ್ನು ಈ ಮೂಲಕ ದುರ್ಬಲಗೊಳಿಸಿದೆ. ರಸ್ತೆಗಳ ಇಕ್ಕೆಲಗಳಲ್ಲಿ ನಾಗರಿಕರಿಗೆ ಸುರಕ್ಷತೆಯಿಂದ ನಡೆಯುವ ವಾತಾವರಣ ನಿರ್ಮಿಸಬೇಕು. ಇದು ಪೌರಾಡಳಿತ/ನಗರಾಡಳಿತದ ಕನಿಷ್ಠಾತಿ ಕನಿಷ್ಠ ಕರ್ತವ್ಯವಲ್ಲವೇ? ಎಂದು ನ್ಯಾಯಪೀಠವು ಪ್ರಶ್ನೆ ಮಾಡಿದೆ.

2012ರಲ್ಲಿ “ಎಸ್. ರಾಜಸೀಕರನ್ ವಿರುದ್ಧ ಭಾರತ ಸರ್ಕಾರ” ಪ್ರಕರಣದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಪೌರಾಡಳಿತಗಳು ರಸ್ತೆಗಳನ್ನು ನಿರ್ಮಿಸುವಲ್ಲೇ ಮಗ್ನವಾಗಿವೆ. ಆದರೆ, ಆ ರಸ್ತೆಗಳ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಎಂದು ಏಕೆ ಯೋಚಿಸುತ್ತಿಲ್ಲ. ಪುಟ್ ಪಾತ್ ನಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು. ವಾಹನ ಬಳಕೆ ಹಕ್ಕಿಗಿಂತ ಕಾಲ್ನಡಿಗೆಯ ಹಕ್ಕಿಗೆ ಹೆಚ್ಚಿನ ಆದ್ಯತೆ ಎಂದು ಮತ್ತೆ ಮತ್ತೆ ನೆನಪಿಸಿರುವ . 19(1)(a), 19(1)(b), 19(1)(a) ಮತ್ತು 21ನೇ ವಿಧಿಯ ಪಾದನಡಿಗೆಯ ಪ್ರಾಥಮಿಕ ಹಕ್ಕನ್ನು ಸಂವಿಧಾನ ಪ್ರಜೆಗಳಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ವಾಹನಗಳು ಆವಿಷ್ಕಾರಗೊಳ್ಳುವ ಮೊದಲೇ ಮನುಷ್ಯರು ಈ ಭೂಮಿಯ ಮೇಲೆ ನಡೆದಾಡುತ್ತಿದ್ದರು. ಗುರುತಿಸಲಾದ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಮೂಲಭೂತ ಹಕ್ಕು. ರಸ್ತೆ ಬದಿಯಲ್ಲಿ ಸುರಕ್ಷಿತ ಫುಟ್ ಬಾತ್ ಖಾತರಿಪಡಿಸುವುದು ಆಡಳಿತದ ಪ್ರಾಧಮಿಕ ಜವಾಬ್ದಾರಿ. ನಗರಾಡಳಿತವು ಮೋಟಾರು ಸಾರಿಗೆಗೆ ಹೇಗೆ ಆದ್ಯತೆ ನೀಡುತ್ತದೆಯೋ, ಅದೇ ರೀತಿ ಪಾದಚಾರಿ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಮುಂದಾಗಬೇಕು. ರಸ್ತೆ ಅಸ್ತಿತ್ವದಲ್ಲಿ ಇದ್ದರೆ ಅದರ ಎರಡೂ ಬದಿಗಳಲ್ಲಿ ಸ್ಥಳ ನಿಗದಿಪಡಿಸಿ ಪಾದಚಾರಿ ಮಾರ್ಗ ನಿರ್ಮಿಸುವುದು ಮತ್ತು ನಿರ್ವಹಿಸುವುದು ಆ ರಸ್ತೆಯ ವ್ಯಾಪ್ತಿಗೊಳಪಟ್ಟ ನಗರಾಭಿವೃದ್ಧಿ ಅಧಿಕಾರಿಗಳು, ಪಾಲಿಕೆಗಳು, ಪುರಸಭೆಗಳು ಅಥವಾ ಪ್ರತಿ ಪಂಚಾಯತ್ನ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಉತ್ತಮ ಪಾದಚಾರಿ ಮಾರ್ಗ ಹೊಂದುವುದು ಮೂಲಭೂತ ಹಕ್ಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ತೀರ್ಪು, ರಸ್ತೆ, ಮತ್ತು ಸಂಚಾರದ ಪರಿಕಲ್ಪನೆಯನ್ನು ವಿಸ್ತರಿಸುವಂತಿದೆ. ರಸ್ತೆಯ ಬದಿಯಲ್ಲಿ ಸುರಕ್ಷಿತವಾಗಿ ನಡೆಯುವ ಹಕ್ಕುಗಳನ್ನು ಜತನದಿಂದ ಕಾಪಾಡಲು ದೇಶವ್ಯಾಪಿಯಾಗಿ ಯೋಜನೆ, ಜಾರಿ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ನ್ಯಾಯಪೀಠ ಕರೆ ನೀಡಿದೆ. ಅಲ್ಲದೆ, ಈ ತೀರ್ಪಿನ ಅನುಷ್ಠಾನದ ಬಗ್ಗೆ ಹೌಸಿಂಗ್ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳಿಗೆ ಈ ತೀರ್ಪಿನ ಪ್ರತಿಯನ್ನು ಕಳಿಸಿಕೊಡಲು ರಿಜಿಸ್ತಿಗೆ ನಿರ್ದೇಶನವನ್ನು ನೀಡಿದೆ.

ಹಾಗೆಯೇ, ಫುಟ್ಪಾತ್ ನಲ್ಲಿ ಸುರಕ್ಷಿತ ಕಾಲ್ನಡಿಗೆಯ ಮಹತ್ವ ಮತ್ತು ಸಂವಿಧಾನಿಕ ಹಕ್ಕಿನ ರಕ್ಷಣೆ ಕುರಿತ ಕಾನೂನು ರಚನೆ ಕುರಿತು ಅಧ್ಯಯನ ನಡೆಸಲು ಅನುಕೂಲವಾಗುವಂತೆ ಇನ್ನೊಂದು ಪ್ರತಿಯನ್ನು ರಾಷ್ಟ್ರೀಯ ಕಾನೂನು ಆಯೋಗಕ್ಕೂ ಕಳುಹಿಸಿಕೊಡಲು ರಿಜಿಸ್ಟ್ರಿಗೆ ಸೂಚಿಸಿದೆ. ಸುರಕ್ಷಿತ ನಡಿಗೆಯು ಮನುಷ್ಯನ ಜೀವನದಲ್ಲಿ ಅತಿ ಸರಳ ಚಟುವಟಿಕೆಯಾಗಿದೆ ಹಾಗೂ ಅದು ಗೌರವಯುತ ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ವತಂತ್ರವಾಗಿ ನಡೆಯುವುದು ಒಂದು ಮೂಲಭೂತ ಹಕ್ಕಾಗಿದ್ದು, ಸುರಕ್ಷಿತ ನಡಿಗೆ ಖಚಿತಗೊಂಡಾಗ ಮಾತ್ರ ಆ ಹಕ್ಕು ಅರ್ಥಪೂರ್ಣವಾಗುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.